Murugha Mutt Case: ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಿ ತನಿಖೆ ಮಾಡಲಿ; ಒಡನಾಡಿ ಆಗ್ರಹ

By Sharath SharmaFirst Published Sep 2, 2022, 11:03 AM IST
Highlights

Murugha Mutt Seer arrest updates: ಮುರುಘಾ ಮಠದ ಶಿವಮೂರ್ತಿ ಶರಣರನ್ನು ಪೋಕ್ಸೊ ಪ್ರಕರಣ ದಾಖಲಾದ ಏಳು ದಿನಗಳ ನಂತರ ಕಡೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಎದೆನೋವು ಕಾಣಿಸಿಕೊಂಡಿದೆ ಎಂಬ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ವಿರುದ್ಧ ಪೋಕ್ಸೊ (POCSO against Murugha Mutt Seer Shivamurthy Shivacharya) ಪ್ರಕರಣ ದಾಖಲಾಗಿ ಏಳು ದಿನಗಳಾದ ನಂತರ ಅವರನ್ನು ಬಂಧಿಸಲಾಗಿದೆ. ಆದರೆ ಬಂಧನದ ಬಳಿಕ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ, ಶ್ರೀಗಳ ಬಂಧನ ನೊಂದ ಮಕ್ಕಳಿಗೆ ಸಿಕ್ಕ ದೊಡ್ಡ ಸಾಂತ್ವನ ಎಂದಿದ್ದಾರೆ. "ಪ್ರಕರಣ ದಾಖಲಾಗಿ ಏಳು ದಿನಗಳ ನಂತರ ಬಂಧನ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾರು ಎಷ್ಟು ಒತ್ತಡ ಪೊಲೀಸರ ಮೇಲೆ ತಂದಿದ್ದಾರೆ ಗೊತ್ತಿದೆ. ಈ ಪ್ರಕರಣವನ್ನ ಹೊರ ರಾಜ್ಯಕ್ಕೆ ವರ್ಗಾವಣೆ ಮಾಡಿ ತನಿಖೆ ಮಾಡಲಿ‌. ಆಗ ಮಾತ್ರ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಸಿಗುವ ನಿರೀಕ್ಷೆ ಇದೆ‌," ಎಂದು ಸ್ಟ್ಯಾನ್ಲಿ ಆಗ್ರಹಿಸಿದ್ದಾರೆ. 

ಮುಂದುವರೆದ ಸ್ಟ್ಯಾನ್ಲಿ ಅವರು, "ಮಕ್ಕಳ ಮನಸ್ಸು ಚಿಂದಿ ಚಿತ್ರನ್ನವಾಗಿದೆ‌. ಮಕ್ಕಳನ್ನ ಮಾನಸಿಕ ಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕು. ಈ ಪ್ರಕರಣದವನ್ನ ಸಂಭ್ರಮಿಸುವುದಲ್ಲ. ಪ್ರಕರಣದಲ್ಲಿ ಕೇವಲ ಇಬ್ಬರ ಮಕ್ಕಳ ವಿಚಾರದಲ್ಲಿ ತನಿಖೆ ಅಲ್ಲ. ಇನ್ನು ಹಲವು ಮಕ್ಕಳು ಇರುವ ಮಾಹಿತಿ ಇದೆ. ಆದರೆ ದೂರು ನೀಡಲು ಮುಂದೆ ಬರುತ್ತಿಲ್ಲ. ಆದರೆ ಇಲ್ಲಿ ಶಿಕ್ಷೆ ಆದರೆ ಅವರಿಗೆ ನಿಜಕ್ಕೂ ಸಂತೋಷ ಆಗುತ್ತೆ. ಆ ಸಂತೋಷದ ಮುಂದೆ ಯಾವುದೂ ಇಲ್ಲ. ಎಲ್ಲಾ ವಿಚಾರದಲ್ಲಿ ತನಿಖೆ ಆಗಲಿ," ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ಹೇಳಿಕೆ ನೀಡಿದ್ದಾರೆ.

ಜೈಲಿನಿಂದ ಆಸ್ಪತ್ರೆ ಸೇರಿದ ಶರಣರು:

ಬಂಧನವಾದ ಕೆಲವೇ ಹೊತ್ತಿನಲ್ಲಿ ಮುರುಘಾ ಶರಣರು ಎದೆ ನೋವು ಮತ್ತು ಕತ್ತು ನೋವು ಕಾಣಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮುರುಘಾ ಶ್ರೀಗಳ ತಪಾಸಣೆ ವೇಳೆ ಮಠದ ಕಾನೂನು ಸಲಹೆಗಾರ ವಕೀಲ ಉಮೇಶ್ ಹಾಜರಾಗಿದ್ದಾರೆ. ತಪಾಸಣೆಯ ನಂತರ ಮುರುಘಾ ಶರಣರಿಗೆ ಗ್ಲೂಕೋಸ್ ನೀಡಲಾಗಿದೆ. ಇನ್ನೂ ಸ್ವಲ್ಪ ಹೊತ್ತು ಅವರ ಆರೋಗ್ಯದ ಮೇಲೆ ನಿಗಾ ಹರಿಸಿ ಚಿಕಿತ್ಸೆ ಮುಂದುವರೆಸಬೇಕಾ ಅಥವಾ ನಿಲ್ಲಿಸಬೇಕಾ ಎಂಬ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ. 

ಇದನ್ನೂ ಓದಿ: Murugha mutt Seer Arrest ಮುರುಘಾ ಶ್ರೀ ಬಂಧನ, ಚಿತ್ರದುರ್ಗ ಸೇರಿ ರಾಜ್ಯಾದ್ಯಂತ ಹೈ ಅಲರ್ಟ್!

ಬಂಧನದ ಬಳಿಕ ಮುರುಘಾ ಮಠ ನಿಶ್ಯಬ್ಧ:

ಮುರುಘಾ ಮಠದಲ್ಲಿ ಶರಣರ ಬಂಧನದ ಬಳಿಕ ನೀರವ ಮೌನ ಆವರಿಸಿದೆ. ಮಠದ ಆವರಣ ಬಿಕೋ ಎನ್ನುತ್ತಿದೆ. ಮಠದ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಭಕ್ತಾದಿಗಳು ಆಸ್ಪತ್ರೆಯ ಬಳಿ ಜಮಾಯಿಸುತ್ತಿದ್ದಾರೆ. ಜತೆಗೆ ಕೆಲವೇ ಕ್ಷಣಗಳಲ್ಲಿ ಶರಣರಿಗೆ MRI ಸ್ಕ್ಯಾನಿಂಗ್ ಮಾಡಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಸ್ಪತ್ತೆಯ ಹಿಂಭಾಗದಲ್ಲಿರುವ MRI ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್‌ ಮತ್ತು ಇಸಿಜಿ ಮಾಡಲಿದ್ದಾರೆ. 

ಇದನ್ನೂ ಓದಿ: Murugha Mutt ಚಿತ್ರದುರ್ಗ ಮರುಘಾ ಶ್ರೀಗಳ ಬಂಧಿಸಿ ಆಜ್ಞಾತ ಸ್ಥಳಕ್ಕೆ ಕರೆದೊಯ್ದ ಪೊಲೀಸರು!

ಏನಿದು ಪ್ರಕರಣ?:

ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಬಂಧನವಾಗದಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಹ ಶ್ರೀಗಳ ಪರ ಹೇಳಿಕೆ ನೀಡಿದ್ದರು. ಇದಕ್ಕೂ ಆಕ್ರೋಶ ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ. 

click me!