* ಕಾಂಗ್ರೆಸ್‌ನವರು ಮರೆಯಲ್ಲಿ ದೇವರಿಗೆ ಹೋದರೆ, ನಾವು ಎದುರಿಗೆ ಹೋಗುತ್ತೇವೆ
* ಮೈಸೂರಿನಲ್ಲಿ ದೇವಸ್ಥಾನ ಕೆಡವಿರುವುದನ್ನು ಖಂಡಿಸಿದ ಕಾಂಗ್ರೆಸ್
* ಕೊಪ್ಪಳದಲ್ಲಿ ನಿರಾಶ್ರಿತರ ಕೇಂದ್ರ ಮಂಜೂರು
ಕೊಪ್ಪಳ(ಸೆ.18): ಕಾಂಗ್ರೆಸ್ ನಾಯಕರು ಮರೆಯಲ್ಲಿ ದೇವರಿಗೆ ಹೋದರೆ ನಾವು (ಬಿಜೆಪಿ) ಎದುರಿಗೆ ಹೋಗುತ್ತೇವೆ ಎಂದು ಹೇಳಿರುವ ಸಚಿವ ಹಾಲಪ್ಪ ಆಚಾರ, ಕಾಂಗ್ರೆಸ್ಸಿನವರಿಗೆ ಈಗೇಕೆ ದೇವರ ಮೇಲೆ ಪ್ರೀತಿ ಬಂದಿದೆ ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ದೇವಸ್ಥಾನ ಕೆಡವಿರುವುದನ್ನು ಕಾಂಗ್ರೆಸ್ ಖಂಡಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಕೊಪ್ಪಳದಲ್ಲಿ ಉತ್ತರಿಸಿದ ಅವರು, ಕಾಂಗ್ರೆಸ್ ನಾಯಕರಿಗೆ ಈಗ ದೇವಸ್ಥಾನದ ಬಗ್ಗೆ ಎಲ್ಲಿಲ್ಲದ ಪ್ರೀತಿ ಬಂದಿದೆ. ಹೀಗಾಗಿ ಅವರು ದೇವಸ್ಥಾನ ಕೆಡವಿದ ಬಗ್ಗೆ ಮಾತನಾಡು ತ್ತಿದ್ದಾರೆ. ಇಷ್ಟು ದಿನ ದೇವಸ್ಥಾನಗಳ ಬಗ್ಗೆ ಏಕೆ ಕಾಳಜಿ ಇರಲಿಲ್ಲ ಎಂದು ಪ್ರಶ್ನಿಸಿದರು.
undefined
ಸಂಭಾವ್ಯ ಮೂರನೇ ಅಲೆ ಬಾರದಿರಲಿ ಎಂದು ಬೇಡಿಕೊಳ್ಳುತ್ತೇವೆ. ಆದರೆ ತಜ್ಞರು 2ನೇ ಅಲೆ ಬಂದಾಗ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬಿರುತ್ತದೆ ಎಂದು ಹೇಳಿದ್ದರಿಂದ ಎಚ್ಚರಿಕೆ ವಹಿಸಲಾಗಿದೆ. ರಾಜ್ಯಾದ್ಯಂತ ಡೇಂಘಿ ಸೇರಿದಂತೆ ವಿವಿಧ ಕಾಯಿಲೆಗಳಿಂದ ಮಕ್ಕಳು ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಡಿಕೆಗಿಂತಲೂ ಶೇ. 20ರಷ್ಟು ಅಧಿಕ ಮಳೆಯಾಗಿದ್ದರಿಂದ ಡೇಂಘಿ ಸೇರಿದಂತೆ ಮತ್ತಿತರ ಕಾಯಿಲೆಗಳು ಅಧಿಕ ಪ್ರಮಾಣದಲ್ಲಿ ಹರಡುತ್ತಿವೆ. ಇದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ಆದರೆ, ಇದು ಪ್ರತಿ ವರ್ಷವೂ ಬರುವ ಸಾಮಾನ್ಯ ಕಾಯಿಲೆಯಾಗಿದ್ದು ಕೊರೋನಾ 3ನೇ ಅಲೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಭಿಕ್ಷಾಟನೆ ನಿಯಂತ್ರಿಸಲು ಅಧಿಕಾರಿಗಳು ಕ್ರಮಕೈಗೊಂಡಿದ್ದರೂ ಇನ್ನೂ ನಿಂತಿಲ್ಲ. ಹೀಗಾಗಿ ಅಧಿಕಾರಿಗಳು ಮತ್ತೆ ಮತ್ತೆ ದಾಳಿ ನಡೆಸಿ ನಿಯಂತ್ರಿಸುವಂತೆ ಸೂಚಿಸಲಾಗುವುದು ಎಂದ ಅವರು, ಕೊಪ್ಪಳದಲ್ಲಿ ನಿರಾಶ್ರಿತರ ಕೇಂದ್ರ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಕ್ಕಳಿಗೆ ವೈರಲ್ ಫೀವರ್ ಹೆಚ್ಚಳಕ್ಕೆ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ ಆಚಾರ್
ಪದವಿ ಕಾಲೇಜು ಪ್ರವೇಶಕ್ಕೆ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದ್ದು ಈ ಕುರಿತು ಶಿಕ್ಷಣ ಸಚಿವರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಸ್ಪತ್ರೆಯ ವೈದ್ಯರು ಸೇರಿದಂತೆ ಆಡಳಿತಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು ಎಂದ ಸಚಿವರು, ಮೆಡಿಕಲ್ ಕಾಲೇಜ್ ನಿರ್ದೇಶಕರನ್ನು ನೇಮಿಸಬೇಕಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ಸಂಸದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಮೈನಳ್ಳಿ ಇದ್ದರು.