ದೊರೆಸ್ವಾಮಿ ಪಾಕ್ ಏಜೆಂಟ್ ಹೇಳಿಕೆ ಒಪ್ಪೊಲ್ಲ ಕೈ ಮುಖವಾಡ ಹಾಕದಿರಲಿ | ಯತ್ನಾಳ್ ಹೇಳಿಕೆ ಪಕ್ಷಕ್ಕೆ ಧಕ್ಕೆಯಿಲ್ಲ, ಕ್ರಮದ ಅಗತ್ಯವಿಲ್ಲ: ಈಶ್ವರಪ್ಪ| ಕುಮಾರಸ್ವಾಮಿ ತಾವೊಬ್ಬ ರೈತ ಮುಖಂಡ ಎಂಬ ರೀತಿ ಪೋಸ್ ನೀಡುತ್ತಿದ್ದಾರೆ| ರೈತರ ಪರ ಮಾತನಾಡೋಕೆ ಅವರಿಗೇನು ಹಕ್ಕಿದೆ|
ಗಂಗಾವತಿ(ಮಾ.01): ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಸ್ವಾತಂತ್ರ್ಯ ಹೋರಾಟಗಾರರು. ಅವರು ನಮಗೆಲ್ಲ ಮಾರ್ಗದರ್ಶನ ಮಾಡಬೇಕಿತ್ತು. ಆದರೆ ಪ್ರಧಾನಿ ವಿರುದ್ಧ ಮಾತನಾಡುತ್ತಾರೆ. ಒಂದು ಪಕ್ಷ, ವರ್ಗದ ಪರವಾಗಿ ಮಾತನಾಡುತ್ತಾರೆ ಎಂಬ ಬೇಸರ ಇದೆ. ಆದರೆ ಅವರನ್ನು ಪಾಕಿಸ್ತಾನ ಏಜೆಂಟ್ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದನ್ನು ನಾನು ಒಪ್ಪುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಹುಪಾಲು ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡರಾದರೂ ಪಾಕಿಸ್ತಾನ ಏಜೆಂಟ್ ಎಂದಿದ್ದನ್ನು ಒಪ್ಪುವುದಿಲ್ಲ ಎಂದರು. ಆದರೆ ಅವರು (ದೊರೆಸ್ವಾಮಿ) ಒಂದು ಪಕ್ಷದ ಮುಖವಾಡ ಹಾಕಿಕೊಳ್ಳಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು. ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆ ಇಲ್ಲ ಅಲ್ಲದೆ ಅವರನ್ನು ಪಕ್ಷದಿಂದ ಉಚ್ಛಾಟಿಸುವುದು ಅವಶ್ಯಕತೆ ಇಲ್ಲ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಿದ್ದರಾಮಯ್ಯ ಕೊಲೆಗಡುಕ, ಕೋಮುವಾದಿ ಎಂದು ಅವಹೇಳನಕಾರಿಯಾಗಿ ಮಾತನಾಡಿದಾಗ ಸೋನಿಯಾ ಗಾಂಧಿ ಏಕೆ ಕ್ರಮ ಕೈಗೊಳ್ಳಲಿಲ್ಲ. ಅವರನ್ನು ಯಾಕೆ ಉಚ್ಛಾಟಿಸಲಿಲ್ಲ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿದರಲ್ಲದೇ ಈಗ ಯತ್ನಾಳ್ ಹೇಳಿಕೆಯನ್ನು ಹಿಡಕೊಂಡು ಕಾಂಗ್ರೆಸ್‌ನವರು ಅಲ್ಲಾಡ್ಸಿದ್ದಾರೆ ಎಂದರು.
ಯತ್ನಾಳ್ ಅವರ ವಿಷಯ ಮುಂದಿಟ್ಟುಕೊಂಡು ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ ಕಾಂಗ್ರೆಸ್‌ನವರು. ಅದು ಹೇಗೆ ಬಿಡುವುದಿಲ್ಲ ನಾನು ನೋಡಿಯೇ ಬಿಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಷಯ ಚರ್ಚೆಯಾಗಬೇಕು. ಸಂವಿಧಾನದ ಅನ್ವಯ ಎಲ್ಲರೂ ಮಾತನಾಡಬೇಕು. ಆದರೆ, ಕಾಂಗ್ರೆಸ್ ಮುಖಂಡರು ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಹೇಳುತ್ತಿರುವುದು ಯಾವ ನ್ಯಾಯ? ಅವರು ಹೇಗೆ ನಡೆಯಲು ಬಿಡುವುದಿಲ್ಲ. ನಾವು ನೋಡುತ್ತೇವೆ. ಏನ್ ಮಾಡುತ್ತಾರೆ ಮಾಡಲಿ ಎಂದು ಸವಾಲು ಹಾಕಿದರು.
ಪಾಕಿಸ್ತಾನ ಜಿಂದಾಬಾದ್ ಎಂದಾಗ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಕೇವಲ ಒಂದು ಹೇಳಿಕೆ ನೀಡಿ ಕೈತೊಳೆದುಕೊಂಡರು. ಅಂದು ಹೋರಾಟ ಮಾಡಬೇಕಾಗಿತ್ತು. ಅಂದು ಹೋರಾಟ ಮಾಡದ ಇವರು ಈಗ ಯತ್ನಾಳ್ ಅವರ ವಿಷಯ ಹಿಡಿದುಕೊಂಡು ಅಲ್ಲಾಡಿಸುತ್ತಿದ್ದಾರೆ. ರಮೇಶಕುಮಾರ್ ಅವರು ತಾವೇ ಅಂಬೇಡ್ಕರ್ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಸಂವಿಧಾನ ತಾವೇ ಬರೆದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರೈತರ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ತಾರತಮ್ಯ ಮಾಡುತ್ತಿದೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ತಾವೊಬ್ಬ ರೈತ ಮುಖಂಡ ಎಂಬ ರೀತಿ ಪೋಸ್ ನೀಡುತ್ತಿದ್ದಾರೆ. ರೈತರ ಪರ ಮಾತನಾಡೋಕೆ ಅವರಿಗೇನು ಹಕ್ಕಿದೆ, ಮುಂದೆ ಬಜೆಟ್ ನೋಡಿ ಬಿಜೆಪಿ ಸರ್ಕಾರ ರೈತ ಪರವೋ, ವಿರೋಧವೋ ಎಂಬುದು ನಿಮಗೇ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.