Booster Dose Vaccine: ಸತ್ತವರಿಗೆ 2ನೇ ಡೋಸ್‌ ಆಯ್ತು, ಈಗ ಬೂಸ್ಟರ್‌ ಡೋಸ್‌ ಮೆಸೇಜ್‌..!

By Girish Goudar  |  First Published May 11, 2022, 5:56 AM IST

*   ಯಾದಗಿರಿಯ ಆರೋಗ್ಯ ಇಲಾಖೆಯಿಂದ ಮತ್ತೆ ಎಡವಟ್ಟು
*   ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಗೆ ಲಸಿಕೆ ನೀಡಿಕೆ ಸಂದೇಶ
*  ಕನ್ನಡಪ್ರಭ ಈ ಬಗ್ಗೆ ವರದಿ ಪ್ರಕಟಿಸಿದ್ದರಿಂದ ರಾಜ್ಯಾದ್ಯಂತ ಈ ಕುರಿತು ಚರ್ಚೆ 
 


ಆನಂದ್‌ ಎಂ. ಸೌದಿ

ಯಾದಗಿರಿ(ಮೇ.11):  ಸತ್ತವರಿಗೂ ಕೊರೋನಾ(Coronavirus) ಲಸಿಕೆ ನೀಡಿದ ಹಾಗೂ ಕೋವಿಡ್‌ ಟೆಸ್ಟ್‌ ಮಾಡಿದ ಸಂದೇಶ ರವಾನಿಸಿ ಜನವರಿಯಲ್ಲಷ್ಟೇ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದ ಯಾದಗಿರಿ(Yadgir) ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಎಡವಟ್ಟು ಮುಂದುವರೆದಿದೆ. ಕೋವಿಡ್‌ ಲಸಿಕೆಯ(Covid Vaccine) 2 ಡೋಸ್‌ಗಳ ಬಳಿಕ ಅರ್ಹರಿಗೆ ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳುವಂತೆ ಸರ್ಕಾರದ ಆದೇಶ ಹೊರಬಿದ್ದ ಬೆನ್ನಲ್ಲೇ ಸತ್ತವರಿಗೂ ಬೂಸ್ಟರ್‌ ಡೋಸ್‌ ನೀಡಿರುವ ಬಗ್ಗೆ ಸಂದೇಶಗಳು ಮೊಬೈಲ್‌ಗಳಿಗೆ ಬರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

Tap to resize

Latest Videos

undefined

2021ರ ಮೇ 23ರಂದು ಕೋವಿಡ್‌ನಿಂದಾಗಿ ಮೃತಪಟ್ಟ(Death) ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಮುರಾರಿರಾವ್‌ ಶಿಂಧೆ ಎಂಬವರಿಗೆ ಮೂರನೇ ಡೋಸ್‌ ಲಸಿಕೆ ನೀಡಿರುವುದಾಗಿ ಸಂದೇಶ ಬಂದಿದೆ.
ಕಳೆದ ವರ್ಷ ಮುರಾರಿರಾವ್‌ ಶಿಂಧೆ ಅವರು ಮೃತಪಟ್ಟ ಮೂರು ತಿಂಗಳಿಗೇ ಅವರಿಗೆ ಎರಡನೇ ಡೋಸ್‌ ಹಾಕಿರುವ ಬಗ್ಗೆಯೂ ಸಂದೇಶ ಬಂದಿತ್ತು. ಆಗ ಕುಟುಂಬಸ್ಥರು ಅಚ್ಚರಿಗೊಂಡು ಇಲಾಖೆಯ ಗಮನಕ್ಕೆ ತಂದಿದ್ದರು. ಜೊತೆಗೆ ‘ಸತ್ತವರಿಗೂ ಲಸಿಕೆ, ಕೋವಿಡ್‌ ಟೆಸ್ಟ್‌ ಸಂದೇಶ’ ಎಂಬ ತಲೆಬರಹದಡಿ ಜ.19ರಂದು ‘ಕನ್ನಡಪ್ರಭ’ದ ಮುಖಪುಟದಲ್ಲಿ ಪ್ರಕಟವಾಗಿ ರಾಜ್ಯವ್ಯಾಪಿ ಚರ್ಚೆಗೆ ಗ್ರಾಸವಾಗಿ, ಲಸಿಕಾಕರಣದ ದಾಖಲೆಗಳನ್ನು ಹೆಚ್ಚೆಚ್ಚು ತೋರಿಸಲು ಈ ರೀತಿಯ ನಕಲಿ ದಾಖಲೀಕರಣ ಆಗುತ್ತಿದೆ ಎಂಬ ಅನುಮಾನಗಳು ಮೂಡಿದ್ದವು.

PSI Recruitment Scam: 11 ಮಂದಿಗೆ ನ್ಯಾಯಾಂಗ ಬಂಧನ

ಇದೀಗ ಮತ್ತೆ ಅವರ ಮೊಬೈಲ್‌ ಸಂಖ್ಯೆಗೆ ಬೂಸ್ಟರ್‌ ಡೋಸ್‌(Booster Dose) ಸಕ್ಸಸ್‌ಫುಲ್‌ ಸಂದೇಶ ಬಂದಿದೆ. ‘ನೀವು ಬೂಸ್ಟರ್‌ ಡೋಸ್‌(ಪ್ರೀಕಾಶನ್‌ ಡೋಸ್‌)ಗೆ ಅರ್ಹರಿದ್ದೀರೆಂದು’ ಇದೇ ಮೇ 4ರಂದು ಮೊಬೈಲಿಗೆ ಸಂದೇಶ ಬಂದಿತ್ತು. ಬಳಿಕ ಮೇ 9ರಂದು ನಿಮಗೆ ಪ್ರಿಕಾಷನ್‌ ಡೋಸ್‌ ಕೋವಿಶೀಲ್ಡ್‌ ಯಶಸ್ವಿಯಾಗಿ ಹಾಕಲಾಗಿದೆ ಎಂಬ ಮೆಸೇಜ್‌ ಬಂದಿದೆ.

ಈಗ ನಾಲ್ಕನೇ ಅಲೆಯ ಭೀತಿ ಸಂದರ್ಭದಲ್ಲಿ ಬೂಸ್ಟರ್‌ ಡೋಸ್‌ನಲ್ಲೂ ಇಂತಹ ಪ್ರಮಾದಗಳು ಸಾರ್ವಜನಿಕರ ವಲಯದಲ್ಲಿ ಸಾಕಷ್ಟುಶಂಕೆಗಳಿಗೆ ಕಾರಣವಾಗಿದೆ.

ನಮ್ಮ ತಂದೆ ತೀರಿಕೊಂಡು ವರ್ಷ ಸಮೀಪಿಸುತ್ತಿದೆ. ಈಗ ಮೂರನೇ ಬೂಸ್ಟರ್‌ ಡೋಸ್‌ ಬಗ್ಗೆ ಮೆಸೇಜ್‌ ಬಂದಿದೆ. ಇಂತಹ ಪ್ರಮಾದಗಳು ಲಸಿಕಾಕರಣದ ಉದ್ದೇಶವನ್ನೇ ವಿಫಲಗೊಳಿಸುವಂತಿವೆ ಅಂತ ಪತ್ರಕರ್ತ ದೋರನಹಳ್ಳಿ(ಮುರಾರಿರಾವ್‌ ಪುತ್ರ) ವಿಶಾಲ ಶಿಂಧೆ ತಿಳಿಸಿದ್ದಾರೆ.  

ಏನಿದು ಎಡವಟ್ಟು?

- ಮುರಾರಿರಾವ್‌ ಶಿಂಧೆ 2021ರ ಮೇ 23ರಂದು ಕೋವಿಡ್‌ಗೆ ಬಲಿಯಾಗಿದ್ದರು
- ಅದಾದ 3 ತಿಂಗಳಿಗೆ ‘2ನೇ ಡೋಸ್‌ ಲಸಿಕೆ ನೀಡಲಾಗಿದೆ’ ಎಂಬ ಸಂದೇಶ ಬಂದಿತ್ತು
- ಕುಟುಂಬಸ್ಥರು ಈ ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು
- ಕನ್ನಡಪ್ರಭ ಈ ಬಗ್ಗೆ ವರದಿ ಪ್ರಕಟಿಸಿದ್ದರಿಂದ ರಾಜ್ಯಾದ್ಯಂತ ಈ ಕುರಿತು ಚರ್ಚೆಯಾಗಿತ್ತು
- ಈಗ ಬೂಸ್ಟರ್‌ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಶಿಂಧೆ ಅವರ ಮೊಬೈಲ್‌ ಸಂದೇಶ ಬಂದಿದೆ
 

click me!