ಮೋದಿ ಪತ್ರ ಮಂಗಳೂರು ಸ್ವಚ್ಛ ಮಾಡಿತು!

Published : Sep 17, 2018, 09:34 AM ISTUpdated : Sep 19, 2018, 09:27 AM IST
ಮೋದಿ ಪತ್ರ ಮಂಗಳೂರು ಸ್ವಚ್ಛ ಮಾಡಿತು!

ಸಾರಾಂಶ

ಸ್ವಚ್ಛ ಭಾರತ ಅಭಿಯಾನದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಹಿ ಸೇವಾ ಎಂಬ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದರಿಂದ ದೇಶದೆಲ್ಲೆಡೆ ಹಲವು ಸಂಘ ಸಂಸ್ಥೆಗೆಳು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು, ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳೂರು ಸ್ವಚ್ಛವಾಗಿದ್ದು ಹೀಗೆ...

ಆತ್ಮಭೂಷಣ್

ಮಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಪತ್ರ ಸ್ವಚ್ಛತಾ ಕಾರ್ಯಕ್ರಮದ ದಿಕ್ಕನ್ನೇ ಬದಲಿಸಿತ್ತು. ಅಂದು ಆರಂಭವಾದ ಸ್ವಚ್ಛತಾ ಕಾರ್ಯಕ್ರಮ ಅಭಿಯಾನ ಸ್ವರೂಪ ಪಡೆದುಕೊಂಡು ಈಗ ಜಿಲ್ಲಾ ಹಂತಕ್ಕೆ ವಿಸ್ತರಿಸಿದೆ. ಇದು ಮಂಗಳೂರಿನ ರಾಮಕೃಷ್ಣ ಮಿಷನ್ ನಡೆಸುತ್ತಿರುವ ‘ಸ್ವಚ್ಛ ಮಂಗಳೂರು’ ಕಲ್ಪನೆಯ ಸ್ಥೂಲನೋಟ.

2014ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಆಂದೋಲನ ಉದ್ಘಾಟಿಸುವ ಮೊದಲು ಕೋಲ್ಕತ್ತಾದ ರಾಮಕೃಷ್ಣ ಆಶ್ರಮದ ಪ್ರಧಾನ ಕಚೇರಿಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ, ಕೇಂದ್ರ ಸರ್ಕಾರ ದೇಶ ಸ್ವಚ್ಛ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳಲಿದೆ. ನೀವೂ ಕೈಜೋಡಿಸಿ ಎಂಬ ವಿನಂತಿಯನ್ನಷ್ಟೆ ಮಾಡಲಾಗಿತ್ತು. ಆ ಪತ್ರದ ಪ್ರತಿಯನ್ನು ರಾಮಕೃಷ್ಣ ಆಶ್ರಮದ ಎಲ್ಲ 200
ಶಾಖೆಗಳಿಗೆ ಕಳುಹಿಸಿದ್ದರು. 

ಅಕ್ಟೋಬರ್ 2ರಂದು ದೇಶಾದ್ಯಂತ ಸ್ವಚ್ಛ ಭಾರತ್ ಆಂದೋಲನಕ್ಕೆ ಅದ್ಧೂರಿಯ ಚಾಲನೆ ಸಿಕ್ಕಿದರೆ, ಮಂಗಳೂರಿನ ರಾಮಕೃಷ್ಣ ಮಠದ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಮಾತ್ರ ಎಲ್ಲದಕ್ಕಿಂತ ವಿಭಿನ್ನವಾಗಿ ಸ್ವಚ್ಛತಾ ಅಭಿಯಾನವನ್ನು ಹೇಗೆ ಕೈಗೆತ್ತಿಕೊಳ್ಳಬಹುದು ಎಂದು ಯೋಚಿಸುತ್ತಿತ್ತು. ಇದಕ್ಕೆ ಬೇಕಾದ ಎಲ್ಲ ರೂಪರೇಷೆಗಳನ್ನು ಹಾಕಿಕೊಂಡ ಮಿಷನ್‌ನ ತಂಡ 2015ರ ಫೆಬ್ರವರಿಯಲ್ಲಿ ‘ಸ್ವಚ್ಛ ಭಾರತಕ್ಕಾಗಿ ಸ್ವಚ್ಛ  ಮಂಗಳೂರು’ ಯೋಜನೆಯೊಂದಿಗೆ ಪೊರಕೆ ಹಿಡಿದುಕೊಂಡು ಬೀದಿಗೆ ಇಳಿದೇ ಬಿಟ್ಟಿತು. ರಾಮಕೃಷ್ಣ ಆಶ್ರಮಗಳ ಪೈಕಿ ಸುಮಾರು ೬೦ ಆಶ್ರಮಗಳಲ್ಲಿ ಸ್ವಚ್ಛ ಭಾರತ್ ಆಂದೋಲನ ಸ್ವರೂಪ ಪಡೆದುಕೊಂಡರೆ, ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ದೊಡ್ಡ ಪ್ರಮಾಣದಲ್ಲಿ ಐದು ವರ್ಷಗಳವರೆಗೆ ಇದನ್ನು ಅಭಿಯಾನ ರೂಪದಲ್ಲಿ ಮುಂದುವರಿಸುವ ಯೋಜನೆಯನ್ನೇ ಸಿದ್ಧಪಡಿಸಿತ್ತು. ೨೦೧೫ರಿಂದ ಆರಂಭವಾದ ಈ ಕಾರ್ಯಕ್ರಮ ವರ್ಷಕ್ಕೆ 40 ಭಾನುವಾರ ಅಡೆತಡೆ ಇಲ್ಲದೆ ಮುಂದುವರಿಯಿತು. ನಾಲ್ಕು ವರ್ಷದಿಂದಲೂ ಇದು ನಡೆಯುತ್ತಿದೆ.

20 ಲಕ್ಷ ಗಂಟೆ ಮಾನವಶ್ರಮ: ಇದುವರೆಗೆ 20 ಲಕ್ಷ ಗಂಟೆ ಮಾನವಶ್ರಮವನ್ನು ಸ್ವಚ್ಛ ಮಂಗಳೂರು ಅಭಿಯಾನಕ್ಕೆ ವಿನಿಯೋಗಿಸಲಾಗಿದೆ. 10 ಸಾವಿರ ವಿದ್ಯಾರ್ಥಿಗಳೂ ಸೇರಿ ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮೊದಲ ವರ್ಷ ಪ್ರಾಯೋಗಿಕವಾಗಿ 40 ವಾರ, ನಂತರ ಮೂರು ವರ್ಷ ಕಾಲ ತಲಾ 40 ವಾರದಂತೆ ಒಟ್ಟು 160 ವಾರ ಶ್ರಮದಾನ ನಡೆಸಲಾಯಿತು.

ಮಳೆಗಾಲದಲ್ಲಿ 12 ವಾರ ಅಭಿಯಾನಕ್ಕೆ ವಿರಾಮ ನೀಡಿತ್ತು. ಈ ವರ್ಷ 40 ತಂಡ, 40 ವಾರ, ತಲಾ 20 ಕಾರ್ಯಕ್ರಮದಂತೆ ಒಟ್ಟು 470 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2016 ಅಕ್ಟೋಬರ್ 2ಕ್ಕೆ ಈ ಅಭಿಯಾನಕ್ಕೆ ತಾರ್ಕಿಕ ಅಂತ್ಯಗೊಳಿಸುವ ಇರಾದೆಯನ್ನು ರಾಮಕೃಷ್ಣ
ಮಿಷನ್ ಹೊಂದಿದೆ. 

ಪ್ರತಿ ವಾರ ಶ್ರಮದಾನ: 
ಪ್ರತಿ ಭಾನುವಾರ ಬೆಳಗ್ಗೆ 7.30ರಿಂದ 10 ಗಂಟೆವರೆಗೆ ಶ್ರಮದಾನ ನಡೆಸಲಾಗುತ್ತದೆ. ೪೦ ತಂಡಗಳು ನಗರದಲ್ಲಿ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಂಡು ಕಸ ಗುಡಿಸುವುದು, ಬಸ್ ಸ್ಟ್ಯಾಂಡ್, ಫಲಕಗಳಿಗೆ ಬಣ್ಣ ಬಳಿಯುವುದು, ಸಣ್ಣಪುಟ್ಟ ದುರಸ್ತಿ, ಕಸ ವಿಲೇವಾರಿ, ಫುಟ್‌ಪಾತ್, ಚರಂಡಿ ಸರಿಪಡಿಸುವುದು, ಆ್ಯಕ್ಯುಪ್ರೆಶರ್ ಪಾರ್ಕ್, ತ್ಯಾಜ್ಯ ನಿರ್ವಹಣೆ ಹೀಗೆ ಪಾಲಿಕೆ ಮಾಡುವ ಎಲ್ಲ ಕೆಲಸಗಳನ್ನು ಸ್ವಚ್ಛತಾ ತಂಡದ ನುರಿತರು ಮಾಡುತ್ತಾರೆ. 

ಗಣ್ಯರೂ ಈ ಅಭಿಯಾನಕ್ಕೆ ಸಾಥ್ ನೀಡುತ್ತಾ ಇತರರಿಗೆ ಪ್ರೇರಣೆ ನೀಡುತ್ತಾರೆ. ಶ್ರಮದಾನ, ಸ್ವಚ್ಛ ಮನಸ್ಸು, ಮನೆ ಮನೆ ಭೇಟಿ ಹಾಗೂ ಸ್ವಚ್ಛ ಗ್ರಾಮ ಎಂಬ ನಾಲ್ಕು ಅಂಶಗಳನ್ನು ಈ ಅಭಿಯಾನ ಒಳಗೊಂಡಿದೆ. ಸ್ವಚ್ಛತಾ ತಂಡ ಸಂಜೆ 5ರಿಂದ 7 ಗಂಟೆವರೆಗೆ ಪ್ರತಿದಿನ ಮನೆಗಳಿಗೆ ತೆರಳಿ ಕರಪತ್ರ ವಿತರಣೆ ಮಾಡುತ್ತಿದೆ. ಸ್ವಚ್ಛತಾ ಅಭಿಯಾನದ ನಿರಂತರತೆ ಕಾಪಾಡಲು ಸ್ವಚ್ಛ ಮನಸ್ಸು ಕಾರ್ಯಕ್ರಮ ಸೇರ್ಪಡೆಗೊಳಿಸಿದೆ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ವಿದ್ಯಾಸಂಸ್ಥೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ನಿರಂತರತೆಯನ್ನು ಕಾಯ್ದುಕೊಳ್ಳುವ ಪ್ರೇರಣಾ ಕಾರ್ಯಕ್ರಮ ನಡೆಸುತ್ತಿದೆ. 100 ಶಾಲೆಗಳನ್ನು ಆಯ್ದುಕೊಂಡು ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಅಭಿಯಾನವನ್ನು ಜಿಲ್ಲೆಗೆ ವಿಸ್ತರಿಸಿದೆ. ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳನ್ನು ಇದಕ್ಕಾಗಿ ಆರಿಸಿಕೊಳ್ಳಲಾಗಿದೆ ಎನ್ನುತ್ತಾರೆ ಸ್ವಚ್ಛತಾ ಅಭಿಯಾನದ ಸಂಚಾಲಕ ಏಕಗಮ್ಯಾನಂದ ಸ್ವಾಮೀಜಿ. 

ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಎಷ್ಟು ಮುಖ್ಯವೋ ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ್ದು ಅತ್ಯಗತ್ಯ. ಜನತೆಯೇ ಅದರ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಯುತ್ತಿದೆ. ಜೊತೆಗೆ ಮಕ್ಕಳಲ್ಲಿ ಸ್ವಚ್ಛತೆಯ ಬೀಜ ಬಿತ್ತುವಲ್ಲಿ ಈ ಅಭಿಯಾನ ಯಶಸ್ಸಾಗಿದೆ. 
-ಜಿತಕಾಮಾನಂದಜಿ

PREV
click me!

Recommended Stories

ಬೆಳ್ತಂಗಡಿ ಬಾಲಕ ಸುಮಂತ್ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ : ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಟಾರ್ಚ್ ಪತ್ತೆ
ಮಂಗಳೂರಿನಿಂದ ಮರವಂತೆಗೆ ಇನ್ನು 110 ಕಿ.ಮೀ ಕರಾವಳಿ ದೋಣಿ ಜಾಲ, ಈ ಐದು ಸ್ಥಳಗಳಲ್ಲಿ ಇರಲಿದೆ ಸ್ಟಾಪ್‌!