ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಎಂದು ಘೋಷಣೆ ಮಾಡುವ ಮೂಲಕ ಅದನ್ನು ಜಾರಿಗೆ ತರುವ ವಿಷಯದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಮೀನಮೇಷ ಎಣಿಸುತ್ತಿದೆ| ಗಣಿಗಾರಿಕೆ ಆರಂಭಿಸುವ ಯತ್ನಕ್ಕೆ ಮಾಜಿ ಸಚಿವ ಜಾರಕಿಹೊಳಿ ವಿರೋಧ|
ಲಕ್ಷ್ಮೇಶ್ವರ(ಮೇ.30): ಕಪ್ಪತ್ತಗುಡ್ಡ ರಕ್ಷಣೆಗೆ ಕಾಂಗ್ರೆಸ್ ಹೋರಾಟಕ್ಕೆ ಸಿದ್ಧವಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಅರಣ್ಯ ಸಚಿವ ಸತೀಶ ಜಾರಕೀಹೊಳಿ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಖ್ಯಾತಿ ಹೊಂದಿದ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಣೆ ಮಾಡುವ ಮೂಲಕ ಅದನ್ನು ಜಾರಿಗೆ ತರುವ ವಿಷಯದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಮೀನಮೇಷ ಎಣಿಸುತ್ತಿದೆ. ಕಪ್ಪತ್ತಗುಡ್ಡವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ದೊರೆಯುವಂತೆ ಮಾಡಿ ಗಣಿಗಾರಿಕೆ ಪ್ರಾರಂಭವಾಗುವಂತೆ ಮಾಡುವ ನಿಟ್ಟಿನಲ್ಲಿ ಮುಂದಾಗುತ್ತಿರುವುದನ್ನು ಬಲವಾಗಿ ಖಂಡಿಸುವದಾಗಿ ತಿಳಿಸಿದರು.
ಕಪ್ಪತ್ತಗುಡ್ಡದ ತಂಟೆಗೆ ಬಂದರೆ ಹೋರಾಟ: ಸರ್ಕಾರಕ್ಕೆ ತೋಂಟದ ಶ್ರೀ ಖಡಕ್ ಎಚ್ಚರಿಕೆ
ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಅಬಕಾರಿ ಸಚಿವನಾಗಿದ್ದಾಗ ಅರಣ್ಯ ನಿಗಮದ ಅಧ್ಯಕ್ಷ ಟಿ. ಈಶ್ವರ ಅವರೊಂದಿಗೆ ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದೆ. ಈ ಕುರಿತಂತೆ ಈ ಭಾಗದ ಜನರ, ಮುಖಂಡರ ಅಭಿಪ್ರಾಯ ಸಹ ಪಡೆದುಕೊಂಡಿದ್ದೆ, ಅರಣ್ಯ ಇಲಾಖೆ ಸಚಿವನಾದ ಕೂಡಲೇ ವನ್ಯಜೀವಿ ಮಂಡಳಿಯ ಸಭೆ ಕರೆದು ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿತ್ತು ಎಂದು ಹೇಳಿದ ಅವರು, ಸುಮಾರು 64 ಕಿಮೀ ಉದ್ದ ಮತ್ತು 15 ಕಿಮೀ ಅಗಲವಾಗಿರುವ ಕಪ್ಪತ್ತಗುಡ್ಡ ಮುಂಡರಗಿ, ಶಿರಹಟ್ಟಿಮತ್ತು ಗದಗ ತಾಲೂಕುಗಳ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿಕೊಂಡಿದೆ. ಇದರಲ್ಲಿ 24,415.73 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿಧಾಮ ಎಂದು ಘೋಷಣೆ ಆಗಿದೆ. ಈ ಪ್ರದೇಶವನ್ನು ಬ್ಲಾಕ್ 1, 2, 3 ಮತ್ತು 4 ಎಂದು ವಿಂಗಡಣೆ ಮಾಡಲಾಗಿದೆ.
ಈ ಪ್ರದೇಶದ ಸುತ್ತಮುತ್ತ 10-15 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಲ್ಲುಕ್ವಾರಿ, ಗಣಿಗಾರಿಕೆ, ಮಣ್ಣು ಅಗೆಯಲು ಅವಕಾಶ ಇಲ್ಲ. ಆದರೆ, ಇವುಗಳನ್ನು ಪ್ರಾರಂಭ ಮಾಡುವ ನಿಟ್ಟಿನಲ್ಲಿ ಕೆಲವು ಶಕ್ತಿಗಳು ಮುಂದಾಗುತ್ತಿರುವ ವಿಷಯ ಈ ಭಾಗದ ಜನರ ನೋವಿನ ಸಂಗತಿಯಾಗಿದ್ದು, ಕಾಂಗ್ರೆಸ್ ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ, ಈ ವಿಷಯವಾಗಿ ಕಾಂಗ್ರೆಸ್ ಸದಾ ಹೋರಾಟಕ್ಕೆ ಸಿದ್ಧ ಎಂದರು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಪ್ಪತ್ತಗುಡ್ಡದ ವನ್ಯಜೀವಿಧಾಮ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆ ಆರಂಭಿಸಲು ಅನುಕೂಲ ಆಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಈ ಗುಡ್ಡವನ್ನು ವನ್ಯಜೀವಿಧಾಮದಿಂದ ಮುಕ್ತ ಮಾಡಲು ಶಿಫಾರಸು ಮಾಡಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಕಪ್ಪತ್ತಗುಡ್ಡದಲ್ಲಿ ಅಪರೂಪದ ಔಷಧ ಸಸ್ಯಗಳು ಹಾಗೂ ಅನೇಕ ಪ್ರಾಣಿ ಪಕ್ಷಿಗಳ ಸಂಕುಲ ವಾಸಿಸುತ್ತವೆ. ಇಂತಹ ಅಪರೂಪದ ಕಪ್ಪತ್ತಗುಡ್ಡದ ರಕ್ಷಣೆ ಎಲ್ಲರ ಹೊಣೆಯಾಗಿದೆ. ಅಮೂಲ್ಯ ಸಂಪತ್ತನ್ನು ಹೊಂದಿರುವ ಕಪ್ಪತ್ತಗುಡ್ಡಕ್ಕೆ ಯಾವುದೇ ತರಹದ ತೊಂದರೆ ಉಂಟಾದರೆ ಕಾಂಗ್ರೆಸ್ ಹೋರಾಟಕ್ಕಿಳಿಯಲಿದೆ ಎಂದು ಸತೀಶ ಜಾರಕೀಹೊಳಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ಕಪ್ಪತ್ತಗುಡ್ಡವನ್ನು ಉಳಿಸುವ ನಿಟ್ಟಿನಲ್ಲಿ ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆದಿತ್ತು. ಹೋರಾಟದ ಪ್ರತಿಫಲವಾಗಿ ಫೋಸ್ಕೋದಂಥ ದೈತ್ಯ ಕಂಪನಿಗಳು ಜಿಲ್ಲೆಯಿಂದ ಪಲಾಯನ ಮಾಡಿದ್ದವು. ಆದರೆ, ಇದೀಗ ಬಿಜೆಪಿ ಸರ್ಕಾರ ವನ್ಯಜೀವಿಧಾಮದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವಲ್ಲಿ ನಿರತವಾಗಿದೆ ಎಂಬ ಮಾಹಿತಿ ಬಂದಿದೆ. ಕಾರಣ ಮತ್ತೆ ಕಪ್ಪತ್ತಗುಡ್ಡದ ರಕ್ಷಣೆಗೆ ಅಭಿಯಾನ ಆರಂಭಿಸಲಾಗುವುದು ಎಂದರು.
ಮಾಜಿ ಶಾಸಕ ಎಸ್.ಎನ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಅರಣ್ಯ ಕೈಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಟಿ. ಈಶ್ವರ, ಶಿವಪ್ರಕಾಶ ಮಹಾಜನಶೆಟ್ಟರ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ದಾದಾಪೀರ ಮುಚ್ಚಾಲೆ, ವಿರೂಪಾಕ್ಷಪ್ಪ ಪಡಗೇರಿ, ವಿಜಯ ಕರಡಿ, ಬಸವರಾಜ ಹಿರೇಮನಿ ಇದ್ದರು.