ಮಂಡ್ಯದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿಯಲ್ಲಿ ನಡೆದಿರುವ 3.51 ಕೋಟಿ ರು. ಹಣ ದುರುಪಯೋಗಕ್ಕೆ ತನಿಖೆ ವಿಳಂಬವಾಗುತ್ತಿದ್ದು, ಆರೋಪಿಗಳು ನಿರಾಳರಾಗಿದ್ದಾರೆ!
ಮಂಡ್ಯ ಮಂಜುನಾಥ
ಮಂಡ್ಯ (ಆ.11): ಮಂಡ್ಯದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿಯಲ್ಲಿ ನಡೆದಿರುವ 3.51 ಕೋಟಿ ರು. ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆಗೆ ಗೈರು ಹಾಗೂ ಸಿಐಡಿ ತನಿಖೆಗೆ ಪೂರಕ ದಾಖಲೆಗಳನ್ನು ಒದಗಿಸಲು ಅಧಿಕಾರಿಗಳು ಅಸಹಕಾರ ತೋರುತ್ತಿರುವುದರಿಂದ ತನಿಖೆ ವಿಳಂಬವಾಗಿದ್ದು, ಆರೋಪಿಗಳು ನಿರಾಳರಾಗಿದ್ದಾರೆ!
undefined
ಕಾರ್ಯಪಾಲಕ ಅಭಿಯಂತರರಾದ ಚಂದ್ರಹಾಸ, ರಾಮಕೃಷ್ಣ, ಎಸ್.ವಿ.ಪದ್ಮನಾಭ, ಪ್ರಕಾಶ್ ಗೋಪಾಲಕೃಷ್ಣ ಪವಾರ್, ಎಸ್.ಕುಮಾರ್, ಲೆಕ್ಕಪರಿಶೋಧಕರಾದ ಕೆ.ಪುಟ್ಟಭೈರಯ್ಯ, ಆರ್.ರಾಜು, ಲೆಕ್ಕ ಅಧೀಕ್ಷಕ ವಿ.ಪಿ.ಆನಂದಕುಮಾರ್ ಹಾಗೂ ನಗದು ಸಹಾಯಕರಾದ ಬಿ.ಆರ್.ಚಂದ್ರಶೇಖರ್, ಟಿ.ಲಕ್ಷ್ಮೀಕಾಂತ್, ಬಿ.ರಮೇಶ್, ಡಿ-ಗ್ರೂಪ್ ನೌಕರ ಹೆಚ್.ಎಲ್.ನಾಗರಾಜು ಪ್ರಕರಣದ ಆರೋಪಿಗಳಾಗಿದ್ದು, ಈ ಪೈಕಿ ಪ್ರಮುಖ ಆರೋಪಿ ಎಚ್.ಎಲ್.ನಾಗರಾಜು ಹಾಗೂ ವಿ.ಪಿ.ಆನಂದಕುಮಾರ್ ಮೃತಪಟ್ಟಿದ್ದಾರೆ.
2010-11 ರಿಂದ 2019-20ರವರೆಗೆ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ ಕಚೇರಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಹಣ ದುರುಪಯೋಗವಾಗಿರುವುದು ದಿನಾಂಕ 28.10.2019ರಲ್ಲಿ ಬೆಳಕಿಗೆ ಬಂದಿತ್ತು. ಹಣ ದುರ್ಬಳಕೆ ಹಿಂದೆ ಅಧಿಕಾರಿಗಳು, ನೌಕರರ ಕೈವಾಡವಿರುವುದು ಲೆಕ್ಕಪತ್ರಗಳ ತಪಾಸಣೆಯಿಂದ ಬಹಿರಂಗಗೊಂಡಿತ್ತು. ಆರೋಪಿಗಳ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 408, 409, 465, 468, 417 ಹಾಗೂ 420ರಡಿ ಪ್ರಕರಣ ದಾಖಲಾಗಿತ್ತು.
ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಹಣಕ್ಕೆ ಕನ್ನ?: ಹಣ ದುರುಪಯೋಗ ಪ್ರಕರಣದಲ್ಲಿ ಕೈವಾಡ ನಡೆಸಿರುವ ಖದೀಮರು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ, ಸಂಸದರ ನಿಧಿ, ಕಾರ್ಮಿಕರ ಕಲ್ಯಾಣ ನಿಧಿ, ಬರಪರಿಹಾರ ಸೇರಿದಂತೆ ಹಲವು ಮಂಡ್ಯದಲ್ಲಿರುವ ಹಲವು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿರುವುದು ನಿಬ್ಬೆರಗಾಗುವಂತೆ ಮಾಡಿತ್ತು.
ಫ್ರಾನ್ಸ್ ಅಧ್ಯಕ್ಷನಿಂದ ಮೆಚ್ಚುಗೆ ಪಡೆದ 140 ವರ್ಷಗಳ ಹಳೆಯ ಹಿಂದೂ ಗಾಯಕನ ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು!
ಬ್ಯಾಂಕ್ ಹೆಸರು, ಅನುದಾನ, ಮೊತ್ತ
ಕಾರ್ಪೋರೇಷನ್ ಬ್ಯಾಂಕ್, ಎಂಎಲ್‌ಎ/ ಎಂಎಲ್‌ಸಿ, 1,39,19,043 ರು.
ಕೆನರಾಬ್ಯಾಂಕ್, ಸಂಸದರ ನಿಧಿ (ಸಿಎಸ್‌ಪಿ), 51,142 ರು.
ಪಂಜಾಬ್ ನ್ಯಾ.ಬ್ಯಾಂಕ್,3054ರ ಅನುದಾನ, 13,52,464 ರು.
ಐಡಿಬಿಐ ಬ್ಯಾಂಕ್ , ಇತರೆ ಇಲಾಖೆಗಳ ಖಾತೆ, 6,04,640 ರು.
ಎಸ್‌ಬಿಐ (ಮುಖ್ಯಶಾಖೆ), ನೆಫ್ಟ್ ಖಾತೆ, 52,25,000 ರು.
ಎಸ್‌ಬಿಐ (ಎಡಿಬಿ), ವಿಶ್ವಬ್ಯಾಂಕ್, 72,10,000 ರು.
ಎಚ್‌ಡಿಎಫ್‌ಸಿ, ರಾಜ್ಯಸಭಾ ಸದಸ್ಯರ ನಿಧಿ, 29,913 ರು.
ಆಕ್ಸಿಸ್ ಬ್ಯಾಂಕ್, ಬರಪರಿಹಾರ, 24,158 ರು.,
ಜಿಲ್ಲಾ ಖಜಾನೆ, ಕಾರ್ಮಿಕರ ಕಲ್ಯಾಣ ನಿಧಿ, 67,09,369 ರು.
ಒಟ್ಟು, 51,25,729 ರು.
ಇಲಾಖಾ ವಿಚಾರಣೆಗೆ ಗೈರು: ಯಾವುದೇ ಒಂದು ಪ್ರಕರಣದಲ್ಲಿ ವಿಚಾರಣಾಧಿಕಾರಿಯನ್ನು ನೇಮಿಸಿದ ತರುವಾಯ ವಿಚಾರಣೆ ನಡೆಸಲು ಹಾಗೂ ವಿಚಾರಣಾ ವರದಿ ಸಲ್ಲಿಸಲು ನಾಲ್ಕು ತಿಂಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾದ ಪಿ.ರವಿಕುಮಾರ್, ಡಿ.ಬಿ.ಕವಿತಾ, ಪ್ರವೀಣ್‌ಕುಮಾರ್, ಅನಿತಾ, ಕೋಮಲ, ಡಿ.ರಾಮೇಗೌಡ, ಎಂ.ಎಲ್.ಭಾಗ್ಯಲಕ್ಷ್ಮೀ ಅವರು ವಿಚಾರಣೆಗೆ ಪದೇ ಪದೇ ಗೈರು ಹಾಜರಾಗುತ್ತಿರುವುದರಿಂದ ಪ್ರಕರಣದ ಇಲಾಖಾ ವಿಚಾರಣೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ಈ ವಿಳಂಬವನ್ನು ತಪ್ಪಿಸಲು ಪ್ರಕರಣದಲ್ಲಿನ ಆರೋಪಗಳ ಕುರಿತು ಸಾಕ್ಷಿಗಳಿಂದ ಹೇಳಿಕೆ ಮತ್ತು ದಾಖಲೆಗಳನ್ನು ಪಡೆಯುವ ಉದ್ದೇಶಕ್ಕಾಗಿ ಮತ್ತು ಹಾಜರಾತಿಪಡಿಸಲು ಕರ್ನಾಟಕ ಇಲಾಖಾ ವಿಚಾರಣೆಗಳ (ಸಾಕ್ಷಿದಾರರ ಹಾಜರಾತಿ ಮತ್ತು ದಸ್ತಾವೇಜುಗಳ ಹಾಜರುಪಡಿಸುವಿಕೆಯನ್ನು ಒತ್ತಾಯಪಡಿಸುವ) ಅಧಿನಿಯಮ 1981ರ ಸೆಕ್ಷನ್ 5ರಲ್ಲಿ ನಿಗದಿಪಡಿಸಿರುವ ಅಧಿಕಾರವನ್ನು ಚಲಾಯಿಸಲು ವಿಚಾರಣಾಧಿಕಾರಿಗೆ ಅಧಿಕಾರ ನೀಡಿದೆ.
ಇಲಾಖಾ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲು ಸರ್ಕಾರ ನೀಡಿರುವ ವಿಶೇಷ ಅಧಿಕಾರವನ್ನು ಬಳಸುವ ಮೂಲಕ ತನಿಖೆಯ ವಿಳಂಬಕ್ಕೆ ಕಾರಣರಾದವರ ವಿರುದ್ಧ ಚಾಟಿ ಬೀಸಬೇಕಿದೆ.
ದಾಖಲೆ ನೀಡಲು ವಿಳಂಬ: ಇನ್ನೊಂದೆಡೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿಯು ಈವರೆಗೆ 285 ದಾಖಲೆಗಳನ್ನು ವಶಕ್ಕೆ ಪಡೆದಿದೆ. ಪ್ರಕರಣ ಸಂಬಂಧ 2010ರಿಂದ 2020ರವರೆಗೆ ವರ್ಷವಾರು ಅಡಿಟ್ ವರದಿ ಮತ್ತು ಕರ್ತವ್ಯ ಹಂಚಿಕೆ ಮಾಡಿರುವ ವಿವರವನ್ನು ತ್ವರಿತವಾಗಿ ನೀಡುವಂತೆ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಮತ್ತು ಜಿಪಂ ಸಿಇಒಗೆ ಹಲವು ಪತ್ರಗಳ ವ್ಯವಹಾರ ಮಾಡಿದ್ದರೂ ವರದಿ ನೀಡದೆ ವಿಳಂಬ ಮಾಡಿರುವುದರಿಂದ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬ್ಯಾಂಕ್‌ಗಳ ವಿರುದ್ಧ ದಾಖಲಾಗದ ದೂರು: ಪಂಚಾಯತ್ ರಾಜ್ ವಿಭಾಗ ಕಚೇರಿಯ ಅನುದಾನಕ್ಕೆ ಸಂಬಂಧಿಸಿದಂತೆ ಏಳು ಬ್ಯಾಂಕ್ ಖಾತೆಯಲ್ಲಿ ಜಮೆ ಆಗಿದ್ದ ಹಣವನ್ನು ಬ್ಯಾಂಕ್ ಸಿಬ್ಬಂದಿ ಪ್ರಚಲಿತ ಆದೇಶ, ನಿಯಮಗಳಿಗೆ ವಿರುದ್ಧವಾಗಿ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿ ಗಂಭೀರ ಸ್ವರೂಪದ ಲೋಪವೆಸಗಿದ್ದಾರೆ. ಆದ್ದರಿಂದ ದುರುಪಯೋಗವಾಗಿರುವ ಮೊತ್ತವನ್ನು ಸರ್ಕಾರಕ್ಕೆ ಮರು ಪಾವತಿಸಲು ಸಂಬಂಧಿಸಿದ ಬ್ಯಾಂಕ್‌ಗಳ ವಿರುದ್ಧವೂ ಬೆಂಗಳೂರಿನ ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು 22 ಸೆಪ್ಟೆಂಬರ್ 2022ರಂದು ಸದನದಲ್ಲಿ ಉತ್ತರಿಸಿದ್ದರು.
ಆದರೆ, ಇದುವರೆಗೂ ಬ್ಯಾಂಕ್‌ಗಳ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲವೇ ಎಂದು ಇಲಾಖಾ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು 19 ಜುಲೈ 2024 ರಂದು ಉತ್ತರ ನೀಡಿದ್ದಾರೆ.
ಎಂಎಲ್‌ಎ, ಎಂಎಲ್‌ಸಿ, ಸಂಸದರ ನಿಧಿ, ಬರಪರಿಹಾರ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ದುರುಪಯೋಗ ಮಾಡಲಾಗದೆ . ಅದನ್ನು ಮತ್ತೆ ಆಯಾ ಖಾತೆಗಳಿಗೆ ಮರಳಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ವಿಚಾರಣೆಗೆ ಎಲ್ಲರೂ ಸಹಕರಿಸಬೇಕು. ಸಹಕರಿಸದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು.
-ಮಧು ಜಿ.ಮಾದೇಗೌಡ, ವಿಧಾನಪರಿಷತ್ ಸದಸ್ಯರು.