ಮಂಡ್ಯ (ಜು.13): ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿರುವ ಸಂಸದೆ ಸುಮಲತಾ ಅಂಬರೀಷ್ ಬುಧವಾರ ಕೆಆರ್‌ಎಸ್ ಅಣೆಕಟ್ಟೆಪಾಲಿಗೆ ಅಪಾಯದ ಕೇಂದ್ರಬಿಂದುವಾಗಿರುವ ಪಾಂಡವಪುರ ತಾಲೂಕಿನ ಬೇಬಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಕೆಆರ್‌ಎಸ್ ಅಣೆಕಟ್ಟೆಗೂ ಅವರು ಭೇಟಿ ನೀಡುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಒಂದು ವಾರ ಕಾಲ ಅಕ್ರಮ ಗಣಿಗಾರಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ದಳಪತಿಗಳ ನಡುವೆ ವಾಕ್ಸಮರ ನಡೆಸಿರುವ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿಷಯವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಅದರ ವಿರುದ್ಧ ದೊಡ್ಡ ಹೋರಾಟಕ್ಕೆ ಟೊಂಕಕಟ್ಟಿನಿಂತಿದ್ದಾರೆ.
undefined
ನನ್ನ ಹೋರಾಟಕ್ಕೆ ಯಾರೆಲ್ಲಾ ಸೇರ್ತಾರೆ ಕಾದು ನೋಡಿ: ಸುಮಲತಾ!
ಜು.3ರಂದು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಶ್ರೀರಂಗಪಟ್ಟಣ ತಾಲೂಕಿನ ಚನ್ನನಕೆರೆ, ಹಂಗರಹಳ್ಳಿ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಲು ಸಂಸದೆ ಸುಮಲತಾ ಮುಂದಾಗಿದ್ದರು. ಹಂಗರಹಳ್ಳಿಯ ಅಕ್ರಮ ಗಣಿ ಸ್ಥಳಗಳಿಗೆ ಭೇಟಿ ನೀಡಿದ್ದ ವೇಳೆ ಕೆಲವರು ಅಡ್ಡಿಪಡಿಸಿದ್ದರಿಂದ ಬೇಬಿಬೆಟ್ಟಭೇಟಿ ಕಾರ್ಯಕ್ರಮವನ್ನು ಅನಿವಾರ್ಯವಾಗಿ ರದ್ದುಗೊಳಿಸಲಾಗಿತ್ತು.
ಇದೀಗ ಬುಧವಾರ ಮಧ್ಯಾಹ್ನ 12.30ಕ್ಕೆ ಸುಮಲತಾ ಕೆಆರ್‌ಎಸ್ ಅಣೆಕಟ್ಟೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಣೆಕಟ್ಟೆಸುರಕ್ಷತೆ ಕುರಿತು ಸಭೆ ನಡೆಸುವರು. ಮಧ್ಯಾಹ್ನ 2.30ಕ್ಕೆ ಪಾಂಡವಪುರ ತಾಲೂಕಿನ ಬೇಬಿಬೆಟ್ಟಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವರು.