ತುಮಕೂರಿನಲ್ಲಿ ಹರತಿ-ನಿಡುಗಲ್ ಪಾಳೇಗಾರ ದೇವಪ್ಪ ನಾಯಕನ ಕಾಲದ ತಾಮ್ರ ಶಾಸನ ಪತ್ತೆಯಾಗಿದೆ. ಈತ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಆಳ್ವಿಕೆ ನಡೆಸುತ್ತಿದ್ದ.
ತುಮಕೂರು (ಆ.11): ಮಧುಗಿರಿ ತಾಲೂಕಿನ ಗಡಿಭಾಗದ ಅಗಳಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಆಳ್ವಿಕೆ ಮಾಡುತ್ತಿದ್ದ ಹರತಿ-ನಿಡುಗಲ್ ಪಾಳೇಗಾರ ದೇವಪ್ಪ ನಾಯಕನ ಕಾಲದ ತಾಮ್ರ ಶಾಸನ ಪತ್ತೆಯಾಗಿದೆ.
ತುಮಕೂರಿನ ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಈ ಶಾಸನವನ್ನು ಅಗಳಿಯ ಗ್ರಾಮಸ್ಥರಾದ ಸದಾಶಿವಯ್ಯ ಸಂರಕ್ಷಿಸಿಟ್ಟುಕೊಂಡಿದ್ದಾರೆ. ಇದನ್ನು ತಾಮ್ರ ಲೋಹದ ಹಲಗೆಯ ಎರಡೂ ಮುಖದಲ್ಲಿ ಕನ್ನಡ ಲಿಪಿಯಲ್ಲಿ ಬರೆದಿದ್ದರೂ ಭಾಷೆ ಮಾತ್ರ ಸಂಸ್ಕೃತ ಮತ್ತು ತೆಲುಗು ಆಗಿದೆ. ಈ ತಾಮ್ರಶಾಸನವು ಒಟ್ಟು 49 ಸಾಲುಗಳಿಂದ ಕೂಡಿದೆ ಎಂದು ತಿಳಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷನಿಂದ ಮೆಚ್ಚುಗೆ ಪಡೆದ 140 ವರ್ಷಗಳ ಹಳೆಯ ಹಿಂದೂ ಗಾಯಕನ ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು!
ಈ ತಾಮ್ರ ಶಾಸನವನ್ನು ಹೆಚ್ಚಿನ ಜಯಪತ್ರಿಕೆ ಎಂದು ಕರೆಯಲಾಗಿದ್ದು, ವಿಜಯನಗರದ ಚಕ್ರವರ್ತಿ ಬುಕ್ಕರಾಯನನ್ನು (1399-1406) ಉಲ್ಲೇಖಿಸುತ್ತದೆ. ಶಾರದಾ ಸ್ತುತಿಯಿಂದ ಆರಂಭವಾಗುವ ಈ ಶಾಸನವು ಸಂಸ್ಕೃತ ಶ್ಲೋಕಗಳಿಂದ ಕೂಡಿದೆ. ಅನಂತರ ತೆಲುಗು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ ಎಂದು ಹೇಳಿದರು.
ಈ ತಾಮ್ರ ಶಾಸನವು ಅಗಳಿ ಗ್ರಾಮದ ಶಂಕರೇಶ್ವರ ದೇವರಿಗೆ ಸಂಬಂಧಪಟ್ಟಿದ್ದಾಗಿದ್ದು, ಹರತಿ-ನಿಡುಗಲ್ ಪಾಳೇಗಾರರ ವಂಶದವನಾದ ದೇವಪ್ಪನಾಯಕನು ತನ್ನ ರಾಜ್ಯಕ್ಕೆ ಸೇರಿದ್ದ ಅಗಳಿಯ ಶಂಕರೇಶ್ವರ ದೇವರಿಗೆ ದೇವಮಾನ್ಯವಾಗಿ ಆ ಊರಿಗೆ ಸೇರಿದ್ದ ಕೆರೆ, ಕಟ್ಟೆ, ಕುಂಟೆ, ಬಾವಿ, ಹೊಲ, ಗದ್ದೆಯ ಜೊತೆಗೆ ಆ ಊರಿನ ಜನರಿಂದ ಸಂಗ್ರಹವಾದ ತೆರಿಗೆಯನ್ನು ದಾನ ಮಾಡಿದ್ದನು. ಈ ದಾನವನ್ನು ಆತ ಆ ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಹದಿನೆಂಟು ಜನರಿಗೆ ಒಂದೊಂದು ವ್ರಿತ್ತಿಯನ್ನಾಗಿ ವಿಂಗಡಿಸಿ ನೀಡಿದನೆಂದು ಉಲ್ಲೇಖಿಸಲಾಗಿದೆ
ಆಂಡ್ರಾಯ್ಡ್ ಫೋನ್ ವೇಗವಾಗಿ ಕೆಲಸ ಮಾಡಲು ಈ 5 ಸುಲಭ ವಿಧಾನ ಬಳಸಿ
ಈಗಲೂ ಸಹ ಆ ಊರಿನಲ್ಲಿ ಮಹಾನವಮಿ ಹಬ್ಬದ ಸಂದರ್ಭದಲ್ಲಿ ತಾಮ್ರ ಶಾಸನದಲ್ಲಿ ತಿಳಿಸಿರುವ ವ್ಯಕ್ತಿಗಳ ವಂಶಸ್ಥರು ಶಂಕರೇಶ್ವರ ದೇವಾಲಯದ ಆವರಣದಲ್ಲಿ ಸಭೆ ಸೇರಿ ಮಹಾನವಮಿಯ (ದಸರಾ ಹಬ್ಬ) ಒಂಭತ್ತು ದಿನದ ಧಾರ್ಮಿಕ ಆಚರಣೆಯ ಬಗ್ಗೆ ಚರ್ಚಿಸಿ ತಮಗೆ ನಿಗದಿಯಾಗಿರುವ ಸೇವೆಗಳನ್ನು ಮಾಡುತ್ತಿದ್ದಾರೆ. ಈಗ ಇವರನ್ನೆಲ್ಲಾ ದೇವರ ಕೈವಾಡದವರು ಎಂದು ಕರೆಯಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಪರಂಪರೆ ಆ ಊರಿನಲ್ಲಿ ಈಗಲೂ ಮುಂದುವರಿಯುತ್ತಿರುವುದು ವಿಶೇಷವಾಗಿದೆ.