ಧಾರವಾಡ: ಕೇವಲ 29 ದಿನದಲ್ಲಿ 238 ಕೊರೋನಾ ಸೋಂಕಿತರ ಸಾವು..!

By Kannadaprabha News  |  First Published May 30, 2021, 10:03 AM IST

* ಮುಂದುವರಿದ ಕೋವಿಡ್‌ ಅಟ್ಟಹಾಸ
* ಕಳೆದ ತಿಂಗಳು ಬರೀ 77 ಸಾವು
* ಸಾವಿನ ಪ್ರಮಾಣ ಹೆಚ್ಚುತ್ತಿರುವುದರಿಂದ ನಾಗರಿಕರಲ್ಲಿ ಹೆಚ್ಚಿದ ಆತಂಕ 


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.30):  ಧಾರವಾಡ ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆ ಅಕ್ಷರಶಃ ಅಟ್ಟಹಾಸ ಮೆರೆಯುತ್ತಿದೆ. ಮೇ ತಿಂಗಳಿನ ಬರೀ 29 ದಿನದಲ್ಲಿ ಬರೋಬ್ಬರಿ 238 ಜನರನ್ನು ಬಲಿ ಪಡೆದಿದೆ! ಡೆತ್‌ರೇಟ್‌ ಶೇ.1 ರಷ್ಟಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದರೂ, ದಿನೇ ದಿನೇ ಹೆಚ್ಚುತ್ತಿರುವ ಸಾವಿನ ಪ್ರಮಾಣ ನಾಗರಿಕರನ್ನು ತಲ್ಲಣಗೊಳಿಸಿದೆ.

Latest Videos

undefined

ಹೌದು! ಸರ್ಕಾರ ನೈಟ್‌ ಕರ್ಫ್ಯೂ, ಜನತಾ ಕರ್ಫ್ಯೂ, ಸೆಮಿಲಾಕ್‌ಡೌನ್‌, ಕಠಿಣ ಲಾಕ್‌ಡೌನ್‌ ಘೋಷಿಸಿ ಕೊರೋನಾ ನಿಯಂತ್ರಣಕ್ಕೆ ನಿರಂತರ ಪ್ರಯತ್ನಿಸುತ್ತಲೇ ಇದೆ. ಆದರೂ ಜಿಲ್ಲೆಯಲ್ಲಿ ಮಾತ್ರ ಸಾವಿನ ಪ್ರಮಾಣ ಕಡಿಮೆಯಾಗುತ್ತಲೇ ಇಲ್ಲ. ನಿತ್ಯ ಕೊರೋನಾ ಮರಣದ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದೆ.

ಎಷ್ಟೆಷ್ಟು ಸಾವು:

ಏಪ್ರಿಲ್‌ ತಿಂಗಳಲ್ಲಿ 7460 ಜನರಿಗೆ ಸೋಂಕು ದೃಢಪಟ್ಟಿತ್ತು. ಅದರಲ್ಲಿ 3963 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದರು. ಇನ್ನು 77 ಜನ ಸಾವಿಗೀಡಾಗಿದ್ದರು. ಆದರೆ ಮೇ ತಿಂಗಳಲ್ಲಿ ಇದು 3 ಪಟ್ಟು ಹೆಚ್ಚಳವಾಗಿದೆ. 24465 ಜನರಿಗೆ ಕೊರೋನಾ ದೃಢಪಟ್ಟಿದ್ದರೆ, ಅದರಲ್ಲಿ ಬರೋಬ್ಬರಿ 238 ಜನ ಸಾವಿಗೀಡಾಗಿದ್ದಾರೆ.

ಬಿಜೆಪಿಯಲ್ಲಿ ಯಡಿಯೂರಪ್ಪಗೆ ಪರ್ಯಾಯ ನಾಯಕರಿಲ್ಲ: ಸಿದ್ದರಾಮಯ್ಯ

ಇದರಲ್ಲಿ ಹುಬ್ಬಳ್ಳಿಯಲ್ಲೇ ಅತಿ ಹೆಚ್ಚು. ಅಂದರೆ 110 ಜನ ಸೋಂಕಿತರು ಮೃತಪಟ್ಟಿದ್ದರೆ, ಧಾರವಾಡ- 91, ಕುಂದಗೋಳ-9, ನವಲಗುಂದ-10, ಕಲಘಟಗಿ-12 ಜನ ಮೃತಪಟ್ಟಿದ್ದಾರೆ. ಇದಲ್ಲದೇ 6 ಜನ ಸೋಂಕಿತರು ಬೇರೆ ಬೇರೆ ಜಿಲ್ಲೆಯವರು ಸಹ ಇಲ್ಲಿಯೇ ಮೃತಪಟ್ಟಿದ್ದಾರೆ. ಈ ಆರು ಜನರಲ್ಲಿ ಹಾವೇರಿ ಜಿಲ್ಲೆಯವರೇ ಮೂವರಿದ್ದರೆ, ವಿಜಯಪುರ, ಬೆಂಗಳೂರು, ಬೆಳಗಾವಿ ಜಿಲ್ಲೆಯ ತಲಾ ಒಬ್ಬರು.

ಚೇತರಿಕೆಯಲ್ಲೂ ಹೆಚ್ಚಳ:

ಇನ್ನು ಮೇ ತಿಂಗಳಲ್ಲಿ ಬಿಡುಗಡೆಗೊಂಡವರ ಪ್ರಮಾಣವೂ ಹೆಚ್ಚಿದೆ. 24465 ಜನರಿಗೆ ಸೋಂಕು ದೃಢಪಟ್ಟಿದ್ದರೆ, 21205 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ 6772 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 558 ಕೊರೋನಾ ಸೋಂಕಿತರಿದ್ದಾರೆ. ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದು ಸಮಾಧಾನಕರ ಸಂಗತಿ.

ಆತಂಕ ಬೇಡ:

ಜಿಲ್ಲೆಯಲ್ಲಿ ಶೇ. 1ರಷ್ಟು ಡೆತ್‌ ರೇಟ್‌ ಇತ್ತು. ಮೊದಲನೆಯ ಅಲೆಗೆ ಹೋಲಿಸಿದರೆ ಎರಡನೆಯ ಅಲೆಯಲ್ಲಿ ಸಾವಿನ ಪ್ರಮಾಣ ಕೊಂಚ ಹೆಚ್ಚಳವಾಗಿದೆ. ಆದರೂ ಆತಂಕಪಡುವ ಅಗತ್ಯವಿಲ್ಲ. ಕೊರೋನಾ ಸಣ್ಣದಾಗಿ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಈಗ ಮೃತಪಡುತ್ತಿರುವವರು ಕಳೆದ 12-15 ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿರುವವರು.

ಲಾಕ್‌ಡೌನ್‌ ಮಾಡಿದ ಮೇಲೆ ಅಷ್ಟೊಂದು ಪ್ರಮಾಣ ಹೆಚ್ಚಳವಾಗುತ್ತಿಲ್ಲ. ಜೊತೆಗೆ ಮೊದಲು ಕೊರೋನಾ ಪಾಸಿಟಿವಿಟಿ ಶೇ. 33ಕ್ಕೂ ಅಧಿಕವಿತ್ತು. ಅದೀಗ ಶೇ. 16ಕ್ಕೆ ಇಳಿದಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಇನ್ನಷ್ಟು ನಿಯಂತ್ರಣವಾಗಿ ಜನಜೀವನ ಸಹಜ ಸ್ಥಿತಿಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಜಿಲ್ಲಾಡಳಿತ ಅಭಯ ಸೂಚಿಸುತ್ತಿದೆ. ಆದರೂ ದಿನೇ ದಿನೇ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕ ಉಂಟುಮಾಡಿದೆ.

ಜಿಲ್ಲೆಯಲ್ಲಿ ಕೊರೋನಾ ಡೆತ್‌ ರೇಟ್‌ ಶೇ. 1ರಷ್ಟಿದೆ. ಇನ್ನು ಕೊರೋನಾ ಪಾಸಿಟಿವಿಟಿ ದರ ಮೊದಲು ಶೇ. 33 ರಿಂದ ಶೇ. 16ಕ್ಕೆ ಇಳಿದಿದೆ. ಕಠಿಣ ಲಾಕ್‌ಡೌನ್‌ದಿಂದ ನಿಯಂತ್ರಣವಾಗುತ್ತಿದೆ. ಆತಂಕಪಡುವ ಅಗತ್ಯವಿಲ್ಲ. ಸಾವಿನ ಸಂಖ್ಯೆಯೂ ಇಳಿಕೆಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ. 

ಲಾಕ್‌ಡೌನ್‌ ಕಠಿಣ ಕ್ರಮ ಕೈಗೊಂಡಿರುವುದರಿಂದ ನಿಯಂತ್ರಣವಾಗುತ್ತಿದೆ. ಈಗ ಮೃತಪಡುತ್ತಿರುವವರು 12-15 ದಿನಗಳ ಹಿಂದೆ ದಾಖಲಾದವರು. ಇದೀಗ ಗುಣಮುಖ ಆಗುವವರ ಸಂಖ್ಯೆಯೂ ಹೆಚ್ಚಿದೆ. ಕೆಲವೇ ದಿನಗಳಲ್ಲಿ ನಿಯಂತ್ರಣಕ್ಕೆ ಬರಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!