ಬಳ್ಳಾರಿ ಹಾಗೂ ಹೊಸಪೇಟೆ ನಗರದಲ್ಲಿ 24 ತಾಸುಗಳ ಕುಡಿಯುವ ನೀರು ಪೂರೈಕೆ ಯೋಜನೆ| ಬಳ್ಳಾರಿಯಲ್ಲಿ ಬರುವ ಡಿಸೆಂಬರ್‌ರೊಳಗೆ ಪೂರ್ಣ|ಹೊಸಪೇಟೆಯ 7 ಜೋನ್‌ಗಳಲ್ಲಿ ಜೂನ್ 29ರಂದೇ ಚಾಲನೆ: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್|
ಬಳ್ಳಾರಿ(ಮೇ.13): ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ದಿನದ 24 ತಾಸುಗಳ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಈ ಸಂಬಂಧ ಗುತ್ತಿಗೆದಾರರಿಗೆ
ತ್ವರಿತವಾಗಿ ಕೆಲಸ ಮುಗಿಸಲು ಸೂಚನೆ ನೀಡಿದ್ದು, ಬರುವ ಜೂನ್ 29 ರಂದು ನಗರದ 13 ಜೋನ್‌ಗಳಲ್ಲಿ ನೀರು ಸರಬರಾಜಿಗೆ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಬಳ್ಳಾರಿ ಹಾಗೂ ಹೊಸಪೇಟೆ ನಗರದಲ್ಲಿ 24 ತಾಸುಗಳ ಕುಡಿಯುವ ನೀರು ಪೂರೈಕೆ ಯೋಜನೆ ನಡೆದಿದೆ. ಬಳ್ಳಾರಿಯಲ್ಲಿ ಬರುವ ಡಿಸೆಂಬರ್‌ರೊಳಗೆ ಪೂರ್ಣಗೊಳಿಸಲಾಗುವುದು. ಹೊಸಪೇಟೆ ನಗರದ 7 ಜೋನ್‌ಗಳಲ್ಲಿ ಜೂನ್ 29ರಂದೇ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ
ನಗರದ 35 ವಾರ್ಡ್‌ಗಳಲ್ಲಿನ ಅನಧಿಕೃತ ಕಟ್ಟಡಗಳ ಸರ್ವೇ ಮಾಡಿ ವರದಿ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಗರದಲ್ಲಿ ಅನಧಿಕೃತ ಲೇಔಟ್‌ಗಳು ಇವೆ ಎಂಬ ಮಾಹಿತಿ ಇದೆ. ಇವುಗಳಿಂದ ಪಾಲಿಕೆಗೆ ತೆರಿಗೆ ಸಹ ಬರುತ್ತಿಲ್ಲ. ಇವುಗಳಿಂದ ಸಹ ತೆರಿಗೆ ಸಂಗ್ರಹಿಸುವಂತಾಗಬೇಕು. ಈ ದಿಸೆಯಲ್ಲಿ ಮುಂದಿನ ಹಂತದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ನಗರದ ಅಭಿವೃದ್ಧಿ ದೃಷ್ಟಿಯಿಂದ ತೆರಿಗೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಕಳೆದ ಮೂರು ವರ್ಷಗಳಿಂದ ತೆರಿಗೆ ಏರಿಕೆ ಮಾಡಿರಲಿಲ್ಲ. 2020/21ನೇ ಸಾಲಿಗೆ ವಸತಿಯುತ ಆಸ್ತಿಗೆ ಶೇ. 20ರಷ್ಟು ಹಾಗೂ ವಾಣಿಜ್ಯ ಬಳಕೆಯ ಆಸ್ತಿಗಳಿಗೆ ಶೇ. 25ರಷ್ಟು ಏರಿಕೆ ಮಾಡಲಾಗಿದೆ. ಪಾಲಿಕೆಗಳಲ್ಲಿ ಪೌರ ಕಾರ್ಮಿಕರು ಸೇರಿದಂತೆ ಸಿಬ್ಬಂದಿ ಕೊರತೆ ಇರುವುದು ಗಮನಕ್ಕಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ನಗರದಲ್ಲಿ ಯುಜಿಡಿ ವ್ಯವಸ್ಥೆ ತುಂಬಾ ಹಳೆಯದು. ಹೊಸದಾಗಿ ಯುಜಿಡಿ ನಿರ್ಮಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿ ಎಲ್‌ಇಡಿ ಲ್ಯಾಂಪ್ ಅಳವಡಿಸಲು ಪ್ರಸ್ತಾಪನೆ ಬಂದಿದೆ. ಶೀಘ್ರವೇ ಅನುಮೋದನೆ ನೀಡಲಾಗುವುದು. ಅಮೃತ ಯೋಜನೆಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ 110 ಎಕರೆ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿವೇಶನಗಳನ್ನು ನಿರ್ಮಿಸುವ ಪ್ರಸ್ತಾವನೆ ಸಚಿವ ಸಂಪುಟ ಮುಂದಿದೆ. ಅದಕ್ಕೂ ಅನುಮೋದನೆ ದೊರೆಯಲಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಶಾಸಕ ಬಿ.ನಾಗೇಂದ್ರ, ಸಂಸದ ವೈ. ದೇವೇಂದ್ರಪ್ಪ, ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ. ಬಾಬಾ ಇದ್ದರು.
ದಮ್ಮೂರು ಶೇಖರ್ ಬುಡಾ ಅಧ್ಯಕ್ಷರಾಗಿ ಮುಂದುವರಿಕೆ:
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಈ ಹಿಂದೆ ನೇಮಕವಾಗಿದ್ದವರೆ ಮುಂದುವರಿಯಲಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗೆ ಶಿಫಾರಸು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,ಈ ಹಿಂದಿನವರೇ ಅಧ್ಯಕ್ಷರನ್ನಾಗಿ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು. ಈ ಮೂಲಕ ಬುಡಾ ಅಧ್ಯಕ್ಷ ಸ್ಥಾನಕ್ಕಾಗಿ ತೆರೆಮರೆಯಲ್ಲಿ ನಡೆದಿರುವ ಪೈಪೋಟಿಗೆ ನಗರಾಭಿವೃದ್ಧಿ ಸಚಿವರು ತೆರೆ ಎಳೆದರು.
ಯುವ ಮೋರ್ಚಾದಲ್ಲಿ ಗುರುತಿಸಿಕೊಂಡು ಪಕ್ಷದ ಬೆಳವಣಿಗೆಗೆ ಸಾಕಷ್ಟುಶ್ರಮಿಸಿರುವ ದಮ್ಮೂರು ಶೇಖರ್ ಅವರನ್ನು ಈ ಹಿಂದೆ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಪಕ್ಷದ ಕೆಲ ನಾಯಕರ ಅಸಮಾಧಾನದಿಂದ ನೇಮಕವನ್ನು ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ದಮ್ಮೂರು ಶೇಖರ್‌ಗೆ ಅಧ್ಯಕ್ಷ ಯೋಗ ಕೂಡಿ ಬರುವ ಸುಳಿವನ್ನು ಸಚಿವರು ನೀಡಿದರು.