ಕೊರೋನಾ ನಿಯಂತ್ರಿಸಲು ಮುನ್ನೆಚ್ಚರಿಕೆ ವಹಿಸಿ| ಬಿಬಿಎಂಪಿ ವ್ಯಾಪ್ತಿಯ ಸೋಂಕಿತರು ಶೇ.60 ರಷ್ಟು ಹೊರ ರಾಜ್ಯದವರು| ಕೊರೋನಾವನ್ನು ಸುಲಭವಾಗಿ ಸೋಲಿಸಲು ಎಲ್ಲಾ ಅವಕಾಶ ಇದೆ| ಕೊರೋನಾ ಬಗ್ಗೆ ಜನ ಉದಾಸೀನತೆ ತೋರಿದರೆ ಸಂಕಷ್ಟ: ಸಚಿವ ಡಾ.ಸುಧಾಕರ್|
ಚಿಕ್ಕಬಳ್ಳಾಪುರ(ಮಾ.27): ಮುಂದಿನ ಎರಡು ತಿಂಗಳು ಕಾಲ ಎದುರಾಗಲಿರುವ ಕೊರೋನಾ ಎರಡನೇ ಅಲೆಯನ್ನು ಮಣಿಸಿದರೆ ಹೆಚ್ಚು ಕಡಿಮೆ ಮಹಾಮಾರಿ ಕೊರೋನಾದಿಂದ ನಾವು ಪಾರಾದಂತೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಶುಕ್ರವಾರ ನಡೆದ ಗ್ರಾಪಂ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಯೂ ಹಂತ ಹಂತವಾಗಿ ಕೊರೋನಾ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ಜನತೆ ಮುನ್ನೆಚ್ಚರಿಕೆ ವಹಿಸಬೇಕು
ನಾವು ಮುನ್ನೆಚ್ಚರಿಕೆ ವಹಿಸಿ ಕೊರೋನಾ ನಿಯಂತ್ರಣ ಮಾಡಬೇಕಿದೆ. ಜನರಲ್ಲಿ ಪದೇ ಪದೇ ಮನವಿ ಮಾಡಿಕೊಳ್ಳುವುದನೆಂದರೆ ಮಾಸ್ಕ್ ಧರಿಸಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಮಾರಂಭಗಳನ್ನು ಆದಷ್ಟುಕಡಿಮೆ ಮಾಡಬೇಕು, 500 ಕ್ಕಿಂತ ಹೆಚ್ಚು ಜನ ಒಂದು ಕಡೆ ಸೇರಬಾರದು. ಯಾವುದೇ ಕಾರ್ಯಕ್ರಮ, ಸಭೆ, ಜಾತ್ರೆ, ಹಬ್ಬವಾಗಲಿ ಸರಳವಾಗಿ ಆಚರಿಸಬೇಕು, ಇಂತಹ ಕ್ರಮಗಳಿಂದ ಕೊರೋನಾವನ್ನು ರಾಜ್ಯದಲ್ಲಿ ನಿಯಂತ್ರಣಕ್ಕೆ ತರಬಹುದೆಂದರು.
ಕಡ್ಡಾಯ ಮಾಸ್ಕ್ ಆದೇಶ ಇದ್ರೂ ಫಾಲೋ ಮಾಡೋರಿಲ್ಲ
ಮಹಾರಾಷ್ಟ್ರದಲ್ಲಿ ಒಂದೇ ದಿನ 35 ಸಾವಿರ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಬಹುತೇಕ ನಗರಗಳು ಲಾಕ್‌ಡೌನ್ ಆಗಿವೆ. ಆ ಪರಿಸ್ಥಿತಿಗೆ ನಾವು ಹೋಗಬಾರದು. ಪ್ರತಿಯೊಂದು ಜೀವ ಕೂಡ ಅಮೂಲ್ಯ. ನಮ್ಮ ಮನೆಗಳಲ್ಲಿರುವ ಹಿರಿಯರು, ಕಿರಿಯರಾಗಲಿ ಯಾರನ್ನಾದರೂ ಒಬ್ಬರನ್ನು ಕಳೆದುಕೊಂಡರೆ ಎಷ್ಟು ನೋವು ಆಗುತ್ತದೆಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ ಎಂದು ಸಚಿವರು ಹೇಳಿದರು.
ಒಂದು ವರ್ಷದಿಂದ ಕೊರೊನಾವನ್ನು ನೋಡುತ್ತಿದ್ದೇವೆ. ನಾವು ಇನ್ನೂ ಗಟ್ಟಿಯಾಗಿದ್ದೇವೆಂಬ ಉದಾಸೀನತೆ ಸಾರ್ವಜನಿಕರಲ್ಲಿ ಬಂದಿದೆ. ಕೊರೊನಾದಿಂದ ಹೋದವರನ್ನು ನೆನಸಿಕೊಳ್ಳುತ್ತಿಲ್ಲ. ನಮ್ಮ ಸುತ್ತಮುತ್ತ ಜನ ಆಸ್ಪತ್ರೆಗಳಲ್ಲಿ ಎಷ್ಟೊಂದು ಕಷ್ಟಪಟ್ಟಿದ್ದಾರೆಂಬ ಅವರ ಅನುಭವದ ಮಾತು ಕೇಳಿದರೂ ಈ ಬಗ್ಗೆ ಉದಾಸೀನತೆ ಮೆರೆಯುತ್ತಿದ್ದೇವೆ. ಈ ಧೋರಣೆ ಹೋಗಬೇಕು. ಪ್ರತಿಯೊಬ್ಬರು ಕೂಡ ಕೊರೊನಾ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದರು.
ಕೊರೋನಾ ಸೋಲಿಸಲು ನಿಯಮ ಪಾಲಿಸಿ
ಕೊರೋನಾ ಮೊದಲನೇ ಅಲೆ ಬಂದಾಗ ನಮಗೆ ಲಸಿಕೆ ಇರಲಿಲ್ಲ. ಆದರೆ ಎರಡನೇ ಅಲೆ ಬರುತ್ತಿರುವಾಗ ಲಸಿಕೆ ಇದೆ. ಪ್ರಧಾನಿ ಮೋದಿ ದಿಟ್ಟನಾಯಕತ್ವದಿಂದ 10 ತಿಂಗಳಲ್ಲಿ ದಾಖಲೆ ಮಾಡಿ ಲಸಿಕೆ ತಯಾರಾಗಿದೆ. 45 ವರ್ಷ ಮೇಲ್ಪಟ್ಟವರು ಪ್ರತಿಯೊಬ್ಬರು ಲಸಿಕೆ ಪಡೆದುಕೊಂಡು ಉಳಿದವರಿಗೆ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಿದರೆ ಕೊರೋನಾವನ್ನು ನಾವು ಸುಲಭವಾಗಿ ಸೋಲಿಸಬಹುದೆಂದರು.
ಬೆಂಗಳೂರು ಕರಗ ಕುರಿತು ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಈಗಾಗಲೇ ಸರ್ಕಾರ ಎಲ್ಲಾ ಹಬ್ಬಗಳನ್ನು ನಿಷೇಧಿಸಿ ಆದೇಶ ಮಾಡಲಾಗಿದೆ. ಹಬ್ಬಗಳ ಆಚರಣೆ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಹಬ್ಬಗಳನ್ನು ಮಾಡಿ ಆದರೆ ಬಹಳ ಸರಳತೆಯಿಂದ ಮಾಡಬೇಕೆಂದು ಸಿಎಂ ನಿರ್ದೇಶನ ಮಾಡಿದ್ದಾರೆ. ಅದೇ ನಿಟ್ಟಿನಲ್ಲಿ ಬೆಂಗಳೂರು ಕರಗ ವಿಚಾರದಲ್ಲಿಯು ಅನುಸರಿಸಲಾಗುವುದೆಂದು ಸ್ಪಷ್ಪಡಿಸಿದರು. ಯಾರೆ ಹೊರ ರಾಜ್ಯಗಳಿಂದ ಬಂದವರು ಬೆಂಗಳೂರಿನಲ್ಲಿ ನೆಲೆಸಿದ್ದರೆ ಕೊರೊನಾ ಪರೀಕ್ಷೆ ಕಡ್ಡಾಯ. ಇಂದು ಬಂದು ನಾಳೆ ಹೋಗವರಿಗೆ ಅಥವ ಎರಡು, ಮೂರು ದಿನ ಇದ್ದು ಹೋಗವರಿಗೆ ಪರೀಕ್ಷೆ ಕಡ್ಡಾಯವಿಲ್ಲ. ಆದರೆ ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸ್‌ಗಡ್ ರಾಜ್ಯಗಳಿಂದ ಬಂದವರಿಗೆ ಕೊರೊನಾ ಕಡ್ಡಾಯ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಪಡಿಸಿದ್ದಾರೆ.