ಜಿಲ್ಲಾಸ್ಪತ್ರೆಯಲ್ಲಿ ಇನ್ಮುಂದೆ ಬೇರೆ ರೋಗಿಗಳಿಗೂ ಚಿಕಿತ್ಸೆ: ಸಚಿವ ಜಾರಕಿಹೊಳಿ

By Kannadaprabha News  |  First Published Sep 5, 2020, 3:34 PM IST

ಪೊಲೀಸರಿಗೆ ಸೋಂಕು ದೃಢಪಟ್ಟರೆ ಮನೆಯಲ್ಲೇ ಚಿಕಿತ್ಸೆ ನೀಡುವುದು ಉತ್ತಮ, ಅದೇ ರೀತಿ ಸಾರ್ವಜನಿಕರಿಗೆ ಸೋಂಕು ದೃಢಪಟ್ಟರೆ ಮನೆಯಲ್ಲಿ ಚಿಕಿತ್ಸೆ ನೀಡುವುದು ಉತ್ತಮ| ಮನೆಯಲ್ಲಿ ಚಿಕಿತ್ಸೆ ನೀಡುವುದರಿಂದ ಅವರಿಗೆ ಒಳ್ಳೆಯ ಆಹಾರದ ಜೊತೆಗೆ ಕುಟುಂಬ ಸದಸ್ಯರಿಂದ ಧೈರ್ಯ ಸಿಗುತ್ತದೆ| ಶೇ.60 ಕೋವಿಡ್‌ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ| 


ಬೆಳಗಾವಿ(ಸೆ.05): ಇನ್ನು 15 ದಿನಗಳ ನಂತರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಹೊರತುಪಡಿಸಿ ಇತರೆ ರೋಗಿಗಳಿಗೂ ಚಿಕಿತ್ಸೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. 

ಕೋವಿಡ್‌-19 ಹಾಗೂ ಅತಿವೃಷ್ಟಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತ್ತು ಬೆಳಗಾವಿ ನಗರದಲ್ಲಿ ಕೈಗೊಂಡಿರುವ ತುರ್ತು ಕ್ರಮಗಳ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Latest Videos

undefined

ಪ್ರತಿ ತಾಲೂಕಿಗಳಲ್ಲಿರುವ ಕೋವಿಡ್‌-19 ಸೆಂಟರ್‌ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸೋಣ ಎಂದರು. ಪ್ರತಿ ಮೂರ್ನಾಲ್ಕು ವರ್ಷಗಳಲ್ಲಿ ಹೊಸ ಹೊಸ ರೋಗಗಳು ಹರಡುತ್ತದೆ. ಆದರೆ ಆ ರೋಗಗಳಿಗೆ ಹೋಲಿಸಿದರೆ ಕೋವಿಡ್‌- 19 ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಜುಲೈ ಹಾಗೂ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಕೋವಿಡ್‌-19 ಸ್ವಲ್ಪ ಹತೋಟಿಗೆ ಬಂದಿದೆ. ಜನರು ಕೋವಿಡ್‌-19 ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಜನರು ಹೆದರುವ ಅವಶ್ಯಕತೆ ಇಲ್ಲ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮ ಮಟ್ಟದಲ್ಲಿ ಕೋವಿಡ್‌-19 ಹರಡುವ ಪ್ರಮಾಣ ಕಡಿಮೆ ಆಗುತ್ತಿದೆ. ಸೋಂಕು ತಡೆಗೆ ಗ್ರಾಮೀಣ ಮಟ್ಟದಲ್ಲಿ ಜನರು ಸಹಕರಿಸಿದರು. ವಲಸೆ ಕಾರ್ಮಿಕರು ಬಂದ ಮೇಲೆ ಗ್ರಾಮೀಣ ಮಟ್ಟದಲ್ಲಿ ಸೋಂಕು ಹರಡಿತು ಎಂದರು.

ಈ ಗ್ರಾಮದ ಪ್ರತಿ ಮನೆಯಲ್ಲಿದ್ದಾರೆ ಶಿಕ್ಷಕರು!

20 ವೆಂಟಿಲೇಟರ್‌ ಜಿಲ್ಲಾಸ್ಪತ್ರೆಗೆ:

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 700 ಬೆಡ್‌ಗಳಿದ್ದು, ಆಕ್ಸಿಜನ್‌ ವ್ಯವಸ್ಥೆ ಕೂಡ ಇದೆ. ಜಿಲ್ಲೆಗೆ 54 ವೆಂಟಿಲೇಟರ್‌ ಬಂದಿದ್ದು, ಅದರಲ್ಲಿ 20 ವೆಂಟಿಲೇಟರ್‌ ಜಿಲ್ಲಾಸ್ಪತ್ರೆಗೆ ನೀಡಲಾಗಿದೆ. ಉಳಿದ ವೆಂಟಿಲೇಟರ್‌ ತಾಲೂಕುಗಳಿಗೆ ನೀಡಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಬೆಳಗಾವಿ ಜಿಲ್ಲೆ ಹಾಗೂ ಉಳಿದ ಜಿಲ್ಲೆಯ ಸಾವಿನ ಸರಾಸರಿ ನೋಡಿದರೆ ಬೆಳಗಾವಿಯಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಸೋಂಕಿತರು ಬಯಸಿದಲ್ಲಿ ಚಿಕಿತ್ಸೆ ಪಡೆಯಬಹುದು. ಇದರಿಂದ ಸರ್ಕಾರಿ ಆಸ್ಪತ್ರೆಗೆ ಕಡಿಮೆ ಹೊರೆ ಆಗತ್ತದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ವಿ. ಮುನ್ಯಾಳ ಅವರು, ತಾಲೂಕು ಹಾಗೂ ಜಿಲ್ಲೆಯಲ್ಲಿ ಕೋವಿಡ್‌-19 ಸ್ಥಿತಿಗತಿ ಬಗ್ಗೆ ವಿವರಣೆ ನೀಡಿದರು. ಸೋಂಕಿನಿಂದ ಬಳಲುತ್ತಿದ್ದ 140 ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಈ ಸಂದರ್ಭದಲ್ಲಿ ಮಕ್ಕಳ ಕೋವಿಡ್‌-19 ವರದಿ ನೆಗೆಟಿವ್‌ ಬಂದಿರುತ್ತದೆ ಎಂದು ಹೇಳಿದರು.

ಈ ಬಾರಿ ಪ್ರವಾಹದಿಂದ ಸಮಸ್ಯೆ ಇಲ್ಲ:

ಪ್ರವಾಹದಿಂದ ಈ ಬಾರಿ ಸಮಸ್ಯೆ ಆಗಿಲ್ಲ. ಆದರೂ ರೈತರಿಗೆ ಬೆಳೆ ಪರಿಹಾರ ನೀಡಲು ಜಂಟಿಯಾಗಿ ಬೆಳೆ ಸಮೀಕ್ಷೆ ಮಾಡಬೇಕು ಎಂದು ಡಿಸಿ ಹಿರೇಮಠ ತಿಳಿಸಿದರು. ಜಿಲ್ಲೆಯಲ್ಲಿ ಪ್ರವಾಹದಿಂದ 1,160 ಕೋಟಿ ನಷ್ಟಆಗಿದ್ದು, ಪ್ರವಾಹದ ಸಮೀಕ್ಷೆಗೆ ಕೇಂದ್ರ ತಂಡ ಭೇಟಿ ನೀಡಲಿದೆ. ಸದ್ಯದ ಮಟ್ಟಿಗೆ ಪ್ರವಾಹ ನಿಯಂತ್ರಣದಲ್ಲಿದೆ. ರೈತರಿಂದ ಬೆಳೆ ಸಮೀಕ್ಷೆ ನಡೆಯುತ್ತಿದ್ದು, ರಾಜ್ಯದಲ್ಲಿ ಜಿಲ್ಲೆಯ ರೈತರು ಹೆಚ್ಚು ಸಮೀಕ್ಷೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಸಚಿವರಿಗೆ ತಿಳಿಸಿದರು.

ನಗರ ಪೊಲೀಸ್‌ ಆಯುಕ್ತ ಡಾ. ತ್ಯಾಗರಾಜನ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಿಇಒ ದರ್ಶನ ಎಚ್‌.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಿಮ್ಸ್‌ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್‌. ಸೇರಿದಂತೆ ಮತ್ತಿತರರು ಇದ್ದರು.

ರಾಯಣ್ಣನ ಪ್ರತಿಮೆ ಸ್ಥಳಕ್ಕೆ ಶಿವಾಜಿ ಚೌಕ ನಾಮಕರಣ

ಕೊರೋನಾ ಹತೋಟಿಗೆ

ಪೊಲೀಸರಿಗೆ ಸೋಂಕು ದೃಢಪಟ್ಟರೆ ಮನೆಯಲ್ಲೇ ಚಿಕಿತ್ಸೆ ನೀಡುವುದು ಉತ್ತಮ. ಅದೇ ರೀತಿ ಸಾರ್ವಜನಿಕರಿಗೆ ಸೋಂಕು ದೃಢಪಟ್ಟರೆ ಮನೆಯಲ್ಲಿ ಚಿಕಿತ್ಸೆ ನೀಡುವುದು ಉತ್ತಮವಾಗಿರುತ್ತದೆ. ಮನೆಯಲ್ಲಿ ಚಿಕಿತ್ಸೆ ನೀಡುವುದರಿಂದ ಅವರಿಗೆ ಒಳ್ಳೆಯ ಆಹಾರದ ಜೊತೆಗೆ ಕುಟುಂಬ ಸದಸ್ಯರಿಂದ ಧೈರ್ಯ ಸಿಗುತ್ತದೆ. ಶೇ.60 ಕೋವಿಡ್‌ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಸರಿಯಾದ ಆಹಾರ ನೀಡಬೇಕು. ಕೊರೋನಾ ಹತೋಟಿಗೆ ಬಂದಿದೆ. ಆದಾಗ್ಯೂ ಅಧಿಕಾರಿಗಳು ಇನ್ನು ಹೆಚ್ಚು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಡ್ರಗ್ಸ್‌ ದಂಧೆಕೋರರ ವಿರುದ್ಧ ಕ್ರಮಕ್ಕೆ ಸೂಚನೆ

ಜಿಲ್ಲೆಯಲ್ಲಿ ಡ್ರಗ್ಸ್‌ ಮತ್ತು ಗಾಂಜಾದಂತಹ ಮಾದಕ ವಸ್ತುಗಳ ಮಾರಾಟ ದಂಧೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.
ಮಾದಕ ವಸ್ತುಗಳ ಮಾರಾಟ ದಂಧೆ ವಿಚಾರದಲ್ಲಿ ಪೊಲೀಸ್‌ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಗಾಂಜಾ ಮಾರಾಟ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ಬೇರೆ ಜಿಲ್ಲೆಯವರು ಬಂದು ಹಸ್ತಕ್ಷೇಪಮಾಡುವುದು ಸರಿಯಲ್ಲ. ಬೆಳಗಾವಿ ಜಿಲ್ಲೆಯವರು ನಾವು ಸಮರ್ಥರಾಗಿದ್ದೇವೆ. ರಾಯಣ್ಣ ಪ್ರತಿಮೆ ಸ್ಥಳಕ್ಕೆ ಛತ್ರಪತಿ ಶಿವಾಜಿ ಮಹಾರಾಜ ವೃತ್ತ ಎಂದು ನಾಮಕರಣ ಮಾಡಲಾಗಿದೆ. ಈ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ಗೊತ್ತುವಳಿ ಮಾಡಿರುವುದನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬಿಲ್ಲಿ ಗ್ಯಾಂಗ್‌:

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕನಲ್ಲಿ ಬಂಧಿಸಲ್ಪಟ್ಟವರ ಗ್ಯಾಂಗ್‌ ಟೈಗರ್‌ ಗ್ಯಾಂಗ್‌ ಅಲ್ಲ. ಅದು ಬಿಲ್ಲಿ ಗ್ಯಾಂಗ್‌ ಎಂದರು. ಕಳೆದ ಮೂರ್ನಾಲ್ಕು ತಿಂಗಳಿಗೆ ಹೋಲಿಕೆ ಮಾಡಿರೆ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಅಲ್ಲದೇ, ಅಧಿಕಾರಿಗಳು ಮೈ ಮರೆಯದಂತೆ ಸೂಚನೆ ನೀಡಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಬೆಳಗಾವಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿ ವಿಳಂಬವಾಗಿತ್ತು. ಸದ್ಯ ಕಾಮಗಾರಿ ತ್ವರಿತಗತಿಯಿಂದ ನಡೆಯುತ್ತಿದೆ. ಕೇಂದ್ರ ಬಸ್‌ ನಿಲ್ದಾಣ ಕಾಮಗಾರಿಗೆ ವೇಗ ಪಡೆಯಲು ದಂಡುಮಂಡಳಿ ಸಿಇಒ ಮತ್ತು ಜಿಲ್ಲಾಧಿಕಾರಿ ಜೊತೆಗೆ ಸಭೆ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.
 

click me!