ಕಾಂಗ್ರೆಸ್‌ ಯಾರ ಪರ ಇದೆ ಎಂಬುದ ಸಾಬೀತು ಪಡಸಲಿ: ಸಚಿವ ಅಶೋಕ್‌

By Kannadaprabha NewsFirst Published Nov 18, 2020, 8:15 AM IST
Highlights

ಕಾಂಗ್ರೆಸ್‌ ನಾಯಕರ ಹೇಳಿಕೆ ಅನುಮಾನ ಮೂಡಿಸುತ್ತಿದೆ| ಅನ್ಯಾಯಕ್ಕೆ ಒಳಗಾದವರ ಪರವಾಗಿದ್ದೀರಾ?, ಆರೋಪಿಗಳ ಪರವಾಗಿದ್ದೀರಾ ಎಂಬುದನ್ನು ಜನರ ಮುಂದೆ ಹೇಳಬೇಕು ಎಂದು ಒತ್ತಾಯಿಸಿದ ಅಶೋಕ್‌| 
 

ಬೆಂಗಳೂರು(ನ.18): ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಕಾಂಗ್ರೆಸ್‌ ನಾಯಕರು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪರವಾಗಿದ್ದಾರೆಯೇ ಅಥವಾ ಸಂಪತ್‌ ರಾಜ್‌ ಪರವಾಗಿದ್ದಾರೆಯೇ ಎಂಬುದನ್ನು ಸಾಬೀತುಪಡಿಸಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಖಂಡ ಶ್ರೀನಿವಾಸಮೂರ್ತಿ ಪರವಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘಟನೆ ಖಂಡಿಸಿ ಒಂದೇ ಒಂದು ಪ್ರತಿಭಟನೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿ ಅವರನ್ನು ಕೊಲೆ ಮಾಡುವ ಪ್ರಯತ್ನ ಮಾಡಲಾಗಿದೆ. ಆದರೆ ಕಾಂಗ್ರೆಸ್‌ ನಾಯಕರು ಮಾತನಾಡುವ ರೀತಿ ನೋಡಿದರೆ ಆರೋಪಿ ಸಂಪತ್‌ರಾಜ್‌ ರಕ್ಷಣೆ ಮಾಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಅನ್ಯಾಯಕ್ಕೆ ಒಳಗಾದವರ ಪರವಾಗಿದ್ದೀರಾ?, ಆರೋಪಿಗಳ ಪರವಾಗಿದ್ದೀರಾ ಎಂಬುದನ್ನು ಜನರ ಮುಂದೆ ಹೇಳಬೇಕು ಎಂದು ಒತ್ತಾಯಿಸಿದರು.

ಸಂಪತ್‌ ಆರೋಪಿ ಅಷ್ಟೆ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಸಿದ್ದು

ತಮಗೆ ನ್ಯಾಯ ಕೊಡಿಸಿ ಎಂದು ಅಖಂಡ ಶ್ರೀನಿವಾಸಮೂರ್ತಿ ಮಾಧ್ಯಮಗಳ ಮುಂದೆ ಗೋಗರೆಯುತ್ತಿದ್ದರೂ ಕ್ಯಾರೆ ಎನ್ನದ ಕಾಂಗ್ರೆಸ್‌ ನಾಯಕರು, ಸಂಪತ್‌ರಾಜ್‌ ಅವರನ್ನು ಬಂಧಿಸಿರುವುದು ಮಹಾ ಅಪರಾಧ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ದಲಿತರ ಮುಂದೆ ಮೊಸಳೆ ಕಣ್ಣೀರು ಹಾಕುತ್ತಿರುವುದು ಈಗ ಸಾಬೀತಾಗಿದೆ. ಇನ್ನು ಮುಂದಾದರೂ ದಲಿತರ ಪರವೆಂದು ಕಣ್ಣೀರು ಹಾಕುವುದನ್ನು ಬಿಡಬೇಕು ಎಂದರು.

ದಲಿತ ಶಾಸಕರಾಗಿರುವ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಗಲಭೆ ಪ್ರಕರಣ ಸಂಬಂಧ ಯಾರೂ ಕೂಡಾ ಆರೋಪಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಬಾರದು ಎಂದು ಇದೇ ಸಂದರ್ಭದಲ್ಲಿ ಸಚಿವರು ಮನವಿ ಮಾಡಿದರು.
 

click me!