
ಬೆಂಗಳೂರು(ಮೇ.11): ಕಳೆದೆರಡು ವರ್ಷಗಳಿಂದ ವಾರ್ಡ್ ಮರು ವಿಂಗಡಣೆಯನ್ನೇ ನೆಪವಾಗಿಟ್ಟುಕೊಂಡು ಪಾಲಿಕೆಯ ಚುನಾವಣೆಯನ್ನು ಮುಂದೂಡಿಕೊಂಡು ಬಂದಿದ್ದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್(Supreme Court) ತ್ರಿಸದಸ್ಯ ಪೀಠ ನೀಡಿರುವ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದಂತಿದೆ.
ರಾಜ್ಯ ಹೈಕೋರ್ಟ್ 2020 ಡಿಸೆಂಬರ್ 4ರಂದು 198 ವಾರ್ಡ್‌ಗಳಿಗೆ ಚುನಾವಣೆ(Election) ನಡೆಸುವಂತೆ ರಾಜ್ಯ ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಆದರೆ ರಾಜ್ಯ ಸರ್ಕಾರ ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ 243 ವಾರ್ಡ್‌ಗಳಿಗೆ ಚುನಾವಣೆ ನಡೆಸುವ ಉದ್ದೇಶದಿಂದ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ರಾಜ್ಯ ಸರ್ಕಾರಕ್ಕೆ ಸಂಕಟ ತಂದೊಡ್ಡಿದ್ದು, ಚುನಾವಣೆ ನಡೆಸಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದೆ.
HD Kumaraswamy: ವಿಧಾನಸಭೆ, ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಸಿದ್ಧತೆ
ಹಿಂದುಳಿದ ವರ್ಗಕ್ಕೆ ಮೀಸಲಾತಿ(Reservation) ಕೊಡುವ ಪ್ರಕ್ರಿಯೆಯು ಸುದೀರ್ಘವಾಗುವ ಸಾಧ್ಯತೆ ಇದೆ. ಮೀಸಲಾತಿ ವಿಚಾರವನ್ನು ಮುಂದಿಟ್ಟು ಚುನಾವಣೆ ನಡೆಸದಿರುವುದು ಕಷ್ಟ. ಬದಲಿಗೆ ವಾರ್ಡ್‌ಗಳ ಮರುವಿಂಗಡಣೆ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿ ಮನವೊಲಿಸುವ ಎಲ್ಲ ಪ್ರಯತ್ನಗಳನ್ನು ಮಾಡುವ ಲೆಕ್ಕಾಚಾರ ಸರ್ಕಾರದ್ದು. ಅದಕ್ಕಾಗಿ ಅಡ್ವೊಕೇಟ್ ಜನರಲ್ ಸೇರಿದಂತೆ ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದೆ.
ಪ್ರತಿ ವಾರ್ಡ್‌ನಲ್ಲೂ ಪಕ್ಷದ ಟಿಕೆಟ್‌ಗೆ ನಾಲ್ಕೈದು ಆಕಾಂಕ್ಷಿಗಳಿದ್ದಾರೆ. ಒಬ್ಬರಿಗೆ ಟಿಕೆಟ್ ನೀಡಿದರೆ ಉಳಿದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಇದರಿಂದ ಹಿನ್ನಡೆಯಾಗುವ ಅಪಾಯವಿದೆ. ಹಾಗಾಗಿ ವಿಧಾನಸಭಾ ಚುನಾವಣೆ ಬಳಿಕವೇ ಬಿಬಿಎಂಪಿ(BBMP) ಚುನಾವಣೆ ನಡೆಸುವಂತೆ ಆಡಳಿತ ಪಕ್ಷದ ಶಾಸಕರು ಮೇಲೆ ಒತ್ತಡ ತಂದಿದ್ದರು. ಇದಕ್ಕೆ ಮಣಿದಂತಿದ್ದ ಸರ್ಕಾರ ಚುನಾವಣೆ ಮುಂದೂಡಲು ಮರು ವಿಂಗಡನೆಯನ್ನು ಅಸ್ತ್ರವಾಗಿ ಬಳಸಿಕೊಂಡಿತ್ತು. ಜೊತೆಗೆ ಚುನಾವಣೆ ನಡೆಸಲು ನಿಜವಾದ ಆಸಕ್ತಿ ತೋರದ ಸರ್ಕಾರ ವಾರ್ಡ್ ಮರು ವಿಂಗಡಣೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಿಲ್ಲ. ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಗೋಜಿಗೆ ಹೋಗಿರಲಿಲ್ಲ.
ಆದರೆ, ಇದೀಗ ಬಂದ ಸುಪ್ರೀಂ ಕೋರ್ಚ್ ಆದೇಶ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಿದೆ. ಸುಪ್ರೀಂ ಕೋರ್ಚ್ ಆದೇಶದಲ್ಲಿ ಸ್ಪಷ್ಟವಾಗಿ 34 ಮಹತ್ವದ ಅಂಶಗಳನ್ನೊಳಗೊಂಡ ತೀರ್ಪು ನೀಡಿದೆ. ಯಾವುದೇ ಸರ್ಕಾರಗಳು ಅದನ್ನು
ಮೀರಿ ಚುನಾವಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳ ಕೆಲ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರ ಒಬಿಸಿ ಮೀಸಲಾತಿ ಹಾಗೂ ವಾರ್ಡ್ ಪುನರ್ ವಿಂಗಡನೆ ಎರಡನ್ನು ಬದಿಗಿಟ್ಟು ಹಾಲಿ ಸ್ವರೂಪದಲ್ಲೇ ಬಿಬಿಎಂಪಿಗೆ ಚುನಾವಣೆ ನಡೆಸುವುದೋ ಅಥವಾ ಕಾನೂನು ಮಾರ್ಗದಲ್ಲಿ ಚುನಾವಣೆ ಮುಂದೂಡುವ ಸಾಧ್ಯತೆಗಳನ್ನು ಶೋಧಿಸುವುದೋ ಕಾದು ನೋಡಬೇಕಿದೆ.
ಸಬೂಬು ಹೇಳದೆ ಬಿಬಿಎಂಪಿ ಚುನಾವಣೆ ನಡೆಸಿ: ರೆಡ್ಡಿ
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಬೂಬು ಹೇಳದೇ ತಕ್ಷಣ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ(Ramaling Reddy) ಆಗ್ರಹಿಸಿದ್ದಾರೆ,
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದರಿಂದ ಬಿಬಿಎಂಪಿ ಚುನಾವಣೆಯಲ್ಲಿ ಇತರ ಹಿಂದುಳಿದ ಜಾತಿಯವರು ಇದೀಗ ಸಾಮಾನ್ಯ ವರ್ಗದಲ್ಲೇ ಸ್ಪರ್ಧಿಸಬೇಕಾಗಿದೆ. ವಾರ್ಡ್ ಮರು ವಿಂಗಡಣೆ, ಒಬಿಸಿ ಮೀಸಲಾತಿ(OBC Reservation) ನೆಪದಲ್ಲಿ ಸರ್ಕಾರ 20 ತಿಂಗಳು ಚುನಾವಣೆ ಮುಂದೂಡಿತ್ತು. ಈಗಲಾದರೂ ನ್ಯಾಯಾಲಯದ ಆದೇಶದ ಪ್ರಕಾರ ತಕ್ಷಣ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆ ಮಾಡುತ್ತೇವೆ. ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಈ ಹಿಂದೆ ಬಿಜೆಪಿ ಹೇಳಿದ್ದಾಗ ನಾವೂ ಸಹಕಾರ ನೀಡಿದೆವು. ಇದಕ್ಕಾಗಿ ಸಮಿತಿ ರಚಿಸಿದ್ದು, ಸಮಿತಿ ವರದಿಯನ್ನು ತರಾತುರಿಯಲ್ಲಿ ಅಂಗೀಕಾರ ಮಾಡಿದರು. ನಾವು ಕೊಟ್ಟಸಲಹೆ, ಸೂಚನೆ ಪರಿಗಣಿಸಲಿಲ್ಲ. ಯಾವುದೇ ನೂತನ ಪ್ರದೇಶ ಸೇರಿಸಲಿಲ್ಲ. ವಿವಾದ ಸುಪ್ರೀಂಕೋರ್ಟ್ ಅಂಗಳ ತಲುಪಿ ಚುನಾವಣೆ ಮುಂದೂಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಗೆ ಮನಸ್ಸಿರಲಿಲ್ಲ
ಚುನಾವಣೆ ಮಾಡುವ ಮನಸ್ಸು ಇದ್ದಿದ್ದರೆ ಆರು ತಿಂಗಳಲ್ಲಿ ಮಾಡಬಹುದಿತ್ತು. ಚುನಾವಣೆ ಮುಂದೂಡುವುದೇ ಬಿಜೆಪಿಯವರ ಉದ್ದೇಶವಾಗಿತ್ತು. ಬಿಬಿಎಂಪಿ ಆಯುಕ್ತರು ವಾರ್ಡ್ ಮರು ವಿಂಗಡಣೆ ಮಾಡಬೇಕಿತ್ತು. ಆದರೆ ಒಂದೇ ಒಂದು ಸಭೆ ನಡೆಸಲಿಲ್ಲ. ಜನ ಪ್ರತಿನಿಧಿಗಳು, ಸಾರ್ವಜನಿಕರ ಅಭಿಪ್ರಾಯ ಪಡೆಯಲಿಲ್ಲ. ಈ ವಾರ್ಡ್ ವಿಂಗಡಣೆ ಪ್ರಕ್ರಿಯೆ ಬಿಜೆಪಿ ಸಂಸದರು, ಶಾಸಕರು, ನಾಯಕರ ಕಚೇರಿಯಲ್ಲಿ ನಡೆದಿತ್ತು ಎಂದು ಟೀಕಿಸಿದರು.
ಬಳಿಕ ಒಬಿಸಿ ಮೀಸಲಾತಿ ವಿಚಾರ ಮುಂದಿಟ್ಟುಕೊಂಡು ಸರ್ಕಾರ ಸ್ಥಳೀಯ ಸಂಸ್ಥೆಗಳು ಹಾಗೂ ಪಾಲಿಕೆ ಚುನಾವಣೆ ಮುಂದೂಡಿತು. ಇದರಿಂದಾಗಿ ನಗರದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡವು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದ್ದ ಕೆಲಸಗಳಿಗೆ ಹಿನ್ನಡೆಯಾಯಿತು. ರಸ್ತೆಗಳಲ್ಲಿ ಲಕ್ಷಾಂತರ ಗುಂಡಿ ಬಿದ್ದವು. ಗುತ್ತಿಗೆದಾರರ ಬಿಲ್ ಪಾವತಿ ಮಾಡುತ್ತಿಲ್ಲ. ಟೆಂಡರ್‌ಗಳಲ್ಲೂ ಅಕ್ರಮ ನಡೆಯುತ್ತಿದೆ ಎಂದು ಖಂಡಿಸಿದರು.
BBMP Elections : ಪಾಲಿಕೆ ಚುನಾವಣೆಯಲ್ಲಿ ಜಯ ನಿಶ್ಚಿತ ಎಂದ ಸಿಎಂ
ವಿಳಂಬದಿಂದ ಒಬಿಸಿಗೆ ತೊಂದರೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂತರಾಜು ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದ್ದು ಒಬಿಸಿ ಕುರಿತು ಕಾಂತರಾಜು ಅಂಕಿ ಅಂಶ ನೀಡಿದ್ದರು. ಆದರೆ ಇದನ್ನು ಬಳಿಕ ಬಿಜೆಪಿ ಸರ್ಕಾರ ಒಪ್ಪಲಿಲ್ಲ. ಒಪ್ಪಿದ್ದರೆ ಒಬಿಸಿಗೆ ಮೀಸಲಾತಿ ನೀಡಬಹುದಿತ್ತು ಅಥವಾ ಆಗಲೇ ಚುನಾವಣೆ ನಡೆಸಿದ್ದರೂ ಮೀಸಲಾತಿ ದೊರೆಯುತ್ತಿತ್ತು. ವಿಳಂಬ ಮಾಡಿದ್ದರಿಂದ ಈಗ ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಕಳೆದ ಬಾರಿ ನಡೆಸಿದ ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆಸಿ ಎಂದು ನ್ಯಾಯಾಲಯ ಹೇಳಿದೆ. ಇದರಿಂದ ವಾರ್ಡ್ ಮರು ವಿಂಗಡಣೆಯೂ ಅಸಿಂಧುವಾಗಿದೆ. 243 ವಾರ್ಡ್‌ಗಳಿಗೆ ಚುನಾವಣೆ ನಡೆಸದೆ 198 ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆಸಬೇಕಿದೆ ಎಂದು ವಿವರಿಸಿದರು.
ಆಯೋಗ ಸೂಚಿಸಿದರೆ ಚುನಾವಣೆಗೆ ಸಿದ್ಧತೆ : ತುಷಾರ್
ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ರಾಜ್ಯ ಚುನಾವಣಾ ಆಯೋಗ ಘೋಷಿಸಿದರೆ, ಚುನಾವಣೆ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್(Tushar Giri Nath) ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರಿಂಕೋರ್ಚ್ ಸೂಚನೆ ಅನುಸಾರ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಆಯೋಗದ ಸೂಚನೆ ಪಾಲಿಸುತ್ತೇವೆ ಎಂದರು.
ಪಾಲಿಕೆ ವ್ಯಾಪ್ತಿಗೆ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಕೆಲವು ಹಳ್ಳಿಗಳನ್ನು ಸೇರಿಸುವುದು ಮತ್ತು ಬಿಡುವುದು ಸರ್ಕಾರದ ಜವಾಬ್ದಾರಿ ಆಗಿದೆ. ಈ ಬಗ್ಗೆ ಸರ್ಕಾರವೇ ನೋಟಿಫಿಕೇಷನ್ ಹೊರಡಿಸಲಿದೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್, ಸುಪ್ರೀಂಕೋರ್ಚ್ ಮಹತ್ವದ ತೀರ್ಪು ನೀಡಿದೆ. ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಕೂಡಲೇ ಆದೇಶವನ್ನು ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
243 ವಾರ್ಡ್‌ಗೆ ಚುನಾವಣೆ:
ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020ನ್ನು ಪಾಲಿಕೆಯಲ್ಲಿ ಜಾರಿಗೊಳಿಸಲಾಗಿದೆ. ಹಾಗಾಗಿ, ಕೆಎಂಸಿ ಕಾಯ್ದೆಯನ್ನು ಮರು ಜಾರಿಗೊಳಿಸಿ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೊಸ ಕಾಯ್ದೆ ಪ್ರಕಾರವೇ 243 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕಾಗಲಿದೆ. ಅದಕ್ಕೆ ಸಂಬಂಧಿಸಿದಂತೆ ವಾರ್ಡ್ ಪುನರ್ ವಿಂಗಡಣೆ, ಮೀಸಲಾತಿ ಸೇರಿದಂತೆ ವಿವಿಧ ಕೆಲಸಗಳಾಗಬೇಕಾಗಲಿದೆ. ಹಾಗಾಗಿ, ಸೆಪ್ಟಂಬರ್ ವೇಳೆಗೆ ಚುನಾವಣೆ ನಡೆಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡ ಅಮರೇಶ್ ಮಾಹಿತಿ ನೀಡಿದರು.