* ಮಲೆನಾಡಿನಲ್ಲಿ ಮುಂದುವರದ ಮಳೆ ಅಬ್ಬರ
* ಕಾಫಿನಾಡಿನಲ್ಲಿ ಅನಾಹುತಗಳ ಸಾಲು ಸಾಲು
* ಕೆರೆ, ಕಟ್ಟೆಗಳು ತುಂಬಿ ಕೋಡಿ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಜುಲೈ.12) : ಮಲೆನಾಡಿನಲ್ಲಿ ಮಳೆ ಮುಂದುವರಿದಿರುವುದರಿಂದ ಚಿಕ್ಕಮಗಳೂರು ಜಿಲ್ಲೆಯ ಬಯಲು ಭಾಗದ ಜಮೀನುಗಳಿಗೆ ನೀರುಣಿಸುವ ಕೆರೆ, ಕಟ್ಟೆಗಳು ತುಂಬಿ ಕೋಡಿ ಬೀಳುತ್ತಿವೆ. ಮತ್ತೊಂದೆಡೆ ಮಲೆನಾಡಿನಲ್ಲಿ ಅನಾಹುತಗಳ ಸರಣಿ ಮುಂದುವರಿದಿದೆ.
ಐತಿಹಾಸಕ ಅಯ್ಯನ ಕೆರೆ ಕೋಡಿ
ಗಿರಿಶ್ರೇಣಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಯಲಿನ ಕಡೂರು, ಬೀರೂರು ಭಾಗದ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಸಕರಾಯಪಟ್ಟಣದ ಸಮೀಪದ ಐತಿಹಾಸಿಕ ಅಯ್ಯನ ಕೆರೆ ತುಂಬಿ ಕೋಡಿ ಬಿದ್ದಿದೆ. ಇಂದು (ಮಂಗಳವಾರ) ಕೆರೆ ಕೋಡಿ ಬಿದ್ದಿದ್ದು, ಜುಲೈ ತಿಂಗಳಲ್ಲೇ ಕೆರೆ ತುಂಬಿದ ವಿಷಯ ತಿಳಿದು ರೈತರು ಸಂಭ್ರಮಿಸುತ್ತಿದ್ದಾರೆ. ನೂರಾರು ಜನ ರೈತರು ಕೋಡಿ ಮೇಲೆ ಹರಿಯುವ ಜಲರಾಶಿಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಧಾವಿಸುತ್ತಿದ್ದಾರೆ.
Chikkamagaluru: ಮಲೆನಾಡಲ್ಲಿ ಮಳೆ ಅಬ್ಬರ ತಗ್ಗಿಸುವಂತೆ ದೇವರ ಮೊರೆ
ಬಯಲು ಭಾಗದ ಅಡಿಕೆ, ಬಾಳೆ, ತೆಂಗಿನ ತೋಟಗಳು ಸೇರಿಂದತೆ ಎಣ್ಣೆಕಾಳು, ದ್ವಿದಳ ಧಾನ್ಯಗಳ ಬೆಳೆಗೆ ಅಯ್ಯನ ಕೆರೆ ನೀರು ವರದಾನದಂತಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.ಇತ್ತಿಚೆಗಷ್ಟೇ ಕಳಸಾಪುರದ ಊರ ಮುಂದಿನ ಕೆರೆ ಹಾಗೂ ಈಶ್ವರಳ್ಳಿ ಕೆರೆಗಳು ಸಹ ತುಂಬಿ ಐತಿಹಾಸಿಕ ಬೆಳವಾಡಿ ಕೆರೆಗೆ ನೀರು ಹರಿಯುತ್ತಿರುವುದ ಸಹ ಚಿಕ್ಕಮಗಳೂರು ತಾಲ್ಲೂಕಿನ ಬರಪೀಡಿತ ಲಕ್ಯ, ಸಕರಾಯಪಟ್ಟಣ ಹೋಬಳಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಲೆನಾಡಿನಲ್ಲಿ ಮಳೆ ಮುಂದುವರಿಕೆ
ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಸಾಕಷ್ಉ ಅನಾಹುತಗಳಿಗೆ ಕಾರಣವಾಗುತ್ತಿದೆ. ಮಲೆನಾಡು ಭಾಗದಲ್ಲಿ ಮುಂಗಾರಿನ ಅಬ್ಬರ ಇನ್ನೂ ಮುಂದುವರಿದಿದ್ದು, ಇಂದು ಕೂಡ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು.ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಶೃಂಗೇರಿ ಎನ್.ಆರ್.ಪುರ, ಕೊಪ್ಪ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ತೇವಾಂಶ ಹೆಚ್ಚಾಗಿ ಥಂಡಿ ವಾತಾವರಣದಿಂದ ಮೈನಡುಗಿಸುವ ಚಳಿಯಿಂದ ಜನರು ತತ್ತರಿಸಿದ್ದಾರೆ.ಮಳೆ ಮುಂದುವರೆದ ಹಿನ್ನೆಲೆ ಇಂದು ಕೂಡ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಿಸಲಾಗಿತ್ತು.
ಬುಧವಾರ ಮಳೆ ಬಿಡುವು ನೀಡಿದಲ್ಲಿ ಮುಂದಿನ ತೀರ್ಮಾನ ತೆಗೆದುಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.ಮಳೆಯಿಂದ ಭೂಮಿ ತೋಯ್ದಿರುವ ಪರಿಣಾಮ ಮಣ್ಣು ಸಡಿಲಗೊಂಡು ಭಾರೀ ಗಾತ್ರದ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರಳುತ್ತಿವೆ. ಚಿಕ್ಕಮಗಳೂರು ತಾಲ್ಲೂಕು ಕೆರೆಮಕ್ಕಿ ಯಿಂದ ಜೋಳದಾಳು ನಡುವಿನ ರಸ್ತೆ ಮಧ್ಯೆ ಭೂ ಕುಸಿತ ಸಂಭವಿಸಿದೆ. ರಸ್ತೆಗೆ ಅಡ್ಡವಾಗಿ ಉರುಳುತ್ತಿರುವ ರಾಶಿ ರಾಶಿ ಮಣ್ಣು ಮರಗಳಿಂದ ಗ್ರಾಮಗಳ ಸಂಪರ್ಕವೇ ಕಡಿತಗೊಂಡಿದೆ. ಪಟ್ಟಣ ಸಂಪರ್ಕ ಸಾಧ್ಯವಾಗದೇ ಜನರ ಪರದಾಡುತ್ತಿದ್ದಾರೆ.
10 ದಿನವಾದ್ರೂ ಪತ್ತೆಯಾಗದ ಬಾಲಕಿ
ಚಿಕ್ಕಮಗಳೂರು ತಾಲ್ಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ ಸುಪ್ರಿತಾ 10 ದಿನಗಳಾದರೂ ಪತ್ತೆಯಾಗಿಲ್ಲ. ಎಸ್ಡಿಆರ್ಎಫ್ ಹಾಗೂ ಅಗ್ನಿಶಾಮಕದಳ, ಸ್ಥಳೀಯ ಈಜುಗಾರರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಿಪತ್ತು ನಿರ್ವಹಣೆ ಘಟಕಗಳಿಂದ ನಿರಂತರ ಶೋಧಕಾರ್ಯ ಮುಂದುವರಿದಿದೆ.ಹೊಸಪೇಟೆಯಿಂದ ಮದಗದಕೆರೆಯವರೆಗೆ ಶೋಧಕಾರ್ಯ ನಡೆಯುತ್ತಿದೆ. ನಿರಂತರ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿರುವುದು ಕಾರ್ಯಾಚರಣೆಗೆ ತೊಡಕಾಗಿದೆ.
ಘಾಟ್ ನಲ್ಲಿ ಬೆಂಕಿ : ಕಾರ್ ಭಸ್ಮ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗಡರೆ ತಾಲ್ಲೂಕಿನ ಚಾರ್ಮಾಡಿಘಾಟ್ನಲ್ಲಿ ಅಕಸ್ಮಿಕ ಬೆಂಕಿ ತಗುಲಿ ಕಾರೊಂದು ಭಸ್ಮಗೊಂಡ ಘಟನೆ ಇಂದು ಮುಂಜಾನೆ 3ಗಂಟೆ ಸಮಯದಲ್ಲಿ ನಡೆದಿದೆ.ಘಾಟಿ ರಸ್ತೆಯ ಅಣ್ಣಪ್ಪ ಸ್ವಾಮಿದೇವಸ್ಥಾನ ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಲ್ಲಿ 5 ಮಂದಿ ಪ್ರಯಾಣಿಕರೆಲ್ಲರೂ ಕೆಳಗಿಳಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಾರು ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂಧಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.