'ಆರೋಪಿ ಮಾನಸಿಕವಾಗಿ ನೊಂದಿದ್ದ ಅಂತ ವೈದ್ಯರು ಹೇಳ್ಬೇಕು ಬೊಮ್ಮಾಯಿ ಅಲ್ಲ'

By Suvarna NewsFirst Published Jan 23, 2020, 12:50 PM IST
Highlights

ಆರೋಪಿ ಯಾವುದೇ ಧರ್ಮಜಾತಿಗೆ ಸೇರಿದ್ರೂ ದೇಶದ್ರೋಹಿನೇ| ಈ ವಿಚಾರದಲ್ಲಿ ಯಾವುದೇ ಪಕ್ಷದವರು ಸಮರ್ಥಿಸಿಕೊಳ್ಳಬಾರದು| ಪೊಲೀಸ್ ತನಿಖೆ ನಡೆಯುವಾಗ ಬೊಮ್ಮಾಯಿ ಈ ರೀತಿ ಹೇಳಿಕೆ ಕೊಡಬಾರದು| ಮಾನಸಿಕವಾಗಿ ಸರಿಯಿಲ್ಲ ಅಂತ ವೈದ್ಯರು ಹೇಳಬೇಕು ವಿನಃ ಬೊಮ್ಮಾಯಿ ಅಲ್ಲ|

ಬೆಳಗಾವಿ(ಜ.23): ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಟ್ಟಿದ್ದ ಆರೋಪಿ ಆದಿತ್ಯ ರಾವ್‌ ಸಿಕ್ಕಿಹಾಕಿಕೊಂಡಿದ್ದಾನೆ. ತನಿಖೆಯಾದ ಬಳಿಕ ಸತ್ಯಾಂಶ ಹೊರಬರಬೇಕಿದೆ. ತನಿಖೆಗೂ ಮೊದಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆರೋಪಿ ಆದಿತ್ಯ ರಾವ್‌ ಮಾನಸಿಕವಾಗಿ ನೊಂದಿದ್ದ ಎಂದು ಹೇಳುವುದು ಸರಿಯಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 

ಗುರುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರೋಪಿ ಸಿಗುವ ಮೊದಲು ಯಾರೋ ಇರಬಹುದು ಅಂತ ಪ್ರಕರಣವನ್ನ ದೊಡ್ಡ ಮಟ್ಟಿಗೆ ಒಯ್ದಿದ್ದರು. ಈಗ ತಮ್ಮವರೇ ಇರುವುದರಿಂದ ಬೇರೆ ರೀತಿ ಟ್ವಿಸ್ಟ್ ಮಾಡುತ್ತಿದ್ದಾರೆ. ಯಾವುದೇ ಧರ್ಮಜಾತಿಗೆ ಸೇರಿದ್ರೂ ದೇಶದ್ರೋಹಿನೇ, ಈ ವಿಚಾರದಲ್ಲಿ ಯಾವುದೇ ಪಕ್ಷದವರು ಸಮರ್ಥಿಸಿಕೊಳ್ಳಬಾರದು. ಪೊಲೀಸ್ ತನಿಖೆ ನಡೆಯುವಾಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ರೀತಿ ಹೇಳಿಕೆ ಕೊಡಬಾರದು. ಮಾನಸಿಕವಾಗಿ ಸರಿಯಿಲ್ಲ ಅಂತ ವೈದ್ಯರು ಹೇಳಬೇಕು ವಿನಃ ಇವರಲ್ಲ ಎಂದು ಹೇಳಿದ್ದಾರೆ. 

ಭಯೋತ್ಪಾದನೆ ಮೂಲಕ ಶಾಂತಿಗೆ ಭಂಗ ತರುವಂತಹ ಕೃತ್ಯ: ಬೊಮ್ಮಾಯಿ

ಆರೋಪಿ ಅವರಲ್ಲೇ ಸಹ ಕಾರ್ಯಕರ್ತನಾಗಿ ಕೆಲಸ ಮಾಡಿದ್ದರಿಂದ ಬೇರೆ ಬೇರೆ ರೀತಿಯಲ್ಲಿ ಸಮರ್ಥನೆ ಪ್ರಯತ್ನ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಯಾವುದೇ ಪಕ್ಷ ಇದ್ದರೂ ರಾಜಕೀಯ ಮಾಡಬಾರದು. ದೇಶದ ಭದ್ರತೆ ಬಂದಾಗ ಎಲ್ಲರೂ ಒಂದೇ ಎಲ್ಲರೂ ವಿರೋಧವಾಗಿ ನಿಲ್ಲಬೇಕು ಎಂದಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ದೆಹಲಿ ಚುನಾವಣೆಯ ನಂತರ ಅಧ್ಯಕ್ಷ ಸ್ಥಾನ ಆಯ್ಕೆಪ್ರಕ್ರಿಯೆ ನಡೆಯಲಿದೆ. ಯಾವ ರೀತಿ ಬ್ಯಾಲೆನ್ಸ್ ಮಾಡಬೇಕೆಂಬ ಕಾರಣಕ್ಕೆ ವಿಳಂಬವಾಗಿದೆ. ಅಧ್ಯಕ್ಷ ಸ್ಥಾನ ಹಂಚಿಕೆ ಬೇಗ ಮಾಡಿ ಎಂದು ಒತ್ತಾಯ ಮಾಡಿದ್ದೇವೆ. ಈಗ ಇಬ್ಬರಿದ್ದು ನಾಲ್ಕು ಜನ ಕಾರ್ಯಾಧ್ಯಕ್ಷರನ್ನ ಮಾಡಿ ಅಂತ ಹೇಳುತ್ತಿದ್ದೇವೆ. ನಾವು ನಾಲ್ಕು ಕಾರ್ಯಾಧ್ಯಕ್ಷರನ್ನ ಮಾಡಿ ಅಂತ ಹೇಳಿದ್ದೇವೆ, ಯಾವುದೇ ಪೋಸ್ಟ್ ಹಂಚಿಕೆ ಸಂದರ್ಭದಲ್ಲಿ ಈ ರೀತಿ ಗದ್ದಲವಾಗುವುದು ಸಹಜ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಸಿಎಲ್‌ಪಿ ನಾಯಕರನ್ನಾಗಿ ಮಾಡುವಾಗಲೂ ಗುಂಪುಗಳಿದ್ದವು. ಯಾರೇ ಅಧ್ಯಕ್ಷರಾದರು ಎಲ್ಲರೂ ಕೂಡಿಯೇ ಕೆಲಸ ಮಾಡಲಾಗುತ್ತದೆ. ನಾನು ಅಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿಲ್ಲ, ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದ್ದೇನೆ. ದಲಿತ ನಾಯಕರಿಗೆ ಅಧ್ಯಕ್ಷ ಸ್ಥಾನ ಕೊಡಿ ಅಂತ ಕೇಳುವುದು ತಪ್ಪಲ್ಲ. ನಾಲ್ಕು ಜನ ಕಾರ್ಯಾಧ್ಯಕ್ಷ ಕೊಟ್ಟರೂ ಅಧ್ಯಕ್ಷರ ಅಧೀನದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. 
 

click me!