ಭೂಕಂಪದೂರಲ್ಲಿ ಪ್ರತಿ ಮನೆ ಮುಂದೆ ಶೆಡ್‌ ನಿರ್ಮಾಣ: ಸಚಿವ ಅಶೋಕ

By Kannadaprabha News  |  First Published Oct 20, 2021, 7:37 AM IST

*  ಭೂಕಂಪದೂರಲ್ಲಿ ಸಚಿವ ಅಶೋಕ ಸಂಚಾರ, ಭಯಗ್ರಸ್ತ ಜನತೆಗೆ ಅಭಯ
*  ಇನ್ನೂ 1 ತಿಂಗಳ ಕಾಲ ಗಡಿಕೇಶ್ವರ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಭೂಕಂಪನದ ಅಧ್ಯಯನ
*  ಪ್ರತಿ ಮನೆಗೂ ಪ್ರತ್ಯೇಕ ಶೆಡ್‌ ನಿರ್ಮಾಣ


ಕಲಬುರಗಿ(ಅ.20): ಜಿಲ್ಲೆಯ ಚಿಂಚೋಳಿ(Chincholi) ತಾಲೂಕಿನ ಭೂಕಂಪನ(Earthquake) ಪೀಡಿತ ಗ್ರಾಮಗಳಲ್ಲಿರುವ ಮನೆಗಳ ಮುಂದೆ ಶೆಡ್‌ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆ ಕುರಿತಂತೆ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ(R Ashok) ಹೇಳಿದ್ದಾರೆ.

ಭೂಕಂಪನ ಭಯಗ್ರಸ್ತ ಊರುಗಳಾದ ಗಡಿಕೇಶ್ವರ, ಹೊಸಳ್ಳಿ ಹಾಗೂ ಕೊರವಿ ತಾಂಡಾಗಳಿಗೆ ಮಂಗಳವಾರ ಭೇಟಿ ನೀಡಿದ ಕಂದಾಯ ಸಚಿವರು ಜನತೆಯೊಂದಿಗೆ ಸಂವಾದ ನಡೆಸಿ ಯಾವುದೇ ಕಾರಣಕ್ಕೂ ಭಯ ಪಡದಂತೆ ಮನವಿ ಮಾಡಿದರಲ್ಲದೆ ಸರ್ಕಾರ(Government) ನಿಮ್ಮೊಂದಿಗೆ ಎಂದು ಅಭಯ ನೀಡಿದರು.

Tap to resize

Latest Videos

ಗಡಿಕೇಶ್ವರ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಭೂಮಿ ಕಂಪಿಸುತ್ತಿರುವ ಕಾರಣ ಗ್ರಾಮದಲ್ಲಿ ಭೂಕಂಪದ ತೀವ್ರತೆ ಅರಿಯಲು ಹೈದ್ರಬಾದ್‌ನ(Hyderabad) ಎನ್‌ಜಿಆರ್‌ಐ ವಿಜ್ಞಾನಿಗಳ(NGRI Scientists) ತಂಡ ಸಿಸ್ಮೋಮೀಟರ್‌ ಯಂತ್ರ ಅಳವಡಿಸಿದ್ದಾರೆ. ಮುಂದಿನ 1 ತಿಂಗಳ ಕಾಲ ವಿಜ್ಞಾನಿಗಳು ಈ ಯಂತ್ರದ ಮೂಲಕ ದಾಖಲಾಗುವ ಪ್ರತಿಯೊಂದು ಮಾಹಿತಿಯನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವೈಜ್ಞಾನಿಕವಾಗಿ ವರದಿ(Scientific Report) ಸಲ್ಲಿಸಲಿದ್ದು, ತದನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ಕಲಬುರಗಿ: ಭೂಕಂಪದ ಊರುಗಳಲ್ಲಿ ಹೈದರಾಬಾದ್‌ ತಂಡದಿಂದ ಸರ್ವೆ

ಲಘು ಕಂಪನದದಿಂದ ಹಾನಿ ಆಗಲ್ಲ:

ಹೈದ್ರಾಬಾದಿನ ಭೂ ವಿಜ್ಞಾನಿಗಳ ಪ್ರಾಥಮಿಕ ವರದಿ ಪ್ರಕಾರ ಇದು ಸಣ್ಣ ಪ್ರಮಾಣದ ಭೂಕಂಪವಾಗಿದ್ದು, ಹೆದರುವ ಅವಶ್ಯಕತೆಯಿಲ್ಲ. ಕಳೆದ 2-3 ವರ್ಷದಿಂದ ಹೆಚ್ಚಿನ ಮಳೆಯಾಗಿದೆ. ಜೊತೆಗೆ ಸುಣ್ಣದ ಕಲ್ಲಿನಿಂದ ಕೂಡಿರುವ ಪ್ರದೇಶ ಇದಾಗಿದ್ದರಿಂದ ಭೂಮಿಯೊಳಗೆ ರಸಾಯನಿಕ ಕ್ರಿಯೆಗಳ ಚಲನವಲನದಿಂದ ಶಬ್ದ ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ ಎಂದಿದ್ದಾರೆ. ಹೀಗಾಗಿ ಸಾರ್ವಜನಿಕರು ಭಯಪಡುವ ಅವಶ್ಯಕತೆವಿಲ್ಲ. ಸರ್ಕಾರ ನಿಮ್ಮೊಂದಿಗಿದೆ ಧೈರ್ಯದಿಂದಿರಿ ಎಂದು ಗ್ರಾಮಸ್ಥರಿಗೆ ಆತ್ಮ ಸ್ಥೈರ್ಯ ತುಂಬಿದರು.

ಭೂಕಂಪನದಿಂದ ಸಂಪೂರ್ಣ ಮನೆಗಳು ಬಿದ್ದಂತಹ 5 ಕುಟುಂಬಗಳಿಗೆ 50 ಸಾವಿರ ರು. ಪರಿಹಾರ(compensation) ನೀಡಲಾಗಿದೆ. ಮನೆಗಳ ಹಾನಿಯ ಬಗ್ಗೆ ಗ್ರಾಮದಲ್ಲಿ ಸರ್ವೇ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಯಾವುದಕ್ಕೂ ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕು. ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರ ನಿಮಗಾಗಿ ಕಾಳಜಿ ಕೇಂದ್ರ ತೆರೆದಿದೆ. ಹಿಂದೆ ಗಂಜಿ ಕೇಂದ್ರ(Care center) ಎಂದು ಕರೆಯಲಾಗುತ್ತಿತ್ತು. ನಮ್ಮ ಸರ್ಕಾರ ಗೌರವಯುತವಾಗಿ ಕಾಳಜಿ ಕೇಂದ್ರ ಎಂದು ಮರುನಾಮಕರಣಗೊಳಿಸಿ ಕಷ್ಟದ ಕಾಲದಲ್ಲಿ ನಿಮ್ಮ ಕಾಳಜಿ ವಹಿಸುತ್ತಿದ್ದೇವೆ. ಕಿವಿ ಮತ್ತು ಕಣ್ಣಿರುವ ಸರ್ಕಾರ ನಮ್ಮದಾಗಿದೆ ಎಂದರು

ಕಾಳಜಿ ಕೇಂದ್ರದಲ್ಲಿ ಗುಣಮಟ್ಟದ ಆಹಾರ ಪೂರೈಕೆಗೆ ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನಿತರ ಗ್ರಾಮದಲ್ಲಿಯೂ ಕಾಳಜಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಣದ ಕೊರತೆಯಿಲ್ಲ. ವಿಪತ್ತು ನಿರ್ವಹಣಾ ಅನುದಾನದಡಿ ಎಲ್ಲವನ್ನೂ ಭರಿಸಲಾಗುವುದು ಎಂದು ಸಚಿವ ಅಶೋಕ ತಿಳಿಸಿದರು.

ಕಲಬುರಗಿ: ಸಂಸದ ಉಮೇಶ್‌ ಜಾಧವ್‌ ಗ್ರಾಮ ವಾಸ್ತವ್ಯದ ವೇಳೆಯೇ ಭೂಕಂಪ..!

ಜನರ ಮನೆಮುಂದೆ ಶೆಡ್‌ ನಿರ್ಮಿಸಬೇಕು:

ಇದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಕಳೆದ 10 ವರ್ಷದಿಂದ ಗ್ರಾಮದಲ್ಲಿ ಭೂಕಂಪನದ ಸದ್ದು ಕೇಳಿಸುತ್ತಿದೆ. ಆದರೆ, ಕಳೆದ 10-12 ದಿನದಿಂದ ಶಬ್ದದ ತೀವ್ರತೆ ಹೆಚ್ಚಾದ ಕಾರಣ ಜನ ಭಯಭೀತರಾಗಿದ್ದಾರೆ. 3 ದಿನದ ಹಿಂದೆಯೇ ತಾವು ಮತ್ತು ಸಂಸದ ಡಾ.ಉಮೇಶ ಜಾಧವ ಅವರು ಅಧಿಕಾರಿಗಳೊಂದಿಗೆ ರಾತ್ರಿ ವಾಸ್ತವ್ಯ ಜನರಲ್ಲಿ ಧೈರ್ಯ ತುಂಬಿದ್ದೇವೆ. ಆಡಳಿತ ಯಂತ್ರ 24 ಗಂಟೆ ಇಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಇಲ್ಲಿನ ಜನರ ಅಪೇಕ್ಷೆಯಂತೆ ಮನೆ ಮುಂದೆ ಶೆಡ್‌ ನಿರ್ಮಿಸಬೇಕು ಮತ್ತು ಕಚ್ಚಾ ಮನೆಗಳನ್ನು ಸರ್ಕಾರದಿಂದಲೆ ಪಕ್ಕಾ ಮನೆ ನಿರ್ಮಿಸಿಕೊಡಬೇಕು ಎಂದು ಸಚಿವರಲ್ಲಿ ಗ್ರಾಮಸ್ಥರ ಪರವಾಗಿ ಬೇಡಿಕೆ ಇಟ್ಟರು.

1 ತಿಂಗಳ ಕಾಲ ಅಧ್ಯಯನ:

ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ ಭೂ ವಿಜ್ಞಾನಿ ಡಾ. ಶಶಿಧರ ಮಾತನಾಡಿ, ರಾಜ್ಯ ಸರ್ಕಾರದ ಕೋರಿಕೆಯಂತೆ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿ ಭೂಕಂಪ ಅಳೆಯುವ ಮಾಪಕ ಯಂತ್ರ ಅಳವಡಿಸಿದೆ. ಇದು ಸುತ್ತಮುತ್ತಲಿನ 5ರಿಂದ 10 ಕಿ.ಮಿ. ವ್ಯಾಪ್ತಿಯಲ್ಲಾಗುವ ಭೂಕಂಪನದ ಮಾಹಿತಿ ಹೈದ್ರಾಬಾದ್‌ ಎನ್‌ಜಿಆರ್‌ಐ ಸಂಸ್ಥೆಗೆ ತಕ್ಷಣವೇ ರವಾನಿಸಲಿದೆ.

ಗಡಿಕೇಶ್ವರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಆಗುತ್ತಿರುವ ಭೂಕಂಪನಗಳು ತೀರಾ ಸಣ್ಣ ಪ್ರಮಾಣದಾಗಿದ್ದು, ಇದರಿಂದ ಯಾವುದೇ ಹಾನಿಯಾಗುವುದಿಲ್ಲ. ಇಂತಹ ಸಣ್ಣ ಪ್ರಮಾಣದ ಭೂಕಂಪಗಳು ವಿಶ್ವದಾದ್ಯಂತ ಪ್ರತಿನಿತ್ಯ ನಡೆಯುತ್ತವೆ. ಇದಕ್ಕೆ ಗ್ರಾಮಸ್ಥರು ಹೆದರುವ ಅವಶ್ಯತೆಯಿಲ್ಲ ಎಂದು ಅಭಯ ನೀಡಿದರು.

ಸುಣ್ಣದ ಕಲ್ಲಿನ ಪ್ರದೇಶ ಇದಾಗಿದ್ದು, ಇತ್ತೀಚೆಗೆ ಹೆಚ್ಚಿನ ಮಳೆಯೂ ಆಗಿರುವ ಕಾರಣ ಸುಣ್ಣದ ಕಲ್ಲು ಮತ್ತು ನೀರಿನ ಮಿಶ್ರಣದ ಫಲವಾಗಿ ಭೂಮಿಯೊಳಗಿನಿಂದ ಇಂತಹ ಶಬ್ದಗಳು ಬರುವುದು ಸಹಜ. ಇಲ್ಲಿ ಸ್ಥಾಪಿಸಿರುವ ಸಿಸ್ಮೋಮೀಟರ್‌ನಿಂದ ದಾಖಲಾಗುವ ಪ್ರತಿಯೊಂದು ಮಾಹಿತಿ ಕುರಿತು ಮುಂದಿನ 1 ತಿಂಗಳ ಕಾಲ ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಾ.ಶಶಿಧರ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು
ಕಾರ್ಯಕ್ರಮದಲ್ಲಿ ಎ.ಎಲ್‌ಸಿ ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾನ, ಜಿಪಂ ಸಿಇಒ ಡಾ.ದಿಲೀಷ್‌ ಶಶಿ, ಸೇಡಂ ಸಹಾಯಕ ಆಯುಕ್ತೆ ಅಶ್ವಿಜಾ ಬಿ., ಎಡಿಸಿ ಡಾ.ಶಂಕರ ವಣಿಕ್ಯಾಳ, ಕಲಬುರಗಿ ಸಹಾಯಕ ಆಯುಕ್ತೆ ಮೋನಾ ರೂಟ್‌, ಪಿಡಬ್ಲೂಡಿ ಇಇ ಮಲ್ಲಿಕಾರ್ಜುನ ಜೇರಟಗಿ, ಕೃಷ್ಣಾ ಅಗ್ನಿಹೋತ್ರಿ, ಚಿಂಚೋಳಿ ತಹಶೀಲ್ದಾರ ಅಂಜುಮ್‌ ತಬಸ್ಸುಮ್‌, ಕಾಳಗಿ ತಹಶೀಲ್ದಾರ ನಾಗನಾಥ ತರಗೆ, ತಾಪಂ ಇ.ಓ ಅನೀಲ ರಾಠೋಡ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

ಸಚಿವರಿಂದ ಗ್ರಾಮಸ್ಥರ ಮನೆ ಮನೆ ಭೇಟಿ

ನಂತರ ಸಚಿವ ಅಶೋಕ ಅವರು ಗಡಿಕೇಶ್ವರ ಗ್ರಾಮದ ವಿವಿಧ ಓಣಿಗಳಿಗೆ ಭೇಟಿ ನೀಡಿ ಭೂಕಂಪನದಿಂದ ಬಿರುಕು ಕಂಡ ಮನೆಗಳನ್ನು ವೀಕ್ಷಿಸಿದರು. ಗ್ರಾಮಸ್ಥರೊಂದಿಗೆ ಮಾತನಾಡಿ ಅವರ ಕುಂದುಕೊರತೆ ಆಲಿಸಿದರು. ಸ್ಥಳೀಯ ಗ್ರಾಮಸ್ಥರು ಕಾಳಜಿ ಕೇಂದ್ರದಲ್ಲಿ ನೀಡಲಾಗುತ್ತಿರುವ ಊಟದ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಾ ಮನೆ ಮುಂದೆ ಶೆಡ್‌ ನಿರ್ಮಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು. ಶೆಡ್‌ ನಿರ್ಮಿಸುವುದಾಗಿ ಸಚಿವರು ಭರವಸೆ ನೀಡಿದರು. ನಂತರ ಸಚಿವರು ಕಾಳಗಿ ತಾಲೂಕಿನ ಹೊಸಳ್ಳಿ (ಎಚ್‌) ಮತ್ತು ಕೊರವಿ (ರಾಮನಗರ ತಾಂಡಾ)ಗೆ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆ ಆಲಿಸಿದರು. ಲೊಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ತಾತ್ಕಾಲಿಕ ಶೆಡ್‌ ವೀಕ್ಷಿಸಿದರು.
 

click me!