ಪ್ರತಿವರ್ಷವೂ ಕೊಡಗು ಜಿಲ್ಲೆಯಲ್ಲಿ ಸುರಿಯುವ ಭಾರಿ ಮಳೆಗೆ ಗುಡ್ಡ ಕುಸಿತ, ಭೂಕಂಪನದಂಥ ಪ್ರಕೃತಿ ವಿಕೋಪಗಳಿಗೆ ಜನ ತತ್ತರಿಸಿದ್ದಾರೆ. ಇಲ್ಲೊಂದು ಕುಟುಂಬ ಕಳೆದ ಮೂರು ವರ್ಷಗಳಿಂದ ಸೂರು ಇಲ್ಲದೇ ಜೀವ ನಡೆಸುತ್ತಿದ್ದರುವುದು ಬೆಳಕಿಗೆ ಬಂದಿದೆ. ಇದುವರೆಗೂ ಕುಟುಂಬಕ್ಕೆ ಸಿಕ್ಕಿಲ್ಲ ಸೂರು.
ಕೊಡಗು ಜು.15: ಜಿಲ್ಲೆಯ ಮಳೆ ನಿರಾಶ್ರಿತ ಬಡ ಕುಟುಂಬವೊಂದು ಸೂಕ್ತ ಮನೆಯಿಲ್ಲದೆ ಮೂರು ವರ್ಷಗಳಿಂದಲೂ ಅತಂತ್ರ ಬದುಕು ನಡೆಸುತ್ತಿರುವ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ನಡುವೆ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಕುಟುಂಬ ತೀವ್ರ ಸಂಕಷ್ಟಕ್ಕೀಡಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡಿರುವ ಕಡಗದಾಳು ವ್ಯಾಪ್ತಿಯ ಬೊಟ್ಲಪ್ಪ ನಿವಾಸಿ ಶಿವಕುಮಾರ್ ಕುಟುಂಬ ಇಂದಿಗೂ ಸೂಕ್ತ ಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿದೆ.
2019 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮ ಪಂಚಾಯತಿಗೆ ಒಳಪಡುವ ಗುಡ್ಡ ಪ್ರದೇಶವಾದ ಬೊಟ್ಲಪ್ಪದಲ್ಲಿ ಉಂಟಾದ ಭೂಕುಸಿತದಲ್ಲಿ ಈ ಭಾಗದ ಹಲವು ಮನೆಗಳು ಹಾನಿಗೊಳಾಗಿದ್ದವು. ಈ ಘಟನೆಯಲ್ಲಿ ಕೂಲಿ ಕಾರ್ಮಿಕ ಶಿವಕುಮಾರ್ ಮನೆ ಕೂಡ ಸಂಪೂರ್ಣವಾಗಿ ಜರಿದಿದ್ದು, ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದ ಅವರಿಗೆ ಬೇರೆ ಯಾವುದೇ ಪರ್ಯಾಯ ಜಾಗವಿಲ್ಲದ ಹಿನ್ನೆಲೆ ಅದೇ ಸ್ಥಳದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸುಳ್ಯ, ಮಡಿಕೇರಿಯಲ್ಲಿ ಮತ್ತೆ ಭೂಕಂಪನ: ಬಿರುಕುಬಿಟ್ಟ ಭೂಮಿ
ಪ್ರತಿ ಬಾರಿಯೂ ಭೂಕುಸಿತದ ಭೀತಿ ಎದುರಿಸುತ್ತಿರುವ ಈ ಭಾಗದ ಜನ ಸುರಕ್ಷಿತ ಸ್ಥಳದಲ್ಲಿ ಸೂರು ನೀಡುವಂತೆ ಕೋರಿ ಹಲವು ಬಾರಿ ಅರ್ಜಿ ನೀಡಿದ್ದರೂ ಕೂಡ ಈ ವರೆಗೂ ಇವರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಆಸಕ್ತಿ ತೋರಿಲ್ಲ. ಇಂದಿಗೂ ಶಿವಕುಮಾರ್ ತನ್ನ ಪತ್ನಿ, ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.
ಈ ಹಿಂದೆ ನಮ್ಮ ಭಾಗದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಹಲವರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದು, ಇಂದಿಗೂ ಸೂಕ್ತ ಸೂರಿಲ್ಲದೆ ಟೆಂಟ್ ಮನೆ, ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿರುವ ಈ ಕುಟುಂಬಗಳು ಸೂರಿಗಾಗಿ ನಮಗೂ ಮನವಿ ಸಲ್ಲಿಸಿದ್ದಾರೆ. ನಮ್ಮ ವ್ಯಾಪ್ತಿಯಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಸರ್ಕಾರಿ ಜಾಗವಿದ್ದು, ಈ ಬಗ್ಗೆ ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದೆ. ಆದರೆ ಈ ಜಾಗವನ್ನು ಒತ್ತುವರಿ ತೆರವು ಮಾಡುವಲ್ಲಿ ಅಧಿಕಾರಿಗಳು ಆಸಕ್ತಿ ತೋರದಿದ್ದು, ಈ ಭಾಗದ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸಾಧ್ಯವಾಗಿಲ್ಲ. ಇತ್ತ ಜಿಲ್ಲಾಧಿಕಾರಿ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ.
-ಜಯಣ್ಣ, ಅಧ್ಯಕ್ಷ, ಕಡಗದಾಳು ಗ್ರಾಮ ಪಂಚಾಯತಿ.
ನಮ್ಮ ಮನೆ ಈ ಹಿಂದೆ ಸಂಭವಿಸಿದ ಭೂಕುಸಿತಕ್ಕೆ ತುತ್ತಾಗಿ ಸಂಪೂರ್ಣ ನೆಲಸಮವಾಯಿತು. ಕೂಲಿ ಕಾರ್ಮಿಕನಾದ ನನಗೆ ಬೇರೆ ಯಾವುದೇ ನಿವೇಶನ ಇಲ್ಲದ ಕಾರಣ ಅದೇ ಜಾಗದಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ಸೂಕ್ತ ಜಾಗದಲ್ಲಿ ಸೂರು ಕಲ್ಪಿಸುವಂತೆ ಗ್ರಾ. ಪಂ, ಜಿಲ್ಲಾಡಳಿತಕ್ಕೂ ಅರ್ಜಿ ಸಲ್ಲಿಸಿದ್ದರೂ ಈ ವರೆಗೆ ನಮಗೇನೂ ಸಿಕ್ಕಿಲ್ಲ. ಈ ಬಾರಿಯೂ ಹೆಚ್ಚಿನ ಮಳೆ ಆಗುತ್ತಿದ್ದು ಈ ಭಾಗದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದಷ್ಟುಬೇಗ ನಮಗೆ ಸುರಕ್ಷಿತ ಸ್ಥಳದಲ್ಲಿ ಜಿಲ್ಲಾಡಳಿತ ಸೂರು ನೀಡುವ ಭರವಸೆಯೊಂದಿಗೆ ಪ್ರತಿ ಕ್ಷಣವೂ ನಾವು ಭಯದಲ್ಲೇ ಜೀವನ ನಡೆಸುತ್ತಿದ್ದೇವೆ.
-ಶಿವಕುಮಾರ್, ಸಂತ್ರಸ್ತ.
ನಿರಾಶ್ರಿತ ಕುಟುಂಬಗಳಿಗೆ ಪಂಚಾಯತಿ ವತಿಯಿಂದ ಆದಷ್ಟುಸಹಾಯ ಮಾಡುತ್ತಿದ್ದೇವೆ. ಅನುದಾನ ಕೊರತೆಯಿಂದ ಹೆಚ್ಚಿನದಾಗಿ ಏನನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಭಾರಿ ಪ್ರಾಕೃತಿಕ ವಿಕೋಪ ಭೀತಿ ಎದುರಿಸುತ್ತಿರುವ ಈ ಭಾಗದ ಜನರಿಗೆ ಸೂಕ್ತ ಸೂರಿನ ಅನಿವಾರ್ಯತೆ ಇದೆ. ಆದಷ್ಟುಬೇಗ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಇತ್ತ ಗಮನ ಹರಿಸಬೇಕಿದೆ.
-ದೇವಿಕಾ, ಪಿಡಿಒ, ಕಡಗದಾಳು ಗ್ರಾ.ಪಂ.