ಬೆಂಗಳೂರು: ಮೆಟ್ರೋ ಕ್ಯೂಆರ್‌ ಟಿಕೆಟ್‌ ಬಳಕೆ ಮೂರು ಪಟ್ಟು ಹೆಚ್ಚಳ..!

By Kannadaprabha News  |  First Published Apr 21, 2023, 4:42 AM IST

ಪ್ರಯಾಣಿಕರ ಸ್ಪಂದನೆ, 6 ಲಕ್ಷಕ್ಕೂ ಹೆಚ್ಚು ಜನರಿಂದ ವಾಟ್ಸ್‌ಆ್ಯಪ್‌, ಮೆಟ್ರೋ ಆ್ಯಪ್‌, ವೆಬ್‌ನಲ್ಲಿ ಕ್ಯೂಆರ್‌ ಕೋಡ್‌ ಟಿಕೆಟ್‌ ಬುಕ್‌, 5 ತಿಂಗಳಲ್ಲಿ ಮೆಟ್ರೋಗೆ 6 ಕೋಟಿ ಲಾಭ. 


ಬೆಂಗಳೂರು(ಏ.21):  ದಿನದಿಂದ ದಿನಕ್ಕೆ ನಮ್ಮ ಮೆಟ್ರೋದ ‘ಇ-ಟಿಕೆಟ್‌’ಗೆ ಡಿಮ್ಯಾಂಡ್‌ ಹೆಚ್ಚುತ್ತಿದೆ. ಆರಂಭಕ್ಕೆ ಹೋಲಿಸಿದರೆ ಪ್ರಸ್ತುತ ಬಳಕೆ ಮೂರು ಪಟ್ಟು ಹೆಚ್ಚಿದ್ದು, ಐದು ತಿಂಗಳಲ್ಲಿ 6.50 ಕೋಟಿಗೂ ಹೆಚ್ಚಿನ ಆದಾಯವನ್ನು ಬಿಎಂಆರ್‌ಸಿಎಲ್‌ ಗಳಿಸಿದೆ.

ಟಿಕೆಟ್‌ ಪಡೆಯಲು ಸಾಲುಗಟ್ಟಿನಿಲ್ಲುವುದರಿಂದ ತಪ್ಪಿಸಲು ಬಿಎಂಆರ್‌ಸಿಎಲ್‌ ತಂದಿರುವ ಕ್ಯೂಆರ್‌ ಕೋಡ್‌ ಆಧಾರಿತ ಇ-ಟಿಕೆಟ್‌ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಮಾರ್ಟ್‌ ಫೋನ್‌ಗಳ ಮೂಲಕ ವಾಟ್ಸ್‌ಆ್ಯಪ್‌, ನಮ್ಮ ಮೆಟ್ರೋ ಸೇರಿ ಇನ್ನಿತರ ಆ್ಯಪ್‌ಗಳ ಮೂಲಕ ಟಿಕೆಟ್‌ ಖರೀದಿಸುತ್ತಿದ್ದಾರೆ.

Tap to resize

Latest Videos

Bengaluru: ಕೆ.ಆರ್‌.ಪುರ-ಏರ್‌ಪೋರ್ಟ್‌ ಮೆಟ್ರೋ ಮಾರ್ಗಕ್ಕೆ 'ಯು ಗರ್ಡರ್‌'

ಮೂರು ಪಟ್ಟು ಹೆಚ್ಚಳ:

ಇದರ ಜೊತೆಗೆ ಸ್ಮಾರ್ಟ್‌ಕಾರ್ಡ್‌ ಬಳಕೆ ಕೂಡ ಹೆಚ್ಚಾಗಿದೆ. ಮೆಟ್ರೋದ ನೇರಳೆ, ಹಸಿರು ಮಾರ್ಗದಲ್ಲಿ ನಿತ್ಯ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದು, ಶೇ.61ರಷ್ಟುಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್‌, ಶೇ.35ರಷ್ಟುಪ್ರಯಾಣಿಕರು ಟೋಕನ್‌ ಬಳಸಿ ಸಂಚರಿಸುತ್ತಿದ್ದಾರೆ. ಕ್ಯೂಆರ್‌ ಕೋಡ್‌ ಟಿಕೆಟ್‌ ಪರಿಚಯಿಸಿದ್ದ ನವೆಂಬರ್‌ನಲ್ಲಿ 2.1 ಲಕ್ಷ ಜನ ಬಳಸಿದ್ದರೆ, ಕಳೆದ ಮಾಚ್‌ರ್‍ನಲ್ಲಿ 6.6 ಲಕ್ಷ ಪ್ರಯಾಣಿಕರು ಇದರ ಮೂಲಕ ಸಂಚರಿಸಿದ್ದಾರೆ.

ಇ-ಟಿಕೆಟ್‌ಗೆ ಡಿಮ್ಯಾಂಡ್‌:

ಕಳೆದ ಐದು ತಿಂಗಳಲ್ಲಿ 23.12 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರು ಇ-ಟಿಕೆಟ್‌ ಬಳಸಿ ಪ್ರಯಾಣಿಸಿದ್ದಾರೆ. ನವೆಂಬರ್‌ನಲ್ಲಿ 2.17 ಲಕ್ಷ, ಡಿಸೆಂಬರ್‌ನಲ್ಲಿ 4.19 ಲಕ್ಷ, ಜನವರಿ 5.12 ಲಕ್ಷ, ಫೆಬ್ರವರಿ 5.21 ಲಕ್ಷ, ಹಾಗೂ ಕಳೆದ ಮಾರ್ಚ್‌ನಲ್ಲಿ 6.63 ಲಕ್ಷ ಪ್ರಯಾಣಿಕರು ಕ್ಯೂಆರ್‌ ಕೋಡ್‌ ಬಳಸಿ ಪ್ರಯಾಣಿಸಿದ್ದಾರೆ. ಇದರಲ್ಲಿ 9.39 ಲಕ್ಷ ಪ್ರಯಾಣಿಕರು ವಾಟ್ಸ್ಯಾಪ್‌ ಮೂಲಕ, 9.15 ಲಕ್ಷ ಜನರು ಮೆಟ್ರೋ ಆ್ಯಪ್‌ ಮೂಲಕ ಹಾಗೂ 4.21 ಲಕ್ಷ ಪ್ರಯಾಣಿಕರು ಪೇಟಿಎಂ ಮೂಲಕ ಇ ಟಿಕೆಟ್‌ ಪಡೆದಿದ್ದಾರೆ. ಪ್ರತಿದಿನ ಕ್ಯೂಆರ್‌ ಕೋಡ್‌ ಬಳಸಿ ಸರಾಸರಿ 12,850 ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಿಚಾರ್ಜ್‌ ಮಾಡಿಕೊಳ್ಳಲು ಈಗಲೂ ಶೇ.81ರಷ್ಟು ಪ್ರಯಾಣಿಕರು ಜಂಕ್ಷನ್‌ಗಳ ಕೌಂಟರನ್ನೇ ಬಳಸುತ್ತಿದ್ದಾರೆ. ಶೇ.10ರಷ್ಟು ಜನ ಮೆಟ್ರೋ ಆ್ಯಪ್‌, ಶೇ.5ರಷ್ಟು ಪ್ರಯಾಣಿಕರು ಪೇಟಿಎಂ ಬಳಸುತ್ತಿದ್ದಾರೆ. ಅಮೆಜಾನ್‌ ಮತ್ತು ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ ಮೂಲಕ ಶೇ.1ರಷ್ಟು ಪ್ರಯಾಣಿಕರು ಸ್ಮಾರ್ಟ್‌ಕಾರ್ಡನ್ನು ರಿಚಾಜ್‌ರ್‍ ಮಾಡಿಕೊಳ್ಳುತ್ತಾರೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಕಳೆದ ತಿಂಗಳಿಂದ ಇ ಟಿಕೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಟೆಕ್‌ ಕಾರಿಡಾರ್‌ಗೆ ಮೆಟ್ರೋ ವಿಸ್ತರಣೆ ಆದಂತೆ ಮತ್ತಷ್ಟು ಪ್ರಯಾಣಿಕರು ಇ-ಟಿಕೆಟ್‌ ಬಳಸಬಹುದು ಎಂದು ಮೆಟ್ರೋ ಅಧಿಕಾರಿಗಳು ಹೇಳುತ್ತಾರೆ.
ಗ್ರೂಪ್‌ ಟಿಕೆಟ್‌ ಬಂದಿಲ್ಲ

Namma Metro: ಬಿಸಿಲು ಝಳದಿಂದ ಮೆಟ್ರೋ ರೈಲು ಸಂಚಾರ 20 ನಿಮಿಷ ಸ್ಥಗಿತ!

ಕಳೆದ ವರ್ಷದ ಮಧ್ಯಂತರದಿಂದಲೇ ಗ್ರೂಪ್‌ ಟಿಕೆಟ್‌ ಅಭಿವೃದ್ಧಿ ಪಡಿಸುವುದಾಗಿ ಮೆಟ್ರೋ ಹೇಳುತ್ತಿದ್ದರೂ ಅದಿನ್ನೂ ಸಾಧ್ಯವಾಗಿಲ್ಲ. ಪ್ರಸ್ತುತ ಏಕಕಾಲಕ್ಕೆ ಟಿಕೆಟ್‌ ಮುಂಗಡ ಪಡೆಯುವಾಗ ಒಂದು ಕ್ಯೂಆರ್‌ ಕೋಡ್‌ ಮೂಲಕ ಒಬ್ಬರು ಮಾತ್ರ ಪ್ರಯಾಣಿಸಬಹುದು. ಆದರೆ, ಒಂದೇ ಕ್ಯೂಆರ್‌ ಕೋಡ್‌ ಮೂಲಕ 6-10 ಮಂದಿ ಸಂಚರಿಸಲು ಸಾಧ್ಯವಾಗುವ ತಂತ್ರಜ್ಞಾನ ಇನ್ನೂ ಅಭಿವೃದ್ಧಿ ಹಂತದಲ್ಲಿದೆ.

ಮೆಟ್ರೋ ಇ-ಟಿಕೆಟ್‌ (ನವೆಂಬರ್‌-ಮಾರ್ಚ್‌)

ಇ-ಟಿಕೆಟ್‌ ಬಳಸಿದವರು 23,12,370
ಇ-ಟಿಕೆಟ್‌ ಆದಾಯ .6,64,93,032
ಪ್ರತಿದಿನ ಸರಾಸರಿ .12,846

click me!