Malali Masjid Row: ಮಂಗಳೂರು ಕೋರ್ಟ್‌ನಲ್ಲಿ ಮಳಲಿ ಮಸೀದಿ ವಿವಾದ ವಿಚಾರಣ ಹಂತದಲ್ಲಿದ್ದಾಗಲೇ ಕೋರ್ಟ್ ಕಮಿಷನರ್ ನೇಮಿಸಿ ಎಂದು ಹೈ ಕೋರ್ಟ್ ಮೆಟ್ಟಿಲೇರಿದ್ದ ವಿಶ್ವಹಿಂದೂ ಪರಿಷತ್ ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಜು. 15): ಮಳಲಿ ಮಸೀದಿ ವಿವಾದ (Malali Masjid Row) ಮಂಗಳೂರು ಕೋರ್ಟ್‌ನಲ್ಲಿ ವಿಚಾರಣ ಹಂತದಲ್ಲಿದ್ದಾಗಲೇ ಕೋರ್ಟ್ ಕಮಿಷನರ್ ನೇಮಿಸಿ ಎಂದು ಹೈ ಕೋರ್ಟ್ ಮೆಟ್ಟಿಲೇರಿದ್ದ ವಿಶ್ವಹಿಂದೂ ಪರಿಷತ್ ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿದ್ದು, ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್‌ಗೆ ವಿಚಾರಣೆ ನಡೆಸಿ ಆದೇಶ ನೀಡಲು ಅವಕಾಶ ನೀಡಿದೆ. ಈ ಮೂಲಕ ಮಳಲಿ ಮಸೀದಿ ವಿವಾದದ ಚೆಂಡು ಮತ್ತೆ ಮಂಗಳೂರು ಕೋರ್ಟ್ ಅಂಗಳಕ್ಕೆ ತಲುಪಿದ್ದು, ಮಂಗಳೂರು ಕೋರ್ಟ್ ತೀರ್ಪಿನತ್ತ ಕುತೂಹಲ ನೆಟ್ಟಿದೆ.
ಮಂಗಳೂರಿನ ಮಳಲಿ ಮಸೀದಿ ವರ್ಸಸ್ ವಿಎಚ್ ಪಿ ಫೈಟ್ ವಿಚಾರದಲ್ಲಿ ಕೋರ್ಟ್ ಕಮಿಷನರ್ ನೇಮಿಸಿ ಮಸೀದಿ ಸರ್ವೇಗೆ ಮನವಿ ಮಾಡಿ ವಿಎಚ್ ಪಿ ಹೈ ಕೋರ್ಟ್ ಮೆಟ್ಟಿಲೇರಿತ್ತು. ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವಾಗಲೇ ಹೈ ಕೋರ್ಟ್ ಮೆಟ್ಟಿಲೇರಿದ್ದ ವಿಎಚ್ ಪಿ ಸರ್ವೆಗೆ ಮನವಿ ಮಾಡಿತ್ತು.
ಹೀಗಾಗಿ ಅರ್ಜಿ ಸ್ವೀಕರಿಸಿ ಯಾವುದೇ ಆದೇಶ ಹೊರಡಿಸದಂತೆ ಮಂಗಳೂರು ಕೋರ್ಟ್ ಗೆ ಹೈ ಕೋರ್ಟ್ ಸೂಚಿಸಿ ವಿಚಾರಣೆ ಆರಂಭಿಸಿತ್ತು. ಆದರೆ ವಿಚಾರಣೆ ಬಳಿಕ ಇಂದು ಹೈಕೋರ್ಟ್ ವಿಎಚ್ ಪಿ ಅರ್ಜಿ ವಜಾ ಮಾಡಿ ಮಂಗಳೂರು ಕೋರ್ಟ್ ಗೆ ವಿಚಾರಣೆಗೆ ಅವಕಾಶ ನೀಡಿದೆ.
ಇದನ್ನೂ ಓದಿ: ಮಳಲಿ ವಿವಾದ: ಹಿಂದೂ ನಾಯಕನ ವಿರುದ್ಧ ಅಪಪ್ರಚಾರ, ಪ್ರತ್ಯುತ್ತರಕ್ಕೆ ಸಿದ್ಧ ಎಂದ ಭಜರಂಗದಳ..!
ಹೈ ಕೋರ್ಟ್ ಮೆಟ್ಟಿಲೇರುವ ಮುನ್ನ ವಿಎಚ್ ಪಿ ಪ್ರಮುಖರು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಮಸೀದಿ ಜಾಗದ ಸರ್ವೆಯನ್ನ ಕೋರ್ಟ್ ಕಮಿಷನರ್ ಮೂಲಕ ನಡೆಸುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಗೂ ಮೊದಲೇ ಮಸೀದಿ ಕಾಮಗಾರಿ ತಡೆಯಾಜ್ಞೆ ತೆರವು ಮಾಡಿ ವಿಎಚ್ ಪಿ ಅರ್ಜಿ ವಜಾ ಮಾಡುವಂತೆ ಮಳಲಿಯ ಮಸೀದಿ ಕಮಿಟಿ ಅರ್ಜಿ ಸಲ್ಲಿಸಿತ್ತು.
ಹೀಗಾಗಿ ಮಂಗಳೂರು ಕೋರ್ಟ್ ಮಸೀದಿ ಕಮಿಟಿ ಮತ್ತು ವಿಎಚ್ ಪಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡು ಎರಡೂ ಕಡೆಯ ವಾದಗಳನ್ನ ಆಲಿಸಿತ್ತು. ಆದರೆ ಮಂಗಳೂರು ಕೋರ್ಟ್ ನಲ್ಲಿ ಮೊದಲು ಮಸೀದಿ ಅರ್ಜಿಯ ಕುರಿತ ಆದೇಶ ಬರುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಮಂಗಳೂರು ಕೋರ್ಟ್ ವಿಚಾರಣೆ ಮಧ್ಯೆಯೇ ವಿಎಚ್ ಪಿ ಹೈ ಕೋರ್ಟ್ ಮೆಟ್ಟಿಲೇರಿ ಮಂಗಳೂರು ಕೋರ್ಟ್ ಆದೇಶ ಹೊರಡಿಸದಂತೆ ತಡೆ ತಂದಿತ್ತು. ಆದರೆ ಇದೀಗ ಹೈಕೋರ್ಟ್ ವಿಎಚ್ ಪಿ ಅರ್ಜಿ ವಜಾ ಮಾಡಿ ಮಂಗಳೂರು ಕೋರ್ಟ್ ನಿರ್ಧಾರಕ್ಕೆ ಬಿಟ್ಟಿದೆ.
ಮಂಗಳೂರು ಕೋರ್ಟ್ ತೀರ್ಪಿನತ್ತ ಕುತೂಹಲ: ಸದ್ಯ ವಿಎಚ್ ಪಿ ಅರ್ಜಿಯನ್ನ ಹೈ ಕೋರ್ಟ್ ವಜಾ ಮಾಡಿರುವ ಬೆನ್ನಲ್ಲೇ ಎಲ್ಲರ ಕುತೂಹಲ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನತ್ತ ನೆಟ್ಟಿದೆ. ಈಗಾಗಲೇ ಮಂಗಳೂರು ಕೋರ್ಟ್ ನಲ್ಲಿ ವಿಎಚ್ ಪಿ ವಕೀಲ ಚಿದಾನಂದ ಕೆದಿಲಾಯ ಮತ್ತು ಮಸೀದಿ ವಕೀಲ ಎಂ.ಪಿ.ಶೆಣೈ ಹಲವು ಸುತ್ತಿನ ವಾದ ಮಂಡಿಸಿದ್ದಾರೆ.
ವಕ್ಛ್ ಕಾಯ್ದೆಗಳ ಪ್ರಕಾರ ಸಿವಿಲ್ ಕೋರ್ಟ್ ಗೆ ಮಸೀದಿ ವಿವಾದ ವಿಚಾರಣೆ ಅಧಿಕಾರ ಇಲ್ಲ ಎಂದಿದ್ದ ಮಸೀದಿ ವಕೀಲ ಶೆಣೈ, ವಿಎಚ್ ಪಿ ಅರ್ಜಿ ತಿರಸ್ಕರಿಸಿ ನವೀಕರಣ ಕಾಮಗಾರಿಗೆ ನೀಡಿದ್ದ ತಡೆ ತೆರವಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಮಳಲಿ ಮಸೀದಿ ವಿವಾದ: ಹಿಂದೂ-ಮುಸ್ಲಿಂ ಸೌಹಾರ್ದ ಸಭೆ: ಶಾಸಕರ ಮಧ್ಯಸ್ಥಿಕೆ!
ಆದರೆ ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ, ವಿವಾದಿತ ಜಾಗದಲ್ಲಿರುವ ಪ್ರಾಚೀನ ರಚನೆಯನ್ನು ನ್ಯಾಯಾಲಯ ಗಮನಿಸಬೇಕು. ಇದೊಂದು ಹಳೆಯ ಸ್ಮಾರಕ ಕಟ್ಟಡದ ಸ್ವರೂಪವಾಗಿದ್ದು, ಸರ್ವೇ ನಡೆಯಬೇಕು.ಅದರಲ್ಲಿರುವ ವಾಸ್ತುಶಿಲ್ಪದ ಚಿತ್ರಗಳು, ಗೋಡೆ, ಕೆತ್ತನೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತೆ. ಇದರ ಐತಿಹಾಸಿಕ ಸ್ವರೂಪದ ಆಧಾರದ ಮೇಲೆ ಅದರ ಸ್ವರೂಪದ ಬಗ್ಗೆ ವರದಿಯ ಅಗತ್ಯವಿದೆ. ಭೂಮಿಯನ್ನು ಅಗೆದು ಯಾವುದೇ ಪುರಾತನ ಸ್ಮಾರಕ ರಚನೆ, ಪ್ರತಿಮೆ ಇದೆಯೇ ಎಂದು ಕಂಡುಹಿಡಿಯಬೇಕಿದೆ. ಅದರಲ್ಲಿರುವ ರಚನೆ ಮತ್ತು ಸ್ಮಾರಕಗಳ ವಯಸ್ಸಿನ ಬಗ್ಗೆ ವರದಿ ಸಲ್ಲಿಸಲು ಕೋರ್ಟ್ ಕಮಿಷನರ್ ಬೇಕು. ರಚನೆಯ ಒಟ್ಟಾರೆ ಸ್ವರೂಪ ಅಥವಾ ನೆಲೆಗೊಂಡಿರುವ ಯಾವುದೇ ಸ್ಮಾರಕದ ಬಗ್ಗೆ ವೈಜ್ಞಾನಿಕ ವರದಿಯ ಅಗತ್ಯವಿದೆ ಎಂದು ವಾದಿಸಿ ನವೀಕರಣ ಕಾಮಗಾರಿ ತಡೆ ತೆರವು ಮಾಡುವ ಮೊದಲು ಕೋರ್ಟ್ ಕಮಿಷನರ್ ನೇಮಿಸಿ ಸರ್ವೇ ನಡೆಸುವಂತೆ ವಾದಿಸಿದ್ದರು.
ಆದರೆ ವಿಎಚ್ ಪಿ ಹೈ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದ ಹಿನ್ನೆಲೆಯಲ್ಲಿ ಮಂಗಳೂರು ಕೋರ್ಟ್ ಯಾವುದೇ ತೀರ್ಪು ಪ್ರಕಟಿಸಿರಲಿಲ್ಲ. ಆದರೆ ಇದೀಗ ಹೈ ಕೋರ್ಟ್ ನಲ್ಲಿ ವಿಎಚ್ ಪಿ ಅರ್ಜಿ ವಜಾಗೊಂಡ ಹಿನ್ನಲೆಯಲ್ಲಿ ಮಂಗಳೂರು ಕೋರ್ಟ್ ಮುಂದಿನ ವಾರ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಈ ತೀರ್ಪಿನಲ್ಲಿ ಅಸಮಾಧಾನ ಇದ್ದಲ್ಲಿ ಎರಡೂ ಕಡೆಯವರು ಮತ್ತೆ ಹೈಕೋರ್ಟ್ ಮೆಟ್ಟಿಲೇರೋ ಸಾಧ್ಯತೆ ಇದೆ.