ಬೇಡ್ತಿ-ವರದಾ ನದಿ‌ ಜೋಡಣೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ: ಸಚಿವ ಶಿವರಾಮ್ ಹೆಬ್ಬಾರ್

By Govindaraj SFirst Published Jul 12, 2022, 9:29 PM IST
Highlights

‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಬಗ್ಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಾನು ಮುಖ್ಯಮಂತ್ರಿ ಜತೆ ವಿಶೇಷ ಸಭೆ ನಡೆಸಿ, ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ, ಸೂಕ್ತವಾದ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು. 

ಹಾವೇರಿ (ಜು.12): ‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಬಗ್ಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಾನು ಮುಖ್ಯಮಂತ್ರಿ ಜತೆ ವಿಶೇಷ ಸಭೆ ನಡೆಸಿ, ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿ, ಸೂಕ್ತವಾದ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.  ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಉತ್ತರ ಕನ್ನಡ ಮತ್ತು ಹಾವೇರಿಯಲ್ಲಿ ಯೋಜನೆಯ ಪರ ಮತ್ತು ವಿರುದ್ಧ ಹೋರಾಟಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. 

ಪಶ್ಚಿಮ ಘಟ್ಟದ ಸಂರಕ್ಷಣೆ ಒಂದು ಕಡೆ, ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಬೇಕು ಎನ್ನುವುದು ಮತ್ತೊಂದು ಕಡೆಯ ವಾದವಾಗಿದೆ.  ಒಂದೆಡೆ ನಾನು ಯಲ್ಲಾಪುರ–ಮುಂಡಗೋಡ ಕ್ಷೇತ್ರದ ಶಾಸಕ. ಮತ್ತೊಂದೆಡೆ ಈ ಯೋಜನೆಯ ಫಲಾನುಭವಿ ಜಿಲ್ಲೆಯಾದ ಹಾವೇರಿಯ ಜಿಲ್ಲಾ ಉಸ್ತುವಾರಿ ಸಚಿವ. ಹೀಗಾಗಿ ಗೊಂದಲದಲ್ಲಿದ್ದೇನೆ’ ಎಂದು ಹೇಳಿದರು. ‘ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಳು ಮತ್ತು ಪರಿಸರ ಪ್ರೇಮಿಗಳು, ಯೋಜನೆ ಜಾರಿಯಾದರೆ ಪಶ್ಚಿಮ ಘಟ್ಟದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ‘ಡಿಪಿಆರ್‌ ರದ್ದತಿ ಸಭೆ’ ಆಯೋಜಿಸಿದ್ದರು. 

ಶಿಕ್ಷಣ ಇಲಾಖೆ ವಿರುದ್ಧವೇ ಬೀದಿಗಿಳಿದ ಸರ್ಕಾರಿ ಶಾಲೆಯ ಮಕ್ಕಳು!

ನಾನು ಆ ಮತ ಕ್ಷೇತ್ರದ ಜನಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಲೇಬೇಕಾದ ಅನಿವಾರ್ಯತೆ ಎದುರಾಯಿತು’ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ‘ಎರಡೂ ಜಿಲ್ಲೆಗಳಲ್ಲಿ ನಡೆದ ಪರ ಮತ್ತು ವಿರೋಧಿ ಸಭೆಗಳಲ್ಲಿ ಆ ಜಿಲ್ಲೆಗಳ ಮಠಾಧೀಶರು ಭಾಗವಹಿಸಿದ್ದಾರೆ. ಯಾವ ಗುರುಗಳಿಗೂ ಸ್ವಾರ್ಥ ಇಲ್ಲ. ಎಲ್ಲರೂ ಸಾಮಾಜಿಕ ಕಳಕಳಿಯಿಂದಲೇ ಮಾತನಾಡಿದ್ದಾರೆ. ಈ ಯೋಜನೆಯ ಬಗ್ಗೆ ಚರ್ಚೆ ಆರಂಭವಾಗಿದೆ. ನಾನು ವಿಜ್ಞಾನಿಯಲ್ಲ. ತಜ್ಞರು ನೀಡುವ ವೈಜ್ಞಾನಿಕ ವರದಿ ಆಧರಿಸಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟನೆ ನೀಡಿದರು.

ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಮತ್ತೆ ಮುನ್ನೆಲೆಗೆ: ಸುಮಾರು ಎರಡು ದಶಕಗಳಿಂದಲೂ ಚರ್ಚೆಯಲ್ಲಿರುವ ವರದಾ- ಬೇಡ್ತಿ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಈಗ ಆಸಕ್ತಿ ತೋರಿದ್ದು, ಯೋಜನೆ ಬಗ್ಗೆ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯೂಡಿಎ) ಸರ್ಕಾರಕ್ಕೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುವ ಭರವಸೆ ಮೂಡಿದೆ. ಅದೇ ಕಾಲಕ್ಕೆ ಬೇಡ್ತಿ ಕೊಳ್ಳ ಪ್ರದೇಶದ ಜನರಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೇಡ್ತಿ- ವರದಾ ನದಿ ಜೋಡಣೆಗೆ ಸರ್ಕಾರ ಮುಂದಾಗಿದೆ. 

ಸೋರುತ್ತಿರುವ ಸರ್ಕಾರಿ ಶಾಲಾ ಕಟ್ಟಡ: ಮಕ್ಕಳ ಗೋಳು ನೋಡಲಾಗದೇ ಶಾಲೆಯ ಛಾವಣಿ ಏರಿದ ಪೋಷಕರು

ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಜಿಲ್ಲೆಯಲ್ಲಿ ಹರಿದಿರುವ ವರದಾ ಮತ್ತು ಧರ್ಮಾ ನದಿ ಮೂಲಕ ಈ ಭಾಗದಲ್ಲಿ ಕುಡಿಯಲು ಮತ್ತು ನೀರಾವರಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಸುಮಾರು 20 ವರ್ಷಗಳಿಂದ ಈ ವಿಷಯ ಚರ್ಚೆಯಲ್ಲಿದ್ದರೂ ಉತ್ತರ ಕನ್ನಡ ಜಿಲ್ಲೆಯವರ ವಿರೋಧದಿಂದ ಸರ್ಕಾರವೂ ಯೋಜನೆ ಅನುಷ್ಠಾನಕ್ಕೆ ಮುಂದಾಗಿರಲಿಲ್ಲ. ಆದರೆ, ಈಗ ಎನ್‌ಡಬ್ಲ್ಯೂಡಿಎ ಸಂಸ್ಥೆಯು ಡಿಪಿಆರ್‌ ಸಿದ್ಧಪಡಿಸಿರುವುದು ಬಯಲುಸೀಮೆ ಭಾಗದ ಜನರಲ್ಲಿ ಆಶಾವಾದ ಹುಟ್ಟುಹಾಕಿದೆ. ಬೇಡ್ತಿ ಕೊಳ್ಳ ಪ್ರದೇಶದ ಜನರು ಈಗಾಗಲೇ ಹೋರಾಟಕ್ಕೆ ಸಜ್ಜಾಗಿದ್ದಾರೆ. ಯೋಜನೆ ಜಾರಿಗಾಗಿ ಈ ಭಾಗದ ಜನರ ಒತ್ತಾಯಕ್ಕಿಂತ ಉತ್ತರ ಕನ್ನಡದ ಸೂಕ್ಷ್ಮ ಪರಿಸರ ಉಳಿವಿಗಾಗಿ ಹೆಚ್ಚಿನ ಜನಜಾಗೃತಿ ಶುರುವಾಗಿದೆ.

click me!