
ಮಂಗಳೂರು (ಸೆ.23): ಬೆಂಗಳೂರು-ಮಂಗಳೂರು ನಡುವೆ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದ ವೇಳಾಪಟ್ಟಿ ಸಿದ್ಧಗೊಳ್ಳುವ ಮುನ್ನವೇ ಈಗ ಹಾಲಿ ಓಡಾಟ ನಡೆಸುತ್ತಿರುವ ಮಂಗಳೂರು-ಬೆಂಗಳೂರು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಗೂಡ್ಸ್ ರೈಲುಗಳಿಗೆ ಅವಕಾಶ ಕಲ್ಪಿಸುವ ದಿಶೆಯಲ್ಲಿ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು-ಬೆಂಗಳೂರು ಬದಲು ಬೆಂಗಳೂರು-ಗೋವಾ ನಡುವೆ ಸಂಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 16576 ಯಶವಂತಪುರ ಎಕ್ಸ್‌ಪ್ರೆಸ್ ರೈಲು ಪ್ರಸ್ತುತ ಬೆಳಗ್ಗೆ 7 ಗಂಟೆಗೆ ಹೊರಟು ಸಂಜೆ 4.30 ಗಂಟೆಗೆ ಬೆಂಗಳೂರು ತಲುಪುತ್ತದೆ. ಕಳೆದ ಎರಡು ವರ್ಷ ಹಿಂದೆ ಇದು ಮಧ್ಯಾಹ್ನ 12 ಗಂಟೆಗೆ ಹೊರಟು ರಾತ್ರಿ 10 ಗಂಟೆಗೆ ಬೆಂಗಳೂರು ತಲುಪುತ್ತಿತ್ತು. ಇದರಿಂದ ರಾತ್ರಿ ಪ್ರಯಾಣಿಕರಿಗೆ ಬೆಂಗಳೂರಿನಲ್ಲಿ ಗಮ್ಯಸ್ಥಾನ ತಲುಪಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ವೇಳಾಪಟ್ಟಿಯನ್ನು ಪರಿಷ್ಕರಿಸಿ ಪ್ರಯಾಣಿಕ ಸ್ನೇಹಿಯಾಗಿ ಬೆಳಗ್ಗೆ 7 ಗಂಟೆಗೆ ಹೊರಡುವಂತೆ ಮಾಡಲಾಗಿತ್ತು.
ಇದೀಗ ಇದನ್ನು ಹಿಂದಿನಂತೆ ಮಧ್ಯಾಹ್ನ 12 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಡುವಂತೆ ವೇಳಾಪಟ್ಟಿ ಬದಲಾವಣೆಗೆ ಮೈಸೂರು ರೈಲ್ವೆ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾರ್ಗದಲ್ಲಿ ಗೂಡ್ಸ್ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ವೇಳಾಪಟ್ಟಿ ಮಾರ್ಪಾಟಿಗೆ ಇಲಾಖೆ ಮುಂದಾಗಿದೆ ಎಂದು ಹೇಳಲಾಗಿದೆ. ಇದು ಜಾರಿಯಾದಲ್ಲಿ ಮತ್ತೆ ಗೊಮಟೇಶ್ವರ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಲ್ಲದೆ ಖಾಲಿ ಓಡುವ ಪ್ರಮೇಯ ಬಂದರೂ ಅಚ್ಚರಿ ಇಲ್ಲ ಎನ್ನುತ್ತವೆ ರೈಲ್ವೆ ಸಂಘಟನೆಗಳು.
ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನಿಂದ ಮಂಗಳೂರು ಬದಲು ಗೋವಾ ವರೆಗೆ ಸಂಚರಿಸುವಂತೆ ವೇಳಾಪಟ್ಟಿ ರಚಿಸಲು ರೈಲ್ವೆ ಇಲಾಖೆ ಮುಂದಾಗಿದೆ ಎಂದು ಮೂಲಗಳು ಹೇಳುತ್ತಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಯೋಗಿಕ ಸಂಚಾರ ಯಶವಂತಪುರ-ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಡುವೆ ನಡೆದಿತ್ತು. ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹೊರಟ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಜೆ 3 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಿ ಅಲ್ಲಿಂದ ವಾಪಸ್ ರಾತ್ರಿ ಬೆಂಗಳೂರು ತಲುಪಿತ್ತು. ಆದರೆ ಇದೇ ಪ್ರಯೋಗಿಕ ಸಂಚಾರದ ವೇಳಾಪಟ್ಟಿಯನ್ನೇ ಗೋವಾ ವರೆಗೆ ವಿಸ್ತರಣೆಗೆ ಬಳಕೆ ಮಾಡಲು ರೈಲ್ವೆ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಇದೇ ವೇಳೆ ಬೆಂಗಳೂರು-ಮಂಗಳೂರು ಸಂಚಾರ ಕೈಬಿಟ್ಟು ಬೆಂಗಳೂರು-ಮಂಗಳೂರು ಜಂಕ್ಷನ್-ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿದೆ.
ಲಭ್ಯ ಮಾಹಿತಿ ಪ್ರಕಾರ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ ಮಂಗಳೂರು ಜಂಕ್ಷನ್, ಅಲ್ಲಿಂದ ಸಂಜೆ 3.15ಕ್ಕೆ ಹೊರಟು ರಾತ್ರಿ 9.30ಕ್ಕೆ ಗೋವಾ ತಲುಪಲಿದೆ. ಇದೇ ವೇಳೆ ಗೋವಾದಿಂದ ಬೆಳಗ್ಗೆ 7 ಗಂಟೆಗೆ ಹೊರಡುವ ಇನ್ನೊಂದು ವಂದೇ ಭಾರತ್ ರೈಲು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಂಗಳೂರು ಜಂಕ್ಷನ್ ತಲುಪಿ, ಅಲ್ಲಿಂದ 1.45ಕ್ಕೆ ಹೊರಟು ರಾತ್ರಿ 8.30ರ ಸುಮಾರಿಗೆ ಯಶವಂತಪುರ ತಲುಪುವಂತೆ ವೇಳಾಪಟ್ಟಿ ಸಿದ್ಧಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ತಿಳಿಯಲಾಗಿದೆ. ಈಗಾಗಲೇ ಮಂಗಳೂರು-ಗೋವಾ ನಡುವೆ ವಂದೇ ಭಾರತ್ ಓಡಾಟ ನಡೆಸುತ್ತಿದ್ದು, ನಿರೀಕ್ಷಿತ ಪ್ರಯಾಣದಲ್ಲಿ ಪ್ರಯಾಣಿಕರ ಕೊರತೆ ಎದುರಿಸುತ್ತಿದೆ, ಹಾಗಿರುವಾಗ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಮಂಗಳೂರು ಬದಲು ಗೋವಾಗೆ ವಿಸ್ತರಿಸಿದರೆ ಏನು ಗತಿ ಎಂದು ರೈಲ್ವೆ ಸಂಘಟನೆಗಳು ಪ್ರಶ್ನಿಸುತ್ತಿವೆ.
ಈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ಬದಲು ಮಂಗಳೂರಿನಿಂದ ಬೆಳಗ್ಗೆ ಹೊರಟು ಮಧ್ಯಾಹ್ನ ಬೆಂಗಳೂರು ತಲುಪಿ, ಸಂಜೆ ವಾಪಸ್ ಹೊರಟು ರಾತ್ರಿ ಮಂಗಳೂರು ತಲುಪುವಂತೆ ವೇಳಾಪಟ್ಟಿ ರೂಪಿಸಿದರೆ ಪ್ರಯಾಣಿಕ ಸ್ನೇಹಿಯಾಗಿ ಎಲ್ಲರಿಗೂ ಅನುಕೂಲಕರವಾಗಲಿದೆ ಎಂಬುದು ರೈಲ್ವೆ ಸಂಘಟನೆಗಳು ಆಗಾಗಲೇ ಇಲಾಖೆಯ ಗಮನ ಸೆಳೆದಿವೆ.
ಗೊಮಟೇಶ್ವರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸುವ ಪ್ರಸ್ತಾಪನ್ನು ಮೈಸೂರು ವಿಭಾಗ ಮಾಡುತ್ತಿಲ್ಲ. ಏನಿದ್ದರೂ ಫಾಲ್ಘಾಟ್ ವಿಭಾಗದಿಂದ ಆಗಿರಬಹುದು. ಮೈಸೂರು ವಿಭಾಗಕ್ಕೆ ಹಸ್ತಾಂತರಗೊಂಡ ಬಳಿಕ ಸಮರ್ಪಕ ತೀರ್ಮಾನ ಕೈಗೊಳ್ಳಬೇಕಷ್ಟೆ. ಸದ್ಯ ಅಂತ ಪ್ರಸ್ತಾಪ ನಮ್ಮಿಂದ ಇಲ್ಲ.
-ವಿಭಾಗೀಯ ಅಧಿಕಾರಿ, ಮೈಸೂರು ವಿಭಾಗ.