ಸೆ.10ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 2,396 ಕೆಜಿ ಗಾಂಜಾ ಜಪ್ತಿ| ತೊಗರಿಯೊಂದಿಗೆ ಕದ್ದು ಮುಚ್ಚಿ ಗಾಂಜಾ ಬೇಸಾಯ| ಕಾಳಗಿ, ಚಿಂಚೋಳಿ, ಅಫಜಲ್ಪುರ, ಕಲಬುರಗಿ, ಚಿತ್ತಾಪುರ, ಸೇಡಂ ಇಲ್ಲೆಲ್ಲಾ ತೊಗರಿ ಸಾಲುಗಳಲ್ಲೇ ಗಾಂಜಾ ಫಸಲು ನಳನಳಿಸುತ್ತಿದೆ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಅ.01): ಇಪ್ಪತ್ತು ದಿನಗಳ ಹಿಂದೆ ಕಾಳಗಿ ತಾಲೂಕಿನ ಲಚ್ಚು ನಾಯಕ ತಾಂಡಾದ ಕುರಿಶೆಡ್ ನೆಲಮಾಳಿಗೆಯಿಂದ ಹೊರಬಿದ್ದ ಗಾಂಜಾ ಘಾಟು ಇದೀಗ ತೊಗರಿ ಕಣಜ ಕಲಬುರಗಿ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದೆ.
ಗಾಂಜಾ ಘಾಟು ಈ ಭಾಗದ ವಾಣಿಜ್ಯ ಬೆಳೆ ತೊಗರಿ ಹೊಲವನ್ನೇ ವ್ಯಾಪಿಸುತ್ತಿರೋದು ಆತಂಕಕಾರಿ ಸಂಗತಿಯಾಗಿದೆ. ಬಹುಕೋಟಿ ಮೊತ್ತದ ಟನ್‌ಗಟ್ಟಲೆ ಗಾಂಜಾ ಬೆಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದರಿಂದಾಗಿ ತೊಗರಿ ಕಣಜ ಕಲಬುರಗಿ ಗಾಂಜಾ ಅಡ್ಡೆಯಾಗುತ್ತಿದೆಯೆ? ಎಂಬ ಪ್ರಶ್ನೆ ಉದ್ಭವವಾಗಿದೆ.
undefined
ಲಚ್ಚುನಾಯಕ ತಾಂಡಾದಲ್ಲಿ ಸೆ.10 ರಂದು ನಡೆದ ದಾಳಿಯಲ್ಲಿ ಪತ್ತೆಯಾದ 1,350 ಕೆಜಿ (6 ಕೋಟಿ ಮೌಲ್ಯ) ಬೆನ್ನಲ್ಲೆ ಚಿಂಚೋಳಿ, ಅಫಜಲ್ಪುರ, ಕಲಬುರಗಿ, ಚಿತ್ತಾಪುರ, ಸೇಡಂನಲ್ಲಿನ ನಡೆದ ಸರಣಿ ದಾಳಿಗಳಲ್ಲಿ ಕೇವಲ 20 ದಿನಗಳಲ್ಲಿ 2,396 ಕೆಜಿ ಗಾಂಜಾ (ಅಂದಾಜು 13 ಕೋಟಿ ಮೌಲ್ಯ) ಪತ್ತೆಯಾಗಿದೆ. ಚಿಂಚೋಳಿಯ ಲಿಂಗಾನಗರ, ಸಂಗಾಪುರ, ಧರಿತಾಂಡಾ, ಸಜ್ಜನಕೊಳ್ಳ ತಾಂಡಾದ ಇಂಚಿಂಚೂ ಬಗೆದು 4 ದಿನದಲ್ಲೇ 411 ಕೆಜಿ ಗಾಂಜಾ ಪತ್ತೆ ಹಚ್ಚಿದ್ದಾರೆ. ಚಿತ್ತಾಪುರದ ಅಲ್ಲೂರ (ಬಿ) ಯಲ್ಲಂತೂ ತೊಗರಿ ಹೊಲದಲ್ಲಿ 410 ಕೆಜಿ ಗಾಂಜಾ ಪತ್ತೆಯಾಗಿದೆ. ಜಿಲ್ಲೆಯಾದ್ಯಂತ ತೊಗರಿ, ಕಬ್ಬಿನ ಗದ್ದೆಗಳಲ್ಲೇ ಗಾಂಜಾ ಅಡಗಿರುವುದಕ್ಕೆ ಸಾಕ್ಷಿಯಾಗಿದೆ.
ಸಾಲು ಸಾಲು ಗಾಂಜಾ ಫಸಲು:
ಕಾಳಗಿ, ಚಿಂಚೋಳಿ, ಅಫಜಲ್ಪುರ, ಕಲಬುರಗಿ, ಚಿತ್ತಾಪುರ, ಸೇಡಂ ಇಲ್ಲೆಲ್ಲಾ ತೊಗರಿ ಸಾಲುಗಳಲ್ಲೇ ಗಾಂಜಾ ಫಸಲು ನಳನಳಿಸುತ್ತಿದೆ. ಅನೇಕ ಬಾರಿ ಇದನ್ನು ಗುರುತಿಸೋದೇ ಕಷ್ಟ. ಆದಾಗ್ಯೂ ಖಚಿತ ಮಾಹಿತಿ ಆಧರಿಸಿ ಪೊಲೀಸರು ಸತತ ದಾಳಿ ನಡೆಸುತ್ತಿರೋದರಿಂದ ತೊಗರಿ ಹೊಲಗದ್ದೆಗಳನ್ನು ಜಾಲಾಡುತ್ತ ಗಾಂಜಾ ಪತ್ತೆ ಹಚ್ಚುತ್ತಿದ್ದಾರೆ.
ಕಲಬುರಗಿ: ಕುರಿ ದೊಡ್ಡಿಯಲ್ಲಿ ಕೋಟ್ಯಂತರ ರು. ಗಾಂಜಾ ಇಟ್ಟವನ ಹಿಸ್ಟರಿಯೇ ಬಲು ರೋಚಕ..!
ನಗರದಲ್ಲಿ ಗಾಂಜಾ ಪೆಡ್ಲರ್‌ಗಳು
ಕಲಬುರಗಿ ನಗರದಲ್ಲಿ ಗಾಂಜಾ ಕದ್ದುಮುಚ್ಚಿ ಮಾರುವ ಪೆಡ್ಲರ್‌ಗಳಿದ್ದರೆ, ಗಾಂಜಾ ಬೆಳೆಗಾರರು ಹಳ್ಳಿಗಾಡಲ್ಲಿ ಅವಿತಿದ್ದಾರೆ. ನೂರರು ಎಕರೆ ಗಾಂಜಾ ಇದ್ದರೂ ಇಲ್ಲಿವರೆಗೆ ಅಗೋಚರವಾಗದಿದ್ದು ಯಾಕೆ? ಅಮಲಿನ ಪದಾರ್ಥಗಳ ಬೆಳೆಯೋದಕ್ಕೆ ನಿಷೇಧವಿದ್ದರೂ ಕದ್ದುಮುಚ್ಚಿ ಬೆಳೆದು ಲಕ್ಷಾಂತರ ಹಣ ಕಮಾಯಿಸುತ್ತಿರುವ ಖದೀಮರ ಬಂಧನಕ್ಕೆ ಖಾಕಿಪಡೆ ವಿಳಂಬ ಯಾಕೆ ಮಾಡಿತು? ಇದೀಗ ಎಚ್ಚರಾಗಿರುವ ಖಾಕಿಪಡೆ ಇನ್ನಾದರೂ ಇಂತಹ ಸಾಮಾಜಘಾತುಕ ಕೆಲಸಗಳಿಗೆ ಕಡಿವಾಣ ಹಾಕಿ ತನ್ನ ದಿಟ್ಟತನ ತೋರುವುದೆ? ಎಂದು ಜಿಲ್ಲೆಯ ಜನ ಕಾಯುತ್ತಿದ್ದಾರೆ.