ಬೆಳ್ಳಾರೆಯ ಕಳಂಜದಲ್ಲಿರುವ ಮಸೂದ್ ನಿವಾಸಕ್ಕೆ ಭೇಟಿ ನೀಡಿ ಮಸೂದ್ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ವಿತರಿಸಿದೆ. ಈ ವೇಳೆ ನಾವು ಪ್ರವೀಣ್ ನೆಟ್ಟಾರು ಕುಟುಂಬಕ್ಕೂ 5 ರಿಂದ 10 ಲಕ್ಷ ಪರಿಹಾರ ಕೊಡಲು ನಿರ್ಧಾರ ಮಾಡಿದ್ದೆವು. ಎಂದಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಆ.11): ನಾವು ಪ್ರವೀಣ್ ನೆಟ್ಟಾರು ಕುಟುಂಬಕ್ಕೂ 5 ರಿಂದ 10 ಲಕ್ಷ ಪರಿಹಾರ ಕೊಡಲು ನಿರ್ಧಾರ ಮಾಡಿದ್ದೆವು. ಅವರು ಪರಿಹಾರ ತೆಗೆದುಕೊಂಡರೆ 100% ಅವರಿಗೂ ಪರಿಹಾರ ಕೊಡ್ತೇವೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ಹೇಳಿದ್ದಾರೆ. ಇಂದು ಬೆಳ್ಳಾರೆಯ ಕಳಂಜದಲ್ಲಿರುವ ಮಸೂದ್ ನಿವಾಸಕ್ಕೆ ಭೇಟಿ ನೀಡಿ ಮಸೂದ್ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ವಿತರಿಸಿದೆ. ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಮಸೂದ್ ಜು.19ರಂದು ಕಳಂಜ ಎಂಬಲ್ಲಿ ಹಲ್ಲೆಗೊಳಗಾಗಿ ಜು.21ರಂದು ಸಾವನ್ನಪ್ಪಿದ್ದ. ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ರಿಂದ ಪರಿಹಾರ ಚೆಕ್ ವಿತರಣೆಯಾಗಿದ್ದು, ಹಲವು ಮುಸ್ಲಿಂ ಮುಖಂಡರು ಹಾಜರಿದ್ದರು. ಹತ್ಯೆಯಾದ ಮಸೂದ್ ತಾಯಿಗೆ 30 ಲಕ್ಷದ ಚೆಕ್ ನೀಡಿದ ಸೆಂಟ್ರಲ್ ಕಮಿಟಿ, ಸುರತ್ಕಲ್ ನಲ್ಲಿ ಹತ್ಯೆಯಾದ ಫಾಜಿಲ್ ಕುಟುಂಬಕ್ಕೂ 30 ಲಕ್ಷ ರೂ. ನೀಡಲಿದೆ.
ಪರಿಹಾರ ಚೆಕ್ ವಿತರಣೆ ಬಳಿಕ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ಹೇಳಿಕೆ ನೀಡಿದ್ದು, ನಾವು ಪ್ರವೀಣ್ ಕುಟುಂಬಕ್ಕೂ 5-10 ಲಕ್ಷ ಪರಿಹಾರ ಕೊಡಲು ನಿರ್ಧಾರ ಮಾಡಿದ್ದೆವು. ಅವರು ತೆಗೆದುಕೊಂಡರೇ 100% ಅವರಿಗೂ ಪರಿಹಾರ ಕೊಡ್ತೇವೆ. ಅದರೆ ಅವರ ಮನೆಗೆ ಹೋದ್ರೆ ಗಲಾಟೆ ಆಗುತ್ತೆ ಅಂತ ಹೇಳಿದ್ದಾರೆ. ಸ್ಥಳೀಯರು ಹೇಳಿದ ಕಾರಣ ನಾವು ಅಲ್ಲಿಗೆ ಹೋಗ್ತಾ ಇಲ್ಲ. ಅವರ ಸಾವಿನ ಬಗ್ಗೆ ನಮಗೆ ದುಃಖವಿದೆ, ಆ ಕುಟುಂಬಕ್ಕೂ ಸಾಂತ್ವನ ಬೇಕು. ಅವರು ತೆಗೆದುಕೊಂಡರೆ 5 ರಿಂದ 10 ಲಕ್ಷ ಕೊಡ್ತೇವೆ. ಅವರು ಒಪ್ಪಿಕೊಂಡರೆ ನಾವೇ ಬಂದು ಹಣ ಕೊಡ್ತೇವೆ ಎಂದಿದ್ದಾರೆ.
ಹತ್ಯೆಗಳ ತನಿಖೆ, ಪರಿಹಾರದಲ್ಲಿ ತಾರತಮ್ಯ ಮಾಡಿದರೆ ಬೃಹತ್ ಪ್ರತಿಭಟನೆ: ದಕ್ಷಿಣ ಕನ್ನಡದಲ್ಲಿ ನಡೆದ ಮೂರು ಹತ್ಯೆ ವಿಚಾರದಲ್ಲಿ ಪೊಲೀಸ್ ವ್ಯವಸ್ಥೆ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ತಾರತಮ್ಯ ನೀತಿ ಅನುಸರಿಸಿದೆ. ಹತ್ಯೆ ಪ್ರಕರಣಗಳ ತನಿಖೆ ಹಾಗೂ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡದೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಐಕ್ಯತಾ ವೇದಿಕೆ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಕಾನೂನು ಸಲಹೆಗಾರ ಉಮರ್ ಫಾರೂಕ್, ಹತ್ಯೆಗೀಡಾಗಿದ್ದ 3 ಯುವಕರಲ್ಲಿ ಇಬ್ಬರು ಮುಸ್ಲಿಂ ಸಮುದಾಯದ ಯುವಕರು. ರಾಜ್ಯ ಸರ್ಕಾರ ಮೃತ ಪ್ರವೀಣ್ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ಬಿಡುಗಡೆ ಮಾಡಿದ್ದು, ಅವರ ಮನೆಗೆ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರು, ಸಂಸದರು, ಭೇಟಿ ನೀಡಿದ್ದಾರೆ. ಆದರೆ ಮೃತ ಮಸೂದ್ ಹಾಗೂ ಫಾಝಿಲ್ ಮನೆಗೆ ಸರ್ಕಾರದ ಒಬ್ಬ ಪ್ರತಿನಿಧಿ ಭೇಟಿ ನೀಡಿಲ್ಲ, ಯಾವುದೇ ಪರಿಹಾರವನ್ನೂ ನೀಡಿಲ್ಲ. ಇದನ್ನು ಮುಸ್ಲಿಂ ಐಕ್ಯತಾ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್, ಮತ್ತೋರ್ವ ಆರೋಪಿ ಅರೆಸ್ಟ್
ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ಅಝೀಝ್ ದಾರಿಮಿ ಮಾತನಾಡಿ, ಮೂರು ಕುಟುಂಬಕ್ಕೂ ಸಮಾನ ನ್ಯಾಯ ಸಿಗಬೇಕಿದೆ. ನಾವು ಭಾರತೀಯರು ಸಂವಿಧಾನದ ಅಡಿಯಲ್ಲಿ ದೇಶದಲ್ಲಿ ಜೀವನ ಮಾಡುತ್ತಿದ್ದೇವೆ. ಪರಿಹಾರ, ನ್ಯಾಯ ಒದಗಿಸಲು ತಾರತಮ್ಯ ಬೇಡ ಎಂದು ಹೇಳಿದರು.
ಪ್ರವೀಣ್ ಹತ್ಯೆ ಕೇಸ್, ಪೊಲೀಸ್ರಿಗೆ ಪ್ರಮುಖ ಆರೋಪಿ ಸುಳಿವು, ಆಸ್ತಿ ಮುಟ್ಟುಗೋಲಿಗೆ ಸಜ್ಜು
ಫಾಝಿಲ್ ತಂದೆ ಫಾರೂಕ್ ಮಾತನಾಡಿ, ತನಿಖೆ ಸಮರ್ಪಕವಾಗಿ ನಡೆದು ಫಾಝಿಲ್ ಹತ್ಯೆ ಹಿಂದೆ ಇರುವ, ನೆರವು ನೀಡಿದ ಎಲ್ಲರನ್ನೂ ತನಿಖೆಗೆ ಒಳಪಡಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೃಷ್ಣಾಪುರ ಮಸೀದಿಯ ಖತೀಬರಾದ ಉಮರ್ ಫಾರೂಕ್, ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಎಂ. ಮಮ್ತಾಜ್ ಆಲಿ, ಮುಸ್ಲಿಂ ಐಕ್ಯತಾ ವೇದಿಕೆ ಸುರತ್ಕಲ್ ವಲಯದ ಅಧ್ಯಕ್ಷ ಅಶ್ರಫ್ ಬದ್ರಿಯಾ ಮತ್ತಿತರರು ಇದ್ದರು.