ಹುನಗುಂದ: ಮರೋಳ ಏತ ನೀರಾವರಿ ಯೋಜನೆ ಕಳಪೆ: ಅಭಯ ಪಾಟೀಲ

By Kannadaprabha NewsFirst Published Sep 2, 2022, 11:15 AM IST
Highlights

ಹುನಗುಂದ ತಾಲೂಕಿಗೆ ವರದಾನವಾಗಬೇಕಿದ್ದ ಈ ಹನಿ ನೀರಾವರಿ ಯೋಜನೆಯು ಕಂಪನಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಹಳ್ಳ ಹಿಡಿದಿದ್ದು. ಇದನ್ನು ಸರಿಪಡಿಸಲು ಸಾಕಷ್ಟು ಪರಿಶೀಲನಾ ಸಮಿತಿಗಳು ಮತ್ತು ಅಧಿಕಾರಿಗಳು ಬಂದು ಹೋಗುತ್ತಾರೆ ವಿನಃ ಅದನ್ನು ಸರಿಪಡಿಸಲು ಆಗುತ್ತಿಲ್ಲ: ರೈತರು 

ಹುನಗುಂದ(ಸೆ.02): ಮರೋಳ ಏತ ನೀರಾವರಿ ಯೋಜನೆಯ ಎರಡನೇ ಹಂತದ 28 ಸಾವಿರ ಹೆಕ್ಟೇರ್‌ ಹನಿ ನೀರಾವರಿ ಸಂಪೂರ್ಣ ಕಳಪೆ ಕಾಮಗಾರಿಯಿಂದ ರೈತರ ಜಮೀನುಗಳಿಗೆ ನೀರು ಬರುತ್ತಿಲ್ಲ ಎನ್ನುವ ಆರೋಪ ಇರುವುದರಿಂದ ಸದ್ಯ ಆ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಸರ್ಕಾರ ಮತ್ತು ಮುಖ್ಯಮಂತ್ರಿಗೆ ವರದಿ ಸಲ್ಲಿಸಲಾಗುವುದು ಎಂದು ನೀರಾವರಿ ಅಂದಾಜು ಪರಿಶೀಲನಾ ಸಮಿತಿಯ ಅಧ್ಯಕ್ಷ ಅಭಯ ಪಾಟೀಲ ಹೇಳಿದರು. ಗುರುವಾರ ಪಟ್ಟಣದ ಸಮೀಪದ ಬೇವಿನಮಟ್ಟಿ ಮತ್ತು ಧನ್ನೂರ ಹನಿ ನೀರಾವರಿ ಜಾಕ್‌ವೆಲ್‌ಗೆ ಅಭಯ ಪಾಟೀಲ ಅಧ್ಯಕ್ಷತೆಯ ಅಂದಾಜು ಪರಿಶೀಲನಾ ಸಮಿತಿಯ ತಂಡ ಭೇಟಿ ನೀಡಿದಾಗ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಈ ಯೋಜನೆ ಸರಿಯಾಗಿಲ್ಲ ಸಂಪೂರ್ಣ ಕಳಪೆಯಾಗಿದೆ. ನೀರಾವರಿ ಅಂದಾಜು ಸಮಿತಿಯಲ್ಲಿ ಪ್ರಸ್ತಾಪಿಸಿದ್ದರಿಂದ ವಿಧಾನಸಭೆ ಅಧ್ಯಕ್ಷರ ಅನುಮತಿಯ ಮೇರೆಗೆ ಈ ಯೋಜನೆ ಕಾಮಗಾರಿ ಸಮಿತಿಯ ಸದಸ್ಯರೊಂದಿಗೆ ಪರಿಶೀಲನೆಗೆ ಬಂದಿದ್ದು, ಈ ಯೋಜನೆ ಕಾಮಗಾರಿಯನ್ನು ವೀಕ್ಷಿಸಿದಾಗ ಮೇಲ್ನೋಟಕ್ಕೆ ಕಳಪೆಯಾಗಿರೋದು ಕಂಡುಬಂದಿದೆ. ಅದು ಎಲ್ಲಿ ತಪ್ಪಾಗಿದೆ ಅದನ್ನು ಕಂಡುಹಿಡಿದು ಸರಿಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

BAGALKOT NEWS : ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ 

ಜೈನ್‌ ಕಂಪನಿ ಮ್ಯಾನೇಜರನ್ನು ತರಾಟೆಗೆ ತಗೆದುಕೊಂಡ ಶಾಸಕ ಶಿವಲಿಂಗೇಗೌಡ-ಇಸ್ರೇಲ್‌ ಮಾದರಿಯ ಏಷ್ಯಾದಲ್ಲಿ ಅತೀ ದೊಡ್ಡ ಯೋಜನೆಯಾಗಿರುವ ರಾಮಥಾಳ ಹನಿ ನೀರಾವರಿ ಯೋಜನೆಯ ವಿಫಲತೆಗೆ ಡಿಸೈನ್‌ರ ಮತ್ತು ಗುತ್ತಿಗೆದಾರರೇ ಕಾರಣ, ಒಂದು ಜಾಕವೆಲ್‌ದಿಂದ ಸಾವಿರ ಹೆಕ್ಟೇರ್‌ಗೆ ಮಾತ್ರ ನೀರು ಕೊಡಬಹುದು. 28 ಸಾವಿರ ಹೆಕ್ಟೇರ್‌ ಪ್ರದೇಶ ಇರೋದರಿಂದ 10ರಿಂದ 12 ಜಾಕ್ವೆಲ್‌ ಮಾಡಬೇಕಿತ್ತು. ಯಾರೀ ಈ ಯೋಜನೆಯ ಡಿಸೈನ್‌ ಮಾಡಿದ್ದು? ದುಡ್ಡು ಹೊಡೆಯಕ್ಕೆ ಈ ರೀತಿ ಮಾಡಿದ್ದೀರಿ? ಜೈನ್‌ ಮತ್ತು ನೆಟ್‌ಪೇಮ್‌ ಕಂಪನಿಗಳ ಮ್ಯಾನೇಜರ್‌ನ್ನು ತರಾಟೆಗೆ ತಗೆದುಕೊಂಡ ಶಾಸಕ ಶಿವಲಿಂಗೇಗೌಡ, ಮೊದಲು ಡಿಸೈನ್‌ ಮಾಡಿರೋರನ್ನು ಮತ್ತು ಗುತ್ತಿಗೆ ಪಡೆದವರನ್ನು ಕರೆಸಿ ನಾನು ಅವರಿಗೆ ಈ ಒಂದು ಜಾಕ್ವೆಲ್‌ನಿಂದ ಸಂಪೂರ್ಣ ಪ್ರದೇಶಕ್ಕೆ ಅವರು ನೀರು ಕೊಡಲಿ. ಕನಿಷ್ಠ ಪಕ್ಷ ಈ ಯೋಜನೆಗೆ 5 ಸಾವಿರ ಹೆಕ್ಟೇರ್‌ ಒಂದರಂತೆ ಜಾಕವೆಲ್‌ ನಿರ್ಮಿಸಬೇಕಿತ್ತು. ಇದರಲ್ಲಿ ಡಿಸೈನರ್‌ ಮತ್ತು ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳ ನಿರ್ಲಕ್ಷ್ಯವೇ ಯೋಜನೆಯ ಕಳಪೆಗೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಸಮಿತಿ ಸದಸ್ಯ ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ, ಶಾಸಕ ದೊಡ್ಡನಗೌಡ ಪಾಟೀಲ, ಮುಖಂಡರಾದ ಮಹಾಂತಗೌಡ ಪಾಟೀಲ, ಅಜ್ಜಪ್ಪ ನಾಡಗೌಡ್ರ, ಶಾಂತಪ್ಪ ಹೊಸಮನಿ, ಲಿಂಬಣ್ಣ ಮುಕ್ಕಣ್ಣವರ, ಮಹೇಶ ಬೆಳ್ಳಿಹಾಳ, ಶಿವು ಭಾವಿಕಟ್ಟಿ, ಮಂಜುನಾಥ ಆಲೂರ, ಕೆಬಿಜೆಎನ್‌ಎಲ್‌ ಅಧಿಕಾರಿಗಳು, ನೆಟ್‌ಪೇಮ್‌, ಜೈನ್‌ ಕಂಪನಿಯ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.

Ganesh Chaturthi: ಮಾದರಿಯಾಯ್ತು ಬಾಗಲಕೋಟೆಯ ಹಿಂದೂ-ಮುಸ್ಲಿಂ ಭಾವೈಕ್ಯತೆ ಗಣೇಶ

ಬಾಕ್ಸ್‌ ಸುದ್ದಿ-ಮರೋಳ ಏತ ನೀರಾವರಿ ಎರಡನೆಯ ಹಂತದ ಹನಿ ನೀರಾವರಿ ಯೋಜನೆ ಸಂಪೂರ್ಣ ಕಳಪೆಯಾಗಿದ್ದು, ಕಾಮಗಾರಿ ಕಳಪೆಯಾಗಲು ತಾಂತ್ರಿಕ ದೋಷವೇ ಮುಖ್ಯ. ಕಾರಣ ಮತ್ತು ಅದನ್ನು ನಿರ್ವಹಿಸುವಲ್ಲಿ ಎರಡು ಕಂಪನಿಗಳು ಸಂಪೂರ್ಣ ವಿಫಲವಾಗಿವೆ. ಈ ಯೋಜನೆಯ ಹಳಿ ಎಲ್ಲಿ ತಪ್ಪಿದೆ ಎನ್ನುವುದ್ದನ್ನು ಕಂಡು ಹಿಡಿದು ಸರಿಪಡಿಸಲು ಇನ್ನು ಹೆಚ್ಚಿನ ಅನುದಾನಬೇಕಾ? ಇಲ್ಲ ಹಾಗೇ ಸರಿಪಡಿಸಬಹುದಾ? ಎನ್ನುವುದ್ದನ್ನು ಪರಿಶೀಲಿಸಿ ಸರ್ಕಾರಕ್ಕೆ ತಿಳಿಸಿ ಯೋಜನೆ ಸರಿಪಡಿಸುವ ವ್ಯವಸ್ಥೆ ಮಾಡಲಾಗುವುದು ಅಂತ  ಶಾಸಕರು ಹಾಗೂ ಸಮಿತಿ ಸದಸ್ಯರು ಶಿವಲಿಂಗೇಗೌಡ್ರ ತಿಳಿಸಿದ್ದಾರೆ. 

ನಿರ್ಲಕ್ಷ್ಯದಿಂದ ಹಳ್ಳ ಹಿಡಿದ ಯೋಜನೆ

ಹುನಗುಂದ ತಾಲೂಕಿಗೆ ವರದಾನವಾಗಬೇಕಿದ್ದ ಈ ಹನಿ ನೀರಾವರಿ ಯೋಜನೆಯು ಕಂಪನಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಹಳ್ಳ ಹಿಡಿದಿದ್ದು. ಇದನ್ನು ಸರಿಪಡಿಸಲು ಸಾಕಷ್ಟು ಪರಿಶೀಲನಾ ಸಮಿತಿಗಳು ಮತ್ತು ಅಧಿಕಾರಿಗಳು ಬಂದು ಹೋಗುತ್ತಾರೆ ವಿನಃ ಅದನ್ನು ಸರಿಪಡಿಸಲು ಆಗುತ್ತಿಲ್ಲ. ಸರಿಪಡಿಸಲು ಸಾಧ್ಯವಾಗದಿದ್ದರೆ ನೀರಾವರಿ ಯೋಜನೆಯೇ ಬೇಡ. ನಾವು ಮಳೆಯಾಶ್ರಿತದಲ್ಲಿಯೇ ಬೇಸಾಯ ಮಾಡುತ್ತೇವೆ ಎಂದು ರೈತರಾದ ಶಿವಪ್ರಸಾದ ಗದ್ದಿ, ಲಿಂಬಣ್ಣ ಮುಕ್ಕಣ್ಣವರ, ಮಹೇಶ ಬೆಳ್ಳಿಹಾಳ ಸಮಿತಿ ಅಧ್ಯಕ್ಷ ಸದಸ್ಯರಿಗೆ ಆಕ್ರೋಶ ವ್ಯಕ್ತಪಡಿಸಿದರು.
 

click me!