ಮಂಗಳೂರಿನಲ್ಲಿ ವೈರಾಣು ಪತ್ತೆಯ ಪರೀಕ್ಷಾ ಕೇಂದ್ರ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. ಕೊರೋನಾ ಶಂಕಿತ ಪ್ರಕರಣಗಳು ಪತ್ತೆಯಾದರೆ ಅವರನ್ನು ನಿಗಾ ಘಟಕದಲ್ಲಿ ಇರಿಸಲು ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ 200 ಬೆಡ್ ಮೀಸಲಿರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಮಂಗಳೂರು(ಮಾ.18): ಮಂಗಳೂರಿನಲ್ಲಿ ವೈರಾಣು ಪತ್ತೆಯ ಪರೀಕ್ಷಾ ಕೇಂದ್ರ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೊರೋನಾ ಸೋಂಕು ತಡೆ ಕುರಿತ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಪ್ರಸಕ್ತ ವೈರಾಣು ಪರೀಕ್ಷೆಗೆ ಬೆಳಗಾವಿ, ಬೆಂಗಳೂರು, ಹಾಸನ ಅಥವಾ ಶಿವಮೊಗ್ಗಕ್ಕೆ ತೆರಳಬೇಕು. ಮಂಗಳೂರಿನಲ್ಲಿ ಬಂದರು, ರೈಲು ಹಾಗೂ ವಿಮಾನ ಈ ಮೂರು ಸಾರಿಗೆ ಸಂಪರ್ಕಗಳು ಒಂದೇ ಕಡೆ ಇರುವುದು ಹಾಗೂ ಸಾಕಷ್ಟುಪ್ರಮಾಣದಲ್ಲಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಇರುವುದುರಿಂದ ಇಲ್ಲಿಗೆ ವೈರಾಣು ಪರೀಕ್ಷಾ ಘಟಕ ಮಂಜೂರಾತಿಗೆ ಒಪ್ಪಿಗೆ ನೀಡಲಾಗಿದೆ. ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟಕವನ್ನು ತೆರೆಯಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಕುಕ್ಕೆಗೆ ಹೊರಟವರಿಗೆ ಸೂಚನೆ: ಸರ್ವ ಸೇವೆಗಳೂ ಕ್ಯಾನ್ಸಲ್
ಜಿಲ್ಲೆಯ ಎಂಟು ಮೆಡಿಕಲ್ ಕಾಲೇಜುಗಳಲ್ಲಿ ತಲಾ 20ರಂತೆ ಪ್ರತ್ಯೇಕ ಬೆಡ್‌ಗಳನ್ನು ಕೊರೋನಾ ಸೋಂಕಿತರಿಗೆ ಕಾದಿರಿಸಲಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ 160 ಹಾಸಿಗೆಗಳನ್ನು ಕಾದಿರಿಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 80 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ವೈದ್ಯರಿಗೆ ಅವಶ್ಯವಾದ ಎನ್ 95 ಮಾಸ್ಕ್‌ಗಳನ್ನು ಸರ್ಕಾರವೇ ಪೂರೈಕೆ ಮಾಡುತ್ತದೆ. ಸಾಮಾನ್ಯ ಮಾಸ್ಕ್‌ಗಳನ್ನು ಈಗಾಗಲೇ ಸಾಕಷ್ಟುಪ್ರಮಾಣದಲ್ಲಿ ಪೂರೈಸಲಾಗಿದೆ ಎಂದರು.
ವೆನ್ಲಾಕ್ ಆಸ್ಪತ್ರೆಯಲ್ಲಿ 200 ಬೆಡ್ ಸಿದ್ಧ
ಕೊರೋನಾ ಶಂಕಿತ ಪ್ರಕರಣಗಳು ಪತ್ತೆಯಾದರೆ ಅವರನ್ನು ನಿಗಾ ಘಟಕದಲ್ಲಿ ಇರಿಸಲು ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ 200 ಬೆಡ್ ಮೀಸಲಿರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಈ ಮಾಹಿತಿ ನೀಡಿದ್ದು, ಈಗಾಗಲೇ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಪ್ರತ್ಯೇಕ ಬೆಡ್‌ಗಳನ್ನು ಕಾದಿರಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 200 ಬೆಡ್‌ಗಳನ್ನು ಶೀಘ್ರವೇ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.
ಹೊರಗೆ ಬರೋಕೆ ಜನರೇ ಸಿದ್ಧರಿಲ್ಲ! ಎಲ್ಲಾ ಖಾಲಿ ಖಾಲಿ
ಇದುವರೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ 1,053 ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ. ಬಂದರಿನಲ್ಲಿ ಆಗಮಿಸಿದ 5,543 ಪ್ರಯಾಣಿಕರನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ. ಇದರಲ್ಲಿ 46 ಶಂಕಿತ ಪ್ರಕರಣ ಪತ್ತೆಯಾಗಿದ್ದು, 36 ಪ್ರಕರಣಗಳ ಫಲಿತಾಂಶ ನೆಗೆಟಿವ್ ಬಂದಿದೆ. ಇನ್ನು 10 ಪ್ರಕರಣಗಳ ಲ್ಯಾಬ್ ಫಲಿತಾಂಶ ಬರಲು ಬಾಕಿ ಇದೆ. ಇದುವರೆಗೆ ಮಂಗಳೂರಿನಲ್ಲಿ ಕೊರೋನಾ ಸೋಂಕು ದೃಢಪಟ್ಟಿಲ್ಲ ಎಂದು ಅವರು ಹೇಳಿದರು.
ವೆನ್ಲಾಕ್ ಆಸ್ಪತ್ರೆಗೆ ಸಚಿವ ಶ್ರೀರಾಮುಲು ಭೇಟಿ
ಆರೋಗ್ಯ ಸಚಿವ ಶ್ರೀರಾಮುಲು ಮಂಗಳವಾರ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಭೇಟಿನೀಡಿ ಐಸೋಲೇಷನ್ ವಾರ್ಡ್ ಪರಿಶೀಲನೆ ನಡೆಸಿ, ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕೊರೋನಾ ಸೋಂಕಿನ ಬಗ್ಗೆಯಾರೂ ಭಯ-ಭೀತರಾಗುವುದು ಬೇಡ. ರಾಜ್ಯದ ಮುಖ್ಯಮಂತ್ರಿ ಬಿಎಸ್‌ವೈಅವರ ಆದೇಶದ ಮೇರೆಗೆ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ರಾಜ್ಯ ಸರ್ಕಾರ ಸಾಕಷ್ಟುಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ಸೋಂಕು ಬಂದ ತಕ್ಷಣ ಸಾವು ಬರುತ್ತದೆ ಎಂಬ ಭಯ ಎಲ್ಲರಲ್ಲಿದೆ. ನೂರು ಮಂದಿ ಸೋಂಕಿತರಲ್ಲಿ ಇಬ್ಬರಿಗೆ ತೊಂದರೆ ಆಗಿರಬಹುದು. ಅವರಿಗೂ ಏನೂ ಆಗುವುದಿಲ್ಲ. ಅಂಕಿ ಅಂಶಗಳ ಪ್ರಕಾರ 10 ಮಂದಿಗೆ ಕೊರೋನಾ ಪಾಸಿಟಿವ್ ಇದ್ದರೂ, ಅವರೂ ರೋಗದಿಂದ ಗುಣಮುಖರಾಗುತ್ತಿದ್ದಾರೆ. ವಿದೇಶಕ್ಕೆ ಹೋಗಿ ಭಾರತಕ್ಕೆ ಬಂದವರಲ್ಲಿ ಕೊರೊನಾ ಸೋಂಕು ಇದ್ದವರ ಸಂಪರ್ಕ ಹೊಂದಿದವರಿಗೆ ಈ ರೋಗ ಬಂದಿದೆಯೇ ಹೊರತು ಈ ರೋಗ ಇಲ್ಲಿಯೇ ಉಲ್ಬಣವಾದದ್ದಲ್ಲ. ಜಿಲ್ಲೆಯಲ್ಲಿ ಬಿಸಿಲು ಅಧಿಕವಾಗಿರುವುದರಿಂದ ಕೊರೋನಾ ವೈರಸ್ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಅವರು ಹೇಳಿದರು.
ಮುನ್ನೆಚ್ಚರಿಕೆ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಸೂಚನೆಯಂತೆ ಕಫ,ಜ್ವರ, ನೆಗಡಿ ಬಂದವರು ತಕ್ಷಣ ವೈದ್ಯರನ್ನು ಕಾಣುವುದು, ಸೋಂಕಿನ ಲಕ್ಷಣ ಇದ್ದಲ್ಲಿ ಮಾತ್ರ ಮಾಸ್ಕ್ ಧರಿಸೋದು ಒಳಿತು. ಕಾಸರಗೋಡು ವ್ಯಕ್ತಿಗೆ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿದ್ದು, ಆತ ಮಂಗಳೂರು ಸುತ್ತಮುತ್ತ ತಿರುಗಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಆದಷ್ಟುಬೇಗ ಆವ್ಯಕ್ತಿಯನ್ನು ಪತ್ತೆ ಹಚ್ಚುವ ಕೆಲಸ ಮಾಡಿ, ಆತನನ್ನು ಹಾಗೂ ಆತ ಯಾರನ್ನೆಲ್ಲಾ ಸಂಪರ್ಕಿಸಿದ್ದಾನೋ ಅವರನ್ನೆಲ್ಲಾ ಐಸೋಲೇಟೆಡ್ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಸಿಂಧು ರೂಪೇಶ್, ಜಿ.ಪಂ. ಸಿಇಒ ಡಾ.ಸೆಲ್ವಮಣಿ, ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಇದ್ದರು.