ಲೋಕಸಭಾ ಚುನಾವಣೆ 2024: ಉಡುಪಿ-ಚಿಕ್ಕಮಗಳೂರಲ್ಲಿ ಪ್ರಮೋದ್ ಮಧ್ವರಾಜ್‌ಗೆ ಟಿಕೆಟ್‌ಗೆ ಒತ್ತಾಯ

By Girish Goudar  |  First Published Feb 1, 2024, 10:00 PM IST

12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ 13 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಪ್ರಮೋದ ಮಧ್ವರಾಜ ಅವರಿಗೆ ಬಿಜೆಪಿಯಿಂದ ಅವಕಾಶ ನೀಡಬೇಕು ಎಂದ ಮೀನುಗಾರರ ಸಂಘಟನೆ ಮುಖಂಡ ಕಿಶೋರ ಡಿ.ಸುವರ್ಣ 


ಉತ್ತರಕನ್ನಡ(ಫೆ.01):  ಮುಂದಿನ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೀನುಗಾರ ಸಮಾಜದ ಪ್ರಮೋದ ಮಧ್ವರಾಜ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಮೀನುಗಾರರ ಸಂಘಟನೆ ಮುಖಂಡ ಕಿಶೋರ ಡಿ.ಸುವರ್ಣ ಒತ್ತಾಯಿಸಿದ್ದಾರೆ. 

ಇಂದು(ಗುರುವಾರ) ಕಾರವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಕಿಶೋರ ಡಿ.ಸುವರ್ಣ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಯಾವುದೇ ಹಿಂದುಳಿದ ವರ್ಗದ ಅಭ್ಯರ್ಥಿಗೆ ಅವಕಾಶ ನೀಡಿಲ್ಲ. ರಾಜ್ಯದಲ್ಲಿ ಶೇ. 50ರಷ್ಟು ಹಿಂದುಳಿದ ವರ್ಗದವರೇ ಇದ್ದರೂ ಚುನಾವಣೆಯಲ್ಲಿ ಅವಕಾಶ ಸಿಗದಿರುವು ಬೇಸರ ತಂದಿದೆ. ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರು ಹಾಗೂ ಮೀನುಗಾರರು ಮಹತ್ವದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗಳ ನಿವಾರಣೆ ಮತ್ತು ಮೀನುಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಗೆ ಓರ್ವ ಮೀನುಗಾರ ಪ್ರತಿನಿಧಿಯ ಅವಶ್ಯಕತೆಯಿದೆ. ಹೀಗಾಗಿ 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ 13 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಪ್ರಮೋದ ಮಧ್ವರಾಜ ಅವರಿಗೆ ಬಿಜೆಪಿಯಿಂದ ಅವಕಾಶ ನೀಡಬೇಕು ಎಂದರು. 

Latest Videos

undefined

ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಇನ್ನೂ 8 ಕೋಚ್‌ಗಳನ್ನು ಸೇರಿಸಿ: ಶಿವಮೊಗ್ಗ ಸಂಸದರ ಆಗ್ರಹ!

ಕೇವಲ ಬಿಜೆಪಿಯಿಂದ ಮಾತ್ರವೇ ಯಾಕೆ ಒಬಿಸಿ ಪರವಾಗಿ ಮೀನುಗಾರ ಮುಖಂಡರಿಗೆ ಟಿಕೆಟ್‌ಗೆ ಆಗ್ರಹಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಿದರೂ ಗೆಲ್ಲುತ್ತಾರೆಂಬ ವಿಶ್ವಾಸವಿದೆ. ಹಾಗಾಗಿ ಈ ಬಾರಿ ಪ್ರಮೋದ ಮಧ್ವರಾಜ ಅವರಿಗೆ ಟಿಕೆಟ್ ನೀಡಬೇಕು. ಉಡುಪಿಯು ಪ್ರಮೋದ್ ಮಧ್ವರಾಜ ಅವರ ಸ್ವಕ್ಷೇತ್ರವಾಗಿದ್ದು, ಮೀನುಗಾರರು ಕೂಡಾ. ಉಡುಪಿಯಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿದ್ದು, ಅವರು ರಾಜ್ಯ ನಾಯಕಿಯಾಗಿರುವ ಕಾರಣ ಬೇರೇಡೆ ಅವಕಾಶ ನೀಡಿ ಉಡುಪಿಯಲ್ಲಿ ಪ್ರಮೋದ ಮಧ್ವರಾಜ ಅವರಿಗೆ ಮಣೆ ಹಾಕಬೇಕು ಎಂದು ಒತ್ತಾಯಿಸಿದರು. 

ಮೀನುಗಾರ ಮುಖಂಡರಾದ ನಿತಿನ್ ಗಾಂವ್ಕರ್, ರೋಶನ್ ಹರಿಕಂತ್ರ, ಭರತ ಖಾರ್ವಿ, ಸಚಿನ ಹರಿಕಂತ್ರ, ವಿಶ್ವನಾಥ ತಾಂಡೇಲ ಮತ್ತಿತರರು ಭಾಗವಹಿಸಿದ್ದರು.

click me!