Shivamogga: ಗಣಿಗಾರಿಕೆ ವಿರುದ್ಧ ಶಾಸಕ ಕುಮಾರ ಬಂಗಾರಪ್ಪಗೆ ಮಹಿಳೆಯರಿಂದ ತರಾ​ಟೆ

By Kannadaprabha News  |  First Published Jan 18, 2023, 11:40 AM IST

ಬಸ್ತಿಕೊಪ್ಪದಲ್ಲಿ ಸುಮಾರು .75 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಮಹಿಳೆಯರು ಕುಮಾರ ಬಂಗಾರಪ್ಪನವರ ಎದುರು ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ ಮುಗಿಬಿದ್ದರು.


ಸೊರಬ (ಜ.18) : ಗಣಿ ಧೂಳು, ಕಲ್ಲುಗಳ ಸಿಡಿತ ಮತ್ತು ಶಬ್ದ ಮಾಲಿನ್ಯದಿಂದ ಬದುಕೇ ದುಸ್ತರವಾಗಿದೆ. ಚುನಾವಣಾ ಕಾಲದಲ್ಲಿ ಮಾತ್ರ ರಾಜಕಾರಣಿಗಳಿಗೆ ಜನರು ನೆನಪಿಗೆ ಬರುತ್ತಾರೆ. ಮನವಿ ನೀಡಿದರೂ ಗ್ರಾಮಸ್ಥರ ಯೋಗಕ್ಷೇಮ ವಿಚಾರಿಸದ ತಾವು ಈಗೇಕೆ ಗ್ರಾಮದೊಳಗೆ ಕಾಲಿಟ್ಟಿದ್ದೀರಿ ಎಂದು ತಾಲ್ಲೂಕಿನ ಬಸ್ತಿಕೊಪ್ಪ ಗ್ರಾಮದ ಮಹಿಳೆಯರು ಶಾಸಕ ಕುಮಾರ ಬಂಗಾರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.

ಬಸ್ತಿಕೊಪ್ಪದಲ್ಲಿ ಸುಮಾರು .75 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಮಹಿಳೆಯರು ಕುಮಾರ ಬಂಗಾರಪ್ಪನವರ ಎದುರು ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ ಮುಗಿಬಿದ್ದರು.

Tap to resize

Latest Videos

ಕುಮಾರ ಬಂಗಾರಪ್ಪರನ್ನ ಗಡಿಪಾರು ಮಾಡುವುದೇ ನಮೋ ವೇದಿಕೆ ಉದ್ದೇಶ: ಪಾಣಿ ರಾಜಪ್ಪ

ಪ್ರತಿನಿತ್ಯ ಬಂಡೆ ಸಿಡಿಸಲು ಬಳಸುವ ಸ್ಫೋಟಕ ಮತ್ತು ರಾಸಾಯನಿಕ ಹೊಗೆಗೆ ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಿದೆ. ಕಲ್ಲುಪುಡಿ ಧೂಳಿನಿಂದ ಗ್ರಾಮಸ್ಥರು ಕೆಮ್ಮು- ಅಸ್ತಮಾದಂತಹ ಕಾಯಿಲೆಗಳಿಂದ ನರಳುತ್ತಿದ್ದಾರೆ. ಸ್ಫೋಟಕದ ಸದ್ದಿಗೆ ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಭಯಭೀತರಾಗಿರುವ ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ಜೀವನ ಸಾಗಿಸುವಂತಾಗಿದೆ. ಗಣಿ ಧೂಳಿನಿಂದ ಕೃಷಿಗೆ ಹಿನ್ನೆಡೆಯಾಗಿದೆ. ಅಲ್ಲದೇ ಶುದ್ಧ ಕುಡಿಯುವ ನೀರಿಗೂ ಹಾಹಾಕಾರ ಪಡುವಂತಾಗಿದೆ. ವಿಷಪೂರಿತ ಹಾವುಗಳು ಊರಿಗೆ ಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಗಣಿಗಾರಿಕೆಯ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚೆಸಲಾಗುವುದು. ಗ್ರಾಮ ಮತ್ತು ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಮಗೆ ಮನವಿ ನೀಡುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಉಮೇಶ, ರಘುಪತಿ, ಕಮಲಾಕರ, ರಮೇಶ, ಶಶಿಧರ, ಚಿದಾನಂದ, ಲಕ್ಷ್ಮೇ, ಸವಿತಾ, ಕಲಾವತಿ ಇದ್ದರು.

ಕಳೆದ ಒಂದು ವರ್ಷದಿಂದ ಹಲವಾರು ಬಾರಿ ಶಾಸಕರ ಮನೆಗೆ ತೆರಳಿ ಗಣಿಗಾರಿಕೆಯಿಂದ ಗ್ರಾಮಕ್ಕೆ ಮತ್ತು ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗೆ ಗಮನಹರಿಸಬೇಕು ಮತ್ತು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ರೀತಿಯ ಕ್ರಮತೆಗೆದುಕೊಂಡಿಲ್ಲ. ಅಲ್ಲದೇ ಗ್ರಾಮಸ್ಥರ ಮನವಿಗೆ ಕಿಂಚಿತ್ತೂ ಬೆಲೆ ನೀಡಿಲ್ಲ. ಈಗ ಗ್ರಾಮಕ್ಕೆ ಬಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ

- ಮಂಜುನಾಥ ಬಡಗೇರ್‌, ಬಸ್ತಿಕೊಪ್ಪ ಗ್ರಾಮಸ್ಥ

ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ಮಯ ಎಂಬ ಹೇಳಿಕೆ ಸರಿಯಲ್ಲ: ಕುಮಾರ ಬಂಗಾರಪ್ಪ 

ಗಣಿಗಾರಿಕೆ ಸ್ಫೋಟದ ಕೆಮಿಕಲ್‌ ಧೂಳಿನಿಂದ ಸಣ್ಣ ಮಕ್ಕಳು, ಗ್ರಾಮದ ವಯೋವೃದ್ಧರು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮಕ್ಕಳ ಬೆಳವಣಿಗೆ ಕುಂಟಿತವಾಗಿದೆ, ಸ್ತ್ರೀಯರಲ್ಲಿ ಗರ್ಭಪಾತ ಕಂಡು ಬಂದಿದೆ. ಬಡ ಜನರ ಜೀವಕ್ಕಿಂತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಗಣಿಗಾರಿಕೆ ಮುಖ್ಯವಾಗಿದೆ. ಚುನಾವಣೆ ಸಮಯ ಹತ್ತಿರಾಗುತ್ತಿದ್ದಂತೆ ಓಟು ಪಡೆಯಲು ಗ್ರಾಮಕ್ಕೆ ಬಂದಿದ್ದಾರೆ. ಪ್ರತಿನಿತ್ಯ ಗಣಿದೂಳು ಮತ್ತು ಕಲ್ಲು ಸಿಡಿತದಿಂದ ಸಾವು ಬದುಕಿನ ನಡುವೆ ಬದುಕುತ್ತಿದ್ದೇವೆ.

- ಜಯಮ್ಮ, ಬಸ್ತಿಕೊಪ್ಪ ಗ್ರಾಮದ ಮಹಿಳೆ.

click me!