ಕಸ್ತೂರಿ ರಂಗನ್ ವರದಿ ರದ್ದಾದರೆ ನಮ್ಮ ಜನ ಪ್ರಧಾನಿ ಹೆಸರಲ್ಲಿ ದೀಪ ಹಚ್ಚುತ್ತಾರೆ - ನಯನಾ ಮೋಟಮ್ಮ

Published : Sep 22, 2026, 11:05 PM IST
nayana motamma on pm narendra modi

ಸಾರಾಂಶ

ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಯಿಂದ ಮಲೆನಾಡು ಭಾಗದ ಜನರಿಗೆ ಎದುರಾಗಿರುವ ಆತಂಕದ ಬಗ್ಗೆ ಶಾಸಕಿ ನಯನಾ ಮೋಟಮ್ಮ ವಿಧಾನಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆಯ 31 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಿದರೆ 25,000 ಜನರ ಬದುಕು ಅತಂತ್ರವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಬೆಂಗಳೂರು: ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನ್ನಾಡಿದರು. ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆ ಮಲೆನಾಡು ಭಾಗದ ಜನರಿಗೆ ತೀವ್ರ ಆತಂಕ ತಂದಿದೆ. ನನ್ನ ಕ್ಷೇತ್ರ ಒಂದರಲ್ಲೇ 31 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (Eco-Sensitive Area) ವ್ಯಾಪ್ತಿಗೆ ಸೇರಿಸಿದರೆ ಸುಮಾರು 25,000 ಜನರ ಬದುಕು ಅತಂತ್ರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು.. ಮಲೆನಾಡಿನ ರೈತರ ವಾಸ್ತವ ಸ್ಥಿತಿ ಹಾಗೂ ಕಾಫಿ ಬೆಳೆಗಾರರ ಅಳಲನ್ನು ಸದನದ ಮುಂದೆ ಬಿಚ್ಚಿಟ್ಟರು.

10 ಜಿಲ್ಲೆಗಳು 1,449 ಹಳ್ಳಿಗಳಿಗೆ ಸಂಕಷ್ಟ

ಮಾತು ಮುಂದುವರಿಸಿ, ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯ ಪ್ರಕಾರ.. ರಾಜ್ಯದ 10 ಜಿಲ್ಲೆಗಳ ಬರೋಬ್ಬರಿ 1,449 ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರಲಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 138 ಹಳ್ಳಿಗಳು ಸೇರುತ್ತವೆ. ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆಯಾದ ತಕ್ಷಣ ದೊಡ್ಡ ಆಪತ್ತು ಎದುರಾಗಲಿದೆ. ನಮ್ಮವರ ಜನಜೀವನ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ನಿರ್ಬಂಧಗಳು ಎದುರಾಗುತ್ತವೆ ಎಂದರು.

ಇನ್ನು, ಚಿಕ್ಕಮಗಳೂರು ಮತ್ತು ಕಾಫಿ ಕೃಷಿಗೆ ಶತಮಾನಗಳ ಇತಿಹಾಸ ಇದೆ. 17ನೇ ಶತಮಾನದಲ್ಲಿ ಬಾಬಾ ಬುಡನ್ ಅವರು ಕಾಫಿ ಬೀಜಗಳನ್ನು ತಂದಾಗಿನಿಂದಲೂ ನಮ್ಮ ಜನ ಕಾಫಿ ಬೆಳೆ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕಾಫಿ ಜೊತೆಗೆ ಮೆಣಸು, ಅಡಿಕೆ ಮತ್ತು ಏಲಕ್ಕಿಯನ್ನು ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಪ್ರಸ್ತುತ ಮೂಡಿಗೆರೆ ಕ್ಷೇತ್ರದಲ್ಲಿ ಶೇ.90ರಷ್ಟು ಕೃಷಿ ಭೂಮಿ ಕಾಫಿ ತೋಟಗಳಿಂದಲೇ ಕೂಡಿದೆ. ಕೇವಲ ಶೇ. 10ರಷ್ಟು ಭಾಗದಲ್ಲಿ ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಂತಹ ಕೃಷಿ ಪ್ರಧಾನ ಪ್ರದೇಶವನ್ನು ಏಕಾಏಕಿ ಸೂಕ್ಷ್ಮ ವಲಯಕ್ಕೆ ಸೇರಿಸಿದರೆ ರೈತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಮೂಡಿಗೆರೆಯ 32 ಹಳ್ಳಿಯಲ್ಲಿ 25 ಸಾವಿರ ಜನಸಂಖ್ಯೆ ಇದೆ. ಆ ಭಾಗದ ಕಾಫಿ ಬೆಳೆಗಾರರು, ಜನವಸತಿ ಪ್ರದೇಶಗಳು, ಶಾಲೆ, ಆಸ್ಪತ್ರೆ ಅಂತಹ ಮೂಲ ಸೌಕರ್ಯಗಳ ಭವಿಷ್ಯವೇನು? 25 ಸಾವಿರ ಜನರಿಗೆ ಸರ್ಕಾರ ಜಾಗ ಕೊಡಲು ಸಾಧ್ಯವೇ? ನೀವು ಎಲ್ಲಿ ಪುನರ್ವಸತಿ ಕಲ್ಪಿಸುತ್ತೀರಿ? ಇಂಥ ಪ್ರಶ್ನೆಗಳಿಗೆ ಉತ್ತರ ಇಲ್ಲದೇ ಜನರು ಭಯದಿಂದ ದಿನ ಕಳೆಯುವಂತಾಗಿದೆ ಎಂದು ಸರ್ಕಾರದ ಗಮನ ಸೆಳೆದರು.

ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸುವಿಕೆ ತಪ್ಪು. ಒಂದು ಗ್ರಾಮದ ಪ್ರತಿಯೊಂದು ಭೂಭಾಗವೂ ಅರಣ್ಯ ಆಗಿರುವುದಿಲ್. ಅಲ್ಲಿ ಕೃಷಿ ಭೂಮಿ, ವಸತಿ ಪ್ರದೇಶಗಳು ಬರುತ್ತವೆ. ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಿ, ಇಡೀ ಗ್ರಾಮವನ್ನೇ ಈಕೋ ಸೆನ್ಸಿಟಿವ್ ಝೋನ್ ಕರೆಯೋದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದಯಮಾಡಿ ಕಸ್ತೂರಿ ರಂಗನ್ ವರದಿಯನ್ನ ರದ್ದು ಮಾಡಬೇಕು. ಮೋದಿ ಅವರ ಬರ್ತಡೇ ಸಂದರ್ಭದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ದೀಪ ಬೆಳಗಿದರು. ಈಗ ಕರ್ನಾಟಕದಲ್ಲಿರುವ ವಿರೋಧ ಪಕ್ಷದ ನಾಯಕರುಗಳು ಕಸ್ತೂರಿ ರಂಗನ್ ವರದಿ ಜಾರಿಯ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಡಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ರದ್ದು ಮಾಡಿದ್ರೆ, ನಮ್ಮ ಜನರು ಮೋದಿ ಹೆಸರಲ್ಲಿ ದಿನ ದೀಪ ಬೆಳಗುತ್ತಾರೆ ಎಂದು ಮನವಿ ಮಾಡಿಕೊಂಡರು.

PREV
Read more Articles on
click me!

Recommended Stories

ಪ್ರಧಾನಿ ಮೋದಿಗೆ ಯಕ್ಷಗಾನ ಕಿರೀಟ ತೊಡಿಸಿ ಗೌರವಿಸಿದ ಪೇಜಾವರ ಶ್ರೀಗಳು; ಪ್ರಧಾನಿ ವಿಶೇಷ ಭೇಟಿ
'ನಿನ್ನ ಮೇಲೆ ಕೇಸ್ ಇರೋದು ಗೊತ್ತಿದೆ ಹುಷಾರ್' ವಿಧಾನಸೌಧದಲ್ಲಿ ಡಿಸಿಪಿಗೆ ಸಿದ್ದರಾಮಯ್ಯ ಕ್ಲಾಸ್ -VIDEO