Union Budget 2024: ಕಾಂಗ್ರೆಸ್ ಸರಕಾರದ ಯೋಜನೆ ನೋಡಿ ಕಲಿಯಬಹುದಿತ್ತು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್

By Kannadaprabha News  |  First Published Feb 2, 2024, 12:00 AM IST

ಕಾರ್ಪೋರೇಟ್ ವಲಯದ ತೆರಿಗೆ ಪ್ರಮಾಣ ಇಳಿಸಿರುವುದು, ಹೊಸ ವಿಮಾನಗಳ ಖರೀದಿ, ವಿಮಾನ ನಿಲ್ದಾಣಗಳ ನಿರ್ಮಾಣ, ಬಡವರ ಆರೋಗ್ಯ ವಿಮೆಯ ಮೇಲೆ ತೆರಿಗೆ ವಿಧಿಸಿರುವುದು ಇವೆಲ್ಲ ನೋಡಿದರೆ ಇದೊಂದು ಶ್ರೀಮಂತರಿಗಾಗಿಯೇ ಮಂಡಿಸಿದ ಬಜೆಟ್ ಎನಿಸುತ್ತದೆ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಬಜೆಟ್ ಇದಾಗಿದೆ. ಬಡವರಿಗಾಗಿ ಬಜೆಟ್ ನಲ್ಲಿ ಏನನ್ನೂ ಕೊಟ್ಟಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 


ಬೆಳಗಾವಿ(ಫೆ.02):  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಂಡಿಸಿರುವ ಬಜೆಟ್ ಅತ್ಯಂತ ನಿರಾಸೆ ಮೂಡಿಸಿದೆ. ರಾಜ್ಯಕ್ಕೆ, ಅದರಲ್ಲೂ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿತ್ತು. ಎಲ್ಲವೂ ಹುಸಿಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ತಂದಿರುವ ಜನಪರ ಯೋಜನೆಗಳನ್ನು ನೋಡಿಯಾದರೂ ಕೇಂದ್ರ ಸರಕಾರ ಬಜೆಟ್ ಮಂಡಿಸಬಹುದಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಾರ್ಪೋರೇಟ್ ವಲಯದ ತೆರಿಗೆ ಪ್ರಮಾಣ ಇಳಿಸಿರುವುದು, ಹೊಸ ವಿಮಾನಗಳ ಖರೀದಿ, ವಿಮಾನ ನಿಲ್ದಾಣಗಳ ನಿರ್ಮಾಣ, ಬಡವರ ಆರೋಗ್ಯ ವಿಮೆಯ ಮೇಲೆ ತೆರಿಗೆ ವಿಧಿಸಿರುವುದು ಇವೆಲ್ಲ ನೋಡಿದರೆ ಇದೊಂದು ಶ್ರೀಮಂತರಿಗಾಗಿಯೇ ಮಂಡಿಸಿದ ಬಜೆಟ್ ಎನಿಸುತ್ತದೆ. ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಬಜೆಟ್ ಇದಾಗಿದೆ. ಬಡವರಿಗಾಗಿ ಬಜೆಟ್ ನಲ್ಲಿ ಏನನ್ನೂ ಕೊಟ್ಟಿಲ್ಲ. ನಾವು ರಾಜ್ಯದಲ್ಲಿ ಹಲವಾು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅವುಗಳನ್ನು ಮಾದರಿಯಾಗಿಟ್ಟುಕೊಂಡು ಬಜೆಟ್ ಜಾರಿಗೊಳಿಸಿದ್ದರೆ ಜನರು ಮೆಚ್ಚುತ್ತಿದ್ದರು ಎಂದಿದ್ದಾರೆ.

Tap to resize

Latest Videos

ರಾಹುಲ್ ಗಾಂಧಿ ಭಾರತ್ ಜೋಡೋ, ದಕ್ಷಿಣದಲ್ಲಿ ಕಾಂಗ್ರೆಸ್ ಸಂಸದನ ಪ್ರತ್ಯೇಕ ರಾಷ್ಟ್ರದ ಕೂಗು!

ಲಕ್ ಪತಿ ದೀದಿ ಯೋಜನೆ ವಿಸ್ತರಿಸುವುದಾಗಿ ಹೇಳಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ಜಾರಿಯಾಗಿದೆ? ಈವರೆಗೆ ಯಾರಿಗೆ ಪ್ರಯೋಜನವಾಗಿದೆ ಗೊತ್ತಿಲ್ಲ. ಕೌಶಲ್ಯಾಭಿವೃದ್ಧಿ ಮೂಲಕ ಹೊಸ ಉದ್ಯೋಗ ಸೃಷ್ಟಿ ಮಾಡುವುದಾಗಿ ಬಜೆಟ್ ನಲ್ಲಿ ಹೇಳಲಾಗಿದೆ. ಈ ಹಿಂದೆ ಕೂಡ ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಬಿಜೆಪಿ ಹೇಳಿತ್ತು. ಕಳೆದ 10 ವರ್ಷದಲ್ಲಿ ಎಷ್ಟು ಜನರಿಗೆ ಉದ್ಯೋಗ ಒದಗಿಸಲಾಗಿದೆ? ಈವರೆಗೆ ನೀಡಿದ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ? ಇಂದಿನ ಬರಗಾಲ ಪರಿಸ್ಥಿತಿ ನಿಭಾಯಿಸಲು ಏನನ್ನು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿರುವ ಸಚಿವರು, ನಮ್ಮ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಈಡೇರಿಸಿದೆ. ಆದರೆ ಅವರು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನೂ ಈಡೇರಿಸಿಲ್ಲ, ಬಜೆಟ್ ಘೋಷಣೆಗಳನ್ನೂ ಈಡೇರಿಸಿಲ್ಲ ಎಂದಿದ್ದಾರೆ.

click me!