ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳಿಗೆ Hescom ಶಾಕ್, ಕತ್ತಲಲ್ಲಿ ಜನ

Published : Jul 12, 2022, 08:27 PM IST
ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳಿಗೆ Hescom ಶಾಕ್, ಕತ್ತಲಲ್ಲಿ ಜನ

ಸಾರಾಂಶ

ಈ ಗ್ರಾಮಗಳಲ್ಲಿ ಸಂಜೆಯಾದ್ರೆ ಸಾಕು ಬರೀ ಕತ್ತಲೇ ಕತ್ತಲು, ರಸ್ತೆಗಳಿದ್ರೆ ಬೀದಿ ದೀಪಗಳೇ ಹತ್ತಿರೋದಿಲ್ಲ, ಹೀಗಾಗಿ ಜನ್ರು ರಸ್ತೆಗಳಲ್ಲಿ ಓಡಾಡಬೇಕಾದರೆ ಅತಂತ್ರ ಪರಿಸ್ಥಿತಿ ಎದುರಾಗುತ್ತೇ, ಇನ್ನು ರೈತರಂತು ರಾತ್ರಿಯಾದ್ರೆ ಸಾಕು ಹೊಲಗದ್ದೆಗೆ ನೀರು ಹಾಯಿಸೋಕೆ ಹೋಗೋಕು ತಾಪತ್ರಯ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರೋ ಗ್ರಾಮೀಣ ಭಾಗದ ಜನರು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುವಂತಾಗಿದೆ. ಹಾಗಾದ್ರೆ ಈ ಗ್ರಾಮ ಪಂಚಾಯತಿಗಳಲ್ಲಿ ಹೆಸ್ಕಾಂ ಕರೆಂಟ್​ ಶಾಕ್ ನೀಡಿದ್ದಾದ್ರೂ ಯಾಕೆ? ಅಂತೀರಾ. ಈ ಕುರಿತ ವರದಿ ಇಲ್ಲಿದೆ...  

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಬಾಗಲಕೋಟೆ.

ಬಾಗಲಕೋಟೆ​, (ಜುಲೈ.12):  
ಈ ಗ್ರಾಮಗಳಲ್ಲಿ ರಾತ್ರಿ ತುಂಬ ರಸ್ತೆಗಳಲ್ಲಿ  ಎಲ್ಲಿ ನೋಡಿದ್ರೂ ಸಾಕು ಕತ್ತಲೇ ಕತ್ತಲು, ಕತ್ತಲಲ್ಲೇ ಅನಿವಾರ್ಯವಾಗಿ ಅಧಿಕಾರಿಗಳಿಗೆ ಜನರು  ಹಿಡಿಶಾಪ ಹಾಕುತ್ತಿದ್ದಾರೆ. ಇವುಗಳ ಮಧ್ಯೆ ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡಿರೋ ಗ್ರಾಮ ಪಂಚಾಯಿತಿಗಳ ಕರೆಂಟ್​ ಕಟ್​ ಮಾಡಿರೋ ಹೆಸ್ಕಾಂ,  ಅಂದಹಾಗೆ ಇಂತಹವೊಂದು ಸಮಸ್ಯಾತ್ಮಕ ಚಿತ್ರಣ ಕಂಡು ಬಂದಿದ್ದು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ. 

ಹೌದು... ಬಾಗಲಕೋಟೆ ಜಿಲ್ಲೆಯಲ್ಲಿ 198 ಗ್ರಾಮ ಪಂಚಾಯಿತಿಗಳಿದ್ದು, ಇವುಗಳ ಪೈಕಿ ಬಹುತೇಕ ಗ್ರಾಮ ಪಂಚಾಯತಿಗಳು ಕಾಲಕಾಲಕ್ಕೆ ಕರೆಂಟ್​ ಬಾಕಿ ಬಿಲ್​ ತುಂಬುತ್ತ ಬಂದಿವೆ. ಆದರೆ ಕೆಲವು ಗ್ರಾಮ ಪಂಚಾಯಿತಿಗಳು ಮಾತ್ರ ಲಕ್ಷ ಲಕ್ಷ ವಿದ್ಯುತ್ ಬಾಕಿ ಬಿಲ್ ಉಳಿಸಿಕೊಂಡು ಬಂದಿವೆ. ಹೀಗಾಗಿ ಹೆಸ್ಕಾಂ ಈ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆಗಳ ಬೀದಿ ದೀಪಗಳ ವಿದ್ಯುತ್​ನ್ನೇ ಕಟ್​ ಮಾಡಿದೆ. ಈ ಮೂಲಕ ಗ್ರಾಮ ಪಂಚಾಯತಿಗಳಿಗೆ ಹೆಸ್ಕಾಂ ವಿದ್ಯುತ್ ಶಾಕ್​ ನೀಡಿದೆ.

Online Fraud; ಆನ್​ಲೈನ್​ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!

ಹೆಸ್ಕಾಂ ಗೆ ಬರಬೇಕಾಗಿದ್ದು ಬರೋಬ್ಬರಿ 57 ಕೋಟಿ
ಬಾಗಲಕೋಟೆ ಜಿಲ್ಲೆಯ 198 ಗ್ರಾಮ ಪಂಚಾಯತಿಗಳ ಪೈಕಿ ಕೆಲವು ಪಂಚಾಯತಿಗಳು ಕಾಲ ಕಾಲಕ್ಕೆ ವಿದ್ಯುತ್ ಬಾಕಿ ಬಿಲ್​ ಭರಣಾ ಮಾಡುತ್ತಾ ಬಂದಿವೆ, ಆದ್ರೆ 33 ಗ್ರಾಮ ಪಂಚಾಯಿತಿಗಳು ಮಾತ್ರ ಕರೆಂಟ್​ ಬಾಕಿ ಬಿಲ್ ತುಂಬಿಲ್ಲ. ಯಾಕಂದ್ರೆ ಈ 33 ಗ್ರಾಮ ಪಂಚಾಯಿತಿಗಳು 25 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯುತ್ ಬಾಕಿ ಬಿಲ್​ ಉಳಿಸಿಕೊಂಡಿವೆ. ಇದ್ರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಹೆಸ್ಕಾಂ ಗೆ ಬರಬೇಕಾಗಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 57 ಕೋಟಿ ರೂಪಾಯಿ ಬಾಕಿ. ಇದರಿಂದ ಹೆಸ್ಕಾಂನವರು ಖಡಕ್​ ವಾರ್ನಿಂಗ್ ನೀಡುವುದರ ಜೊತೆಗೆ 25 ಲಕ್ಷ ಮೊತ್ತದ ಅಧಿಕ ಬಾಕಿ ಉಳಿಸಿಕೊಂಡ 33 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆಗಳ ಬೀದಿದೀಪಗಳನ್ನ ಕಟ್​ ಮಾಡಿದ್ದಾರೆ. ಹೆಸ್ಕಾಂನ ಮೇಲಾಧಿಕಾರಿಗಳ ಅಣತಿಯಂತೆ ಇದೀಗ ಬಾಗಲಕೋಟೆ ಹೆಸ್ಕಾಂ ಕಚೇರಿ ಅಧಿಕಾರಿಗಳು ಬಾಕಿ ಉಳಿಸಿಕೊಂಡ ಪಂಚಾಯತಿಗಳ ಬೀದಿ ದೀಪಗಳ ಕರೆಂಟ್​ ಕಟ್​ ಮಾಡಿದ್ದೇವೆ ಅಂತಾರೆ ಬಾಗಲಕೋಟೆಯ ಹೆಸ್ಕಾಂ ಅಧಿಕಾರಿಗಳಾದ ವಿನಾಯಕ ಬೆಂಗಳೂರು.
                                          
33 ಗ್ರಾಮ ಪಂಚಾಯಿತಿಗಳಿಗೆ ಕರೆಂಟ್​ ಕಟ್​
ಇನ್ನು ಬಾಗಲಕೋಟೆ ಹೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ಬರುವ  ಬಾಗಲಕೋಟೆ ಡಿವಿಜನ್​ನಲ್ಲಿ 25, ಮುಧೋಳದ  ವ್ಯಾಪ್ತಿಯ 4, ಜಮಖಂಡಿ ವ್ಯಾಪ್ತಿಯ 4 ಗ್ರಾಮ ಪಂಚಾಯತಿಗಳಲ್ಲಿ ಹೀಗೆ ಒಟ್ಟು 33 ಗ್ರಾಮ ಪಂಚಾಯತಿಗಳಲ್ಲಿ ಸಧ್ಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇದ್ರಿಂದ ಈ ಭಾಗದ ಜನರಿಗೆ ಬೀದಿ ದೀಪಗಳ ಬೆಳಕು ಮಾಯವಾಗಿದೆ. ಇನ್ನು ಕೆಲವು ಗ್ರಾಮ ಪಂಚಾಯಿತಿಗಳು ತಕ್ಷಣ ಒಂದಿಷ್ಟು ಹಣವನ್ನು ಪಾವತಿಸಿ ಉಳಿದ ಹಣಕ್ಕಾಗಿ ಸಮಯ ಪಡೆದು ಮತ್ತೇ ಗ್ರಾಮಗಳಿಗೆ ಬೀದಿ ದೀಪದ ಸೌಲಭ್ಯ ಪಡೆದುಕೊಂಡಿದ್ದರೆ, ಇನ್ನುಳಿದಂತೆ ಕೆಲವು ಪಂಚಾಯಿತಿಗಳು ಮಾತ್ರ ಇದ್ಯಾವುದರ ಗೋಜಿಗೆ ಹೋಗಿಲ್ಲ. ಹೀಗಾಗಿ ಆ ಭಾಗದ ಜನರು ತೀವ್ರ ಆಕ್ರೋಶಗೊಳ್ಳುವಂತಾಗಿದೆ.

ವಿದ್ಯುತ್ ಸಂಪರ್ಕ ಬೇಕಾದವರಿಗೆ ಸಿಹಿ ಸುದ್ದಿ, OC ರೂಲ್ಸ್ ತೆಗೆದ ವಿದ್ಯುತ್ ನಿಯಂತ್ರಣ ಆಯೋಗ

ಜನಸಾಮಾನ್ಯರಿಗೆ ನಿಲ್ಲದ ಸಂಕಷ್ಟ....
ಹೌದು, ಇತ್ತ ನಿರಂತರವಾಗಿ ವಿದ್ಯುತ್ ಬಾಕಿ ಬಿಲ್​ ನ್ನು ಪಂಚಾಯಿತಿಗಳು ಪಾವತಿ ಮಾಡದೇ ಇರೋದಕ್ಕೆ ಅತ್ತ ಹೆಸ್ಕಾಂ ಕರೆಂಟ್​ ಕಟ್​​ ಮಾಡಿದರ ಪರಿಣಾಮ ರಾತ್ರಿಯಾದ್ರೆ ಸಾಕು ನೀರು ಹಾಯಿಸುವುದು ಸೇರಿದಂತೆ ಹೊಲಗದ್ದೆಗಳಿಗೆ ತೆರಳುವ ರೈತ ಸಮೂಹ ಹಾಗೂ ಜನಸಾಮಾನ್ಯರು ಇದೀಗ ಕತ್ತಲಲ್ಲೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಬರತಕ್ಕಂತಹ ಅನುದಾನದಲ್ಲಿ ಸಮರ್ಪಕವಾಗಿ ಪಂಚಾಯತಿಗಳು ವಿದ್ಯುತ್​ ಬಿಲ್​ ಕಟ್ಟುತ್ತ ಬಂದಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. 

ಆದರೆ ಈಗ ಒಂದೊಂದು ಗ್ರಾಮ ಪಂಚಾಯಿತಿಯಿಂದ 25 ಲಕ್ಷಕ್ಕೂ ಅಧಿಕ ರೂಪಾಯಿ ವಿದ್ಯುತ್ ಬಾಕಿ ಬಿಲ್​ ಉಳಿಸಿಕೊಂಡಿರೋದು ಬೆಳಕಿಗೆ ಬಂದಿದ್ದು, ಹೆಸ್ಕಾಂ ನಿರ್ದಾಕ್ಷಣ್ಯಕ್ಕೆ ಕ್ರಮಕ್ಕೆ ಮುಂದಾಗಿದೆ. ಆದರೆ ಇಷ್ಟೊಂದು ಬಾಕಿ ಬಿಲ್​ ಉಳಿಸಿಕೊಳ್ಳೋವರೆಗೆ ಹೆಸ್ಕಾಂ ಯಾಕೆ ಸುಮ್ಮನಿತ್ತು ಅನ್ನೋ ಪ್ರಶ್ನೆ ಕೂಡ ಈಗ ಜನರನ್ನ ಕಾಡಲಾರಂಭಿಸಿದೆ, ಹೀಗಾಗಿ  ಈ ಸಂಭಂದ ರಾಜ್ಯ ಸರ್ಕಾರ ಪಂಚಾಯಿತಿ ಮತ್ತು ಹೆಸ್ಕಾಂನ ಮಧ್ಯೆ ಸಮನ್ವಯ ಸಾಧಿಸಿ ಆದಷ್ಟು ಬೇಗ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು ಅಂತಾರೆ ಗ್ರಾಮೀಣ ಭಾಗದ ಜನರ ಪರವಾಗಿ ರಾಜು ಮನ್ನಿಕೇರಿ ಆಗ್ರಹಿಸಿದ್ದಾರೆ. 

 ಒಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಾಕಿ ಬಿಲ್​ ಉಳಿಸಿಕೊಳ್ಳೋದು ಒಂದು ಕಡೆಯಾದ್ರೆ, ಮತ್ತೊಂದೆಡೆ ಹೆಸ್ಕಾಂ ನಿರ್ಧಾಕ್ಷಣ್ಯ ಕ್ರಮ ಕೈಗೊಂಡ ಪರಿಣಾಮ ಗ್ರಾಮೀಣ ಜನರಿಗೆ ಬೀದಿ ದೀಪದ ಬೆಳಕು ಮರೀಚಿಕೆಯಾಗಿದ್ದು, ಈ ಸಂಬಂದ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತೇ ಅಂತ ಕಾದು ನೋಡಬೇಕಿದೆ..

PREV
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ