ಗರ್ಭಿಣಿಗೆ ಫ್ಲ್ಯಾಟ್‌ ಪ್ರವೇಶ ನಿರಾಕರಿಸಿದ ಅಪಾರ್ಟ್‌ಮೆಂಟ್‌ಗೆ ನೋಟಿಸ್‌

By Kannadaprabha NewsFirst Published May 30, 2020, 9:04 AM IST
Highlights

ದುಬೈನಿಂದ ಆಗಮಿಸಿ ಮಂಗಳೂರಿನಲ್ಲಿ ಕ್ವಾರೆಂಟೈನ್‌ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಸಾವಿಗೀಡಾದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ, ಆಕೆಯನ್ನು ಅಪಾರ್ಟ್‌ಮೆಂಟ್‌ಗೆ ಸೇರಿಸಿಕೊಳ್ಳಲು ನಿರಾಕರಿಸಿ ಅಮಾನವೀಯತೆ ಪ್ರದರ್ಶಿಸಿದ ಅಪಾರ್ಟ್‌ಮೆಂಟ್‌ ಎಸೋಸಿಯೇಶನ್‌ಗೆ ನೋಟಿಸ್‌ ಜಾರಿ ಮಾಡಿದೆ.

ಮಂಗಳೂರು(ಮೇ 30): ದುಬೈನಿಂದ ಆಗಮಿಸಿ ಮಂಗಳೂರಿನಲ್ಲಿ ಕ್ವಾರೆಂಟೈನ್‌ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಸಾವಿಗೀಡಾದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ, ಆಕೆಯನ್ನು ಅಪಾರ್ಟ್‌ಮೆಂಟ್‌ಗೆ ಸೇರಿಸಿಕೊಳ್ಳಲು ನಿರಾಕರಿಸಿ ಅಮಾನವೀಯತೆ ಪ್ರದರ್ಶಿಸಿದ ಅಪಾರ್ಟ್‌ಮೆಂಟ್‌ ಎಸೋಸಿಯೇಶನ್‌ಗೆ ನೋಟಿಸ್‌ ಜಾರಿ ಮಾಡಿದೆ.

ಅಲ್ಲದೆ, ಆ ಮಹಿಳೆಗೆ ಅಪಾರ್ಟ್‌ಮೆಂಟ್‌ ಪ್ರವೇಶಕ್ಕೆ ಅವಕಾಶ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯ ತನಿಖಾ ಸಮಿತಿಯನ್ನೂ ನಿಯೋಜಿಸಲಾಗಿದೆ.

ಬೀದಿ ವ್ಯಾಪಾರಿಗಳಿಗೆ ಜ್ವರ- ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲು, ಕೊರೋನಾ ಭೀತಿ

ಮೇ 12ರಂದು ದುಬೈನಿಂದ ಆಗಮಿಸಿದ ಮೊದಲ ವಿಮಾನದಲ್ಲಿ 26 ವರ್ಷ ವಯಸ್ಸಿನ, ಆರೂವರೆ ತಿಂಗಳ ಗರ್ಭಿಣಿ ಆಗಮಿಸಿದ್ದರು. ಸರ್ಕಾರದ ನಿಯಮದಂತೆ ಕೋವಿಡ್‌-19 ಪರೀಕ್ಷೆ ನಡೆಸಿ ವರದಿ ನೆಗೆಟಿವ್‌ ಬಂದ ಬಳಿಕ ಹಾಗೂ ಗರ್ಭಿಣಿಯಾಗಿರುವುದರಿಂದ ಹೋಂ ಕ್ವಾರಂಟೈನ್‌ಗಾಗಿ ಶಿವಭಾಗ್‌ನಲ್ಲಿರುವ ಶಿವದೀಪ್‌ ಅಪಾರ್ಟ್‌ಮೆಂಟ್‌ಗೆ ಹೋಗಿದ್ದರು. ಆದರೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಗರ್ಭಿಣಿಯನ್ನು ಒಳಪ್ರವೇಶಿಸಲು ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ಗೆ ತೆರಳಿದ್ದರು. ಎರಡನೇ ಬಾರಿ ಕೊರೋನಾ ಪರೀಕ್ಷೆ ನಡೆಸಿ ಆಗಲೂ ನೆಗೆಟಿವ್‌ ಬಂದರೂ ಫ್ಲ್ಯಾಟ್‌ನವರು ಪ್ರವೇಶ ನಿರಾಕರಿಸಿದ್ದರು. ಈ ಮಧ್ಯೆ ಗರ್ಭಿಣಿಯ ಆರೋಗ್ಯದಲ್ಲಿ ಏರುಪೇರಾದಾಗ ಖಾಸಗಿ ಆಸ್ಪತ್ರೆಯವರೂ ಚಿಕಿತ್ಸೆ ನೀಡಲು ಒಪ್ಪಲಿಲ್ಲ. ಹೀಗಾಗಿ ಆಕೆಯ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಹೊಟ್ಟೆಯಲ್ಲೇ ಮಗು ಸಾವಿಗೀಡಾಗಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತವು ಮಹಾನಗರ ಪಾಲಿಕೆ ಆಯುಕ್ತರ ಮೂಲಕ ಫ್ಲ್ಯಾಟ್‌ ಎಸೋಸಿಯೇಶನ್‌ಗೆ ನೋಟಿಸ್‌ ನೀಡಿದೆ.

ಫುಟ್ಬಾಲ್‌ ಮೈದಾನದಲ್ಲಿ ಮಾರುಕಟ್ಟೆ: ಮಹಾನಗರ ಪಾಲಿಕೆಗೆ ನೋಟಿಸ್‌

ನಿರಾಕರಿಸಿದರೆ ಕಾನೂನು ಕ್ರಮ: ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ನವರ ಈ ಅಮಾನವೀಯ ನಡವಳಿಕೆಯು ಮಹಿಳೆಗೆ ಆಘಾತವನ್ನುಂಟು ಮಾಡಿದೆ. ಆದ್ದರಿಂದ ಈ ಘಟನೆಯ ಕುರಿತು ಮೂರು ದಿನದೊಳಗೆ ಸಮಜಾಯಿಶಿ ನೀಡಬೇಕು. ಅಲ್ಲದೆ, ಮಹಿಳೆಯನ್ನು ಫ್ಲ್ಯಾಟ್‌ಗೆ ಪ್ರವೇಶಿಸಲು ಯಾವುದೇ ಕಾರಣಕ್ಕೂ ನಿರಾಕರಿಸಬಾರದು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ತನಿಖಾ ಸಮಿತಿ:

ಇನ್ನು, ಅಬ್ದುಲ್‌ ಅಝೀಝ್‌ ಬಸ್ತಿಕಾರ್‌ ಎಂಬವರ ದೂರಿನ ಮೇರೆಗೆ ಮೆಸ್ಕಾಂ ಎಂಡಿ ಸ್ನೇಹಲ್‌ ಆರ್‌. ಅಧ್ಯಕ್ಷತೆಯಲ್ಲಿ 9 ಮಂದಿಯನ್ನೊಳಗೊಂಡ ಸಮಿತಿಯನ್ನು ಜಿಲ್ಲಾಡಳಿತ ರೂಪಿಸಿದೆ. ಈ ಸಮಿತಿಯು ತನಿಖೆ ನಡೆಸಿ ವರದಿ ಸಲ್ಲಿಸಲಿದೆ.

ಕೊರೋನಾ ಸಾವಿನಲ್ಲೂ ಚೀನಾ ಹಿಂದಿಕ್ಕಿದ ಭಾರತ!

ಹೊಟ್ಟೆಯಲ್ಲಿ ಮಗು ಸತ್ತ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಪ್ರಸವ ಮಾಡಿಸಲಾಗಿತ್ತು. ಪ್ರಸ್ತುತ ಈ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲೇ ಇದ್ದು, ಒಂದೆರಡು ದಿನದೊಳಗೆ ಡಿಸ್ಚಾಜ್‌ರ್‍ ಆಗುವ ನಿರೀಕ್ಷೆಯಿದೆ ಎಂದು ಆಕೆಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಸುಶಿಕ್ಷಿತರಿಂದಲೇ ನಿರಾಕರಣೆ!

ಕೋವಿಡ್‌-19 ವರದಿ ನೆಗೆಟಿವ್‌ ಬಂದರೂ ಗರ್ಭಿಣಿಯನ್ನು ಪ್ರವೇಶಿಸಲು ಬಿಡದ ಶಿವದೀಪ್‌ ಅಪಾರ್ಟ್‌ಮೆಂಟ್‌ ಎಸೋಸಿಯೇಶನ್‌ನಲ್ಲಿ ವೈದ್ಯರು, ಹಿರಿಯ ಪೊಲೀಸ್‌ ಅಧಿಕಾರಿಗಳು, ಮಾಜಿ ಸೈನಿಕರು ಕೂಡ ಇರುವ ವಿಚಾರ ಇದೀಗ ಗೊತ್ತಾಗಿದೆ. ಆಕೆಯನ್ನು ಫ್ಲ್ಯಾಟ್‌ಗೆ ಬಿಡದಂತೆ ವೈದ್ಯರೊಬ್ಬರು ಬಲವಾಗಿ ವಾದ ಮಂಡಿಸಿದ್ದರು ಎನ್ನಲಾಗಿದೆ. ಸರ್ಕಾರದ ಸ್ಪಷ್ಟಮಾರ್ಗಸೂಚಿ ಇದ್ದರೂ ಇದನ್ನು ಮೀರಿ ವೈಯಕ್ತಿಕವಾಗಿ ಕಠಿಣ ನಿರ್ಧಾರ ಕೈಗೊಂಡಿದ್ದರಿಂದ ಹೊಟ್ಟೆಯಲ್ಲೇ ಮಗು ಸಾವಿಗೀಡಾಗುವಂತಾಗಿದೆ.

click me!