ಮೈಸೂರು (ಮೇ.30): ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದ ವರಕೂಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪುರುಷ ಹಾಗೂ ಮಹಿಳಾ ಕೋವಿಡ್ ಸೋಂಕಿತರ ಬ್ಲಾಕ್ ಗಳಿಗೆ ಭೇಟಿ ನೀಡಿ ಅವರ ಜೊತೆ ಚರ್ಚೆ ನಡೆಸಿದ ಸಚಿವರು, ಔಷಧ ಊಟೋಪಚಾರ ಸೇರಿದಂತೆ ಚಿಕಿತ್ಸೆಯ ವ್ಯವಸ್ಥೆಗಳ ಬಗ್ಗೆ ಖುದ್ದು ಸೋಂಕಿತರಿಂದ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ, ಯಾವುದೇ ಕಾರಣಕ್ಕೂ ಭಯಪಡುವುದು ಬೇಡ. ಧೈರ್ಯದಿಂದ ಎದುರಿಸಿದರೆ ರೋಗವನ್ನು ಅರ್ಧವಾಸಿ ಮಾಡಿಕೊಂಡಂತೆ ಆಗಲಿದೆ. ಸರ್ಕಾರ ಸಹ ನಿಮ್ಮ ಜತೆಗಿದೆ ಎಂಬ ಅಭಯವನ್ನು ಸಚಿವರು ನೀಡಿದರು.
undefined
ಮೈಸೂರಿನ 35 ಗ್ರಾಮಗಳನ್ನು ಮುಟ್ಟದ ಕೊರೋನಾ : ಮುನ್ನೆಚ್ಚರಿಕೆಯೇ ಕಾರಣ .
ಇದೇ ವೇಳೆ ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಆರೋಗ್ಯಾಧಿಕಾರಿಗಳಿಗೆ ಸಚಿವರಾದ ಸೋಮಶೇಖರ್ ಅವರು ಸೂಚಿಸಿದರು. ಅಲ್ಲದೆ ಯಾವುದೇ ರೀತಿಯ ಕೊರತೆಗಳಿದ್ದರೆ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಸೋಮಶೇಖರ್ ಅವರು, ಆಸ್ಪತ್ರೆಯಲ್ಲಿ ನಿರ್ವಹಣೆ ಬಹಳ ಅಚ್ಚುಕಟ್ಟಾಗಿದೆ. ಪುರುಷರು ಮಹಿಳೆಯರು ಸೇರಿದಂತೆ ಒಟ್ಟು 4 ಕಡೆ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಕಡೆಯೂ ಖುದ್ದು ಭೇಟಿ ಕೊಟ್ಟು ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಊಟದ ವ್ಯವಸ್ಥೆ, ಚಿಕಿತ್ಸೆ ವ್ಯವಸ್ಥೆ ಬಗ್ಗೆ ಕೇಳಿದ್ದೇನೆ. ಅವರಿಂದಲೂ ಸಹ ಉತ್ತಮವಾದ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು.
ಮನೋರಂಜನೆಗೂ ಕೊರತೆ ಇಲ್ಲ: ಎಸ್ ಟಿ ಎಸ್
ಔಷಧ ವಿತರಣೆ, ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ನೋಡಲ್ ಅಧಿಕಾರಿಗಳು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ಇನ್ನು ಸಂಜೆ ವೇಳೆ ವಾಯುವಿಹಾರ ಮಾಡುವುದು, ಡಾನ್ಸ್ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನರಂಜನಾತ್ಮಕವಾಗಿ ಸಹ ಇಲ್ಲಿ ಸದಾ ಚಟುವಟಿಕೆಯಿಂದ ಇದ್ದಾರೆ. ಸೋಂಕಿತ ಮಹಿಳೆಯರು ತಾವು ಖುಷಿಯಿಂದ ಇರುವುದಾಗಿ ಹೇಳಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ಸಂಸದರು, ಆಕ್ಸಿಜನ್ ಮತ್ತು ಔಷಧ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಪ್ರತಾಪ್ ಸಿಂಹ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.