ಮಹಾರಾಜರ ಆಸ್ತಿ ಮೇಲೆ ಗಣಿಧಣಿಗಳ ಕಣ್ಣು!

By Kannadaprabha News  |  First Published Jul 13, 2021, 9:20 AM IST
  • ಮಂಡ್ಯ ಜಿಲ್ಲೆಯಲ್ಲಿ ಹೇರಳವಾಗಿರುವ ಗ್ರಾನೈಟಿಕ್‌ ಶಿಲಾ ನಿಕ್ಷೇಪ  
  • ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರಳಿ ಹಾಗೂ ಸುತ್ತಲಿನ ಪ್ರದೇಶ ಗ್ರಾನೈಟಿಕ್‌ ಶಿಲಾ ನಿಕ್ಷೇಪ
  • ಕಲ್ಲು ಗಣಿ ಧಣಿಗಳಿಂದ ಇಡೀ ಪ್ರದೇಶದ ಮೇಲೆ ಬಲವಾದ ಹಿಡಿತ 

ವರದಿ : ಮಂಡ್ಯ ಮಂಜುನಾಥ

 ಮಂಡ್ಯ (ಜು.13):  ಜಿಲ್ಲೆಯಲ್ಲಿ ಗ್ರಾನೈಟಿಕ್‌ ಶಿಲಾ ನಿಕ್ಷೇಪ ಹೇರಳವಾಗಿದೆ. ಅದರಲ್ಲೂ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರಳಿ ಹಾಗೂ ಸುತ್ತಲಿನ ಪ್ರದೇಶ ಗ್ರಾನೈಟಿಕ್‌ ಶಿಲಾ ನಿಕ್ಷೇಪದ ಗಣಿಯಾಗಿದೆ. ಆದ್ದರಿಂದ ಕಲ್ಲು ಗಣಿ ಧಣಿಗಳು ಇಡೀ ಪ್ರದೇಶದ ಮೇಲೆ ಬಲವಾದ ಹಿಡಿತ ಸಾಧಿಸಿಕೊಂಡು ಹತ್ತಾರು ವರ್ಷಗಳಿಂದ ನಿರಂತರ ಗಣಿಗಾರಿಕೆ ನಡೆಸುತ್ತಿದ್ದಾರೆ.

Tap to resize

Latest Videos

ಬೇಬಿ ಬೆಟ್ಟದ ಕಾವಲು ಪ್ರದೇಶ ಕಂದಾಯ ಇಲಾಖೆ ದಾಖಲೆಗಳಲ್ಲಿ 1968-69ರಿಂದ 1999-2000ರವರೆಗೆ ಮೈಸೂರು ಮಹಾಸಂಸ್ಥಾನದ ಶ್ರೀ ಮಹಾರಾಜರ ಅಮೃತ ಮಹಲ್‌ ಕಾವಲು ಜಮೀನು ಎಂದು ದಾಖಲಾಗಿದೆ. ಮಹಾರಾಜರು ತಾವು ಹೊಂದಿದ್ದ ಅಮೃತ್‌ ಮಹಲ್‌ ತಳಿ ರಾಸುಗಳ ಸಾಕಾಣಿಕೆಗೆ ಈ ಪ್ರದೇಶವನ್ನು ಹೊಂದಿದ್ದರು ಎನ್ನುವುದು ದಾಖಲೆಗಳಿಂದ ಖಚಿತಪಟ್ಟಿದೆ.

'ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತ, ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಕ್ರಮ'

ಗ್ರಾನೈಟಿಕ್‌ ಶಿಲಾ ನಿಕ್ಷೇಪದಿಂದ ಬರುವ ಆದಾಯದ ಮೇಲೆ ಕಣ್ಣಿಟ್ಟಪ್ರಭಾವಿಗಳು ಆನಂತರದಲ್ಲಿ ದಾಖಲೆಗಳನ್ನು ತಿದ್ದುವ ಜೊತೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇಬಿ ಬೆಟ್ಟದ ಕಾವಲು ಪ್ರದೇಶ ಯಾರಿಗೆ ಸೇರಿದ್ದು ಎಂಬ ವಿಚಾರದಲ್ಲೇ ಗೊಂದಲ ಸೃಷ್ಟಿಸಿದ್ದಾರೆ ಎಂಬ ಬಗ್ಗೆ ಪ್ರಬಲವಾದ ಆರೋಪಗಳಿವೆ. ಮಹಾರಾಜರಿಗೆ ಸೇರಿದ ಆಸ್ತಿಯಲ್ಲಿ ಗಣಿ ಧಣಿಗಳು ದರ್ಬಾರ್‌ ನಡೆಸುತ್ತಾ ಪ್ರಾಕೃತಿಕ ಸಂಪತ್ತಿನ ಲೂಟಿಯಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಜನಮಾನಸದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಶಿಲಾ ಪ್ರದೇಶ ಹೇಗಿದೆ?: ಮಂಡ್ಯ ಜಿಲ್ಲೆಯ ಬಹುಭಾಗ ನೈಸ್‌ ಶಿಲಾ ಪ್ರದೇಶವಾಗಿದೆ ಎನ್ನುವುದು ಭೌಗೋಳಿಕ ಲಕ್ಷಣದಿಂದ ತಿಳಿದುಬಂದಿರುವ ಅಂಶವಾಗಿದೆ. ಜಿಲ್ಲೆಯ ಶಿಲಾ ರಚನೆಯನ್ನು ಧಾರವಾಡ ರೆಸ್ಟ್‌ ಹಾಗೂ ಪೆವಿನ್ಸುಲಾರ್‌ ಗೀಸಸ್‌ ಮತ್ತು ಗ್ರಾನೈಟ್ಸ್‌ ಎಂದು ಎರಡು ವಿಧಗಳಾಗಿ ವಿಂಗಡಿಸಿದೆ. ನೈಸ್‌ ಶಿಲಾ ಪ್ರದೇಶವು ಬೂದು ಬಣ್ಣದಿಂದ ಕೂಡಿದ್ದು, ಪದರಯುತವಾಗಿದೆ. ಇದನ್ನು ಪಾಂಡವಪುರ ತಾಲೂಕಿನ ಚಿನಕುರಳಿ ಹಾಗೂ ಬೇಬಿ ಬೆಟ್ಟವ್ಯಾಪ್ತಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಬಹುದು.

ಧಾರವಾಡ ಶಿಲಾ ವರ್ಗದ ರೆಸ್ಟ್‌ ಕಲ್ಲುಗಳು ಹೆಚ್ಚು ಅಗಲವಿಲ್ಲದ ಪಟ್ಟೆಗಳು ಉದ್ದುದ್ದವಾಗಿ ಜಿಲ್ಲೆಯ ಹಲವೆಡೆ ಸಾಗಿಹೋಗಿದ್ದು, ಪಟ್ಟೆಗಳು ಬೇಬಿಬೆಟ್ಟ, ಚಿನಕುರಳಿ ಮಧ್ಯದಲ್ಲೂ ಹಾದುಹೋಗಿವೆ.

10 ಕಿಮೀ ಸುತ್ತ ಗಣಿ ಮುಚ್ಚದಿದ್ದರೆ ಕೆಆರ್‌ಎಸ್‌ ಡ್ಯಾಂಗೆ ಅಪಾಯ..!

ಅಗ್ನಿಶಿಲೆಯಿಂದ ಆವೃತವಾಗಿ ನುಣುಪಾಗಿರುವ ಶಿಲಾ ಭಂಡಾರವನ್ನು ಹೊಂದಿರುವ ಕಾರಣದಿಂದಲೇ ಗಣಿಗಾರಿಕೆ ಇಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ಬೆಲೆಬಾಳುವ ಕಲ್ಲು ಗಣಿ ಸಂಪತ್ತನ್ನು ಒಳಗೊಂಡಿರುವ ಬೇಬಿ ಬೆಟ್ಟದ ಕಾವಲು ಪ್ರದೇಶದಲ್ಲಿ 2000 ಇಸವಿಯ ನಂತರ ಗಣಿಗಾರಿಕೆ ಇನ್ನಷ್ಟುಪ್ರಬಲವಾಗಿ ವಿಸ್ತಾರಗೊಂಡಿತು. ಸಣ್ಣ ಪ್ರಮಾಣದಲ್ಲಿ ಕಲ್ಲು ಒಡೆಯುತ್ತಾ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ಪ್ರಭಾವಿಗಳು, ರಾಜಕಾರಣಿಗಳು ಗಣಿ ಗುತ್ತಿಗೆ ಪಡೆದುಕೊಂಡು ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ದೊಡ್ಡ ಪ್ರಮಾಣದ ಕಲ್ಲು ಗಣಿಗಾರಿಕೆ ನಡೆಸುತ್ತಾ ಬಂಡೆಗಳನ್ನು ಸಿಡಿಸಲು ಸ್ಫೋಟಕಗಳನ್ನು ಬಳಸಲು ಆರಂಭಿಸಿದರು.

ಮಹಾರಾಜರ ಹಿಡಿತ ತಪ್ಪಲು ಆರಂಭ

ಬೇಬಿ ಬೆಟ್ಟದ ಕಾವಲು ಪ್ರದೇಶ ಹುಲ್ಲುಗಾವಲು ಪ್ರದೇಶವಾಗಿರುವುದು ದಾಖಲೆಗಳಿಂದ ಖಚಿತಪಟ್ಟಿರುವ ಅಂಶ. ಆಸ್ತಿ ರಕ್ಷಣೆ ಮಾಡಿಕೊಳ್ಳುವಲ್ಲಿ ಮಹಾಸಂಸ್ಥಾನದವರು ಮೈಮರೆತಿದ್ದು, ಪ್ರಭಾವಿಗಳು ಅಲ್ಲಿ ನೆಲೆಯೂರುವುದಕ್ಕೆ ಪ್ರಮುಖ ಕಾರಣವಾಯಿತು. ಕಂದಾಯ ಇಲಾಖೆಯ ದಾಖಲೆಗಳಲ್ಲಿ ಇ ಎನ್ನುವುದು ಹುಲ್ಲುಗಾವಲು ಪ್ರದೇಶ. ಆರ್‌ಟಿಸಿ ಬರವಣಿಗೆ ರೂಪದಲ್ಲಿದ್ದ ಕಾಲದಲ್ಲೇ ಇ ಎಂಬ ಬರಹವನ್ನು ಬಿ ಎಂದು ತಿದ್ದಲಾಗಿದೆ ಎಂಬ ಆರೋಪಗಳೂ ಇವೆ. ಅದು ಗಣಕೀಕೃತ ವ್ಯವಸ್ಥೆಯಾದ ನಂತರವೂ ಮುಂದುವರೆದುಕೊಂಡು ಬಂದಿದೆ. ಬೇಬಿಬೆಟ್ಟದ ಕಾವಲು ಪ್ರದೇಶ ಬಿ ಗುಂಪಿನ ಖರಾಬು ಜಮೀನಿಗೆ ಸೇರಿರುವುದರಿಂದ ಅದು ಸರ್ಕಾರಿ ಜಮೀನಾಗಿದ್ದು ಮಹಾರಾಜರಿಗೆ ಸೇರುವುದಿಲ್ಲ ಎನ್ನುವುದು ಅಧಿಕಾರಿ ವಲಯದಿಂದ ಕೇಳಿಬರುತ್ತಿರುವ ಮಾತು.

ರಾಜಮಾತೆ ಮನವಿ ತಿರಸ್ಕಾರ

ಬೇಬಿಬೆಟ್ಟದ ಕಾವಲು ಪ್ರದೇಶದಲ್ಲಿ ವ್ಯಾಪಕವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದನ್ನು ಕಂಡು ಎಚ್ಚೆತ್ತ ಮೈಸೂರು ಅರಮನೆ ರಾಜಮಾತೆ ಪ್ರಮೋದಾದೇವಿ ಅವರು ಬೇಬಿ ಬೆಟ್ಟದ ಕಾವಲು ಪ್ರದೇಶ ಮಹಾರಾಜರಿಗೆ ಸೇರಿದ ಆಸ್ತಿಯಾಗಿದ್ದು, ಅದನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಪಾಂಡವಪುರ ತಹಸೀಲ್ದಾರ್‌, ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ದಾಖಲೆಗಳ ಸಹಿತ ಮನವಿ ಸಲ್ಲಿಸಿದ್ದರು.

ಇದಕ್ಕೆ ಪಾಂಡವಪುರ ತಹಸೀಲ್ದಾರ್‌ ಅವರು ಬೇಬಿಬೆಟ್ಟಕಾವಲು ಪ್ರದೇಶದ 1487.27 ಎಕರೆ ಜಮೀನು ಬಿ ಖರಾಬು ಎಂದು ಆಕಾರ್‌ ಬಂದ್‌ನಲ್ಲಿ ದಾಖಲಾಗಿದೆ. ಆ ಹಿನ್ನೆಲೆಯಲ್ಲಿ ಬಿ-ಖರಾಬು ಜಮೀನನ್ನು ಖಾತೆ ಬದಲಾವಣೆ ಮಾಡುವ ಅಧಿಕಾರ ನಮಗಿಲ್ಲವೆಂದು ಹಿಂಬರಹ ನೀಡಿದ್ದಾರೆ.

ಗಣಿಗಾರಿಕೆಗೆ ಅವಕಾಶ ನೀಡಬಹುದೇ?

ಪಾಂಡವಪುರ ತಹಸೀಲ್ದಾರ್‌ ನೀಡಿರುವ ಮಾಹಿತಿಯಂತೆ ಬೇಬಿ ಬೆಟ್ಟದ ಕಾವಲು ಪ್ರದೇಶ ಬಿ-ಖರಾಬು ಜಮೀನು. ಅಂದರೆ ಸರ್ಕಾರಿ ಜಮೀನು. ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲು ಅಧಿಕಾರಿ ವರ್ಗ ಹೇಗೆ ಅವಕಾಶ ಮಾಡಿಕೊಟ್ಟಿದೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಗಣಿ ಗುತ್ತಿಗೆಯನ್ನು ಕನಿಷ್ಠ 10ರಿಂದ 20 ವರ್ಷಗಳವರೆಗೆ ನೀಡಲಾಗಿದೆ. ಆದರೆ, ಗಣಿಗಾರಿಕೆಯಿಂದ ಸರ್ಕಾರಕ್ಕೆ ರಾಜಧನ ರೂಪದಲ್ಲಿ ಯಾವುದೇ ತೆರಿಗೆಯೂ ಸಂಗ್ರಹವಾಗುತ್ತಿಲ್ಲ.

ಪ್ರಸ್ತುತ ಬೇಬಿ ಬೆಟ್ಟದಲ್ಲಿ 1999ರಿಂದ ಇಲ್ಲಿಯವರೆಗೆ 115 ಮಂದಿಗೆ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇವರೆಲ್ಲರ ಗಣಿ ಗುತ್ತಿಗೆ ಅವಧಿ ಮುಗಿದಿದ್ದರೂ ನಿಯಮಬಾಹಿರವಾಗಿ ಈಗಲೂ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಗುತ್ತಿಗೆ ಪಡೆದಿರುವವರಲ್ಲಿ ಇಬ್ಬರಿಗೆ ಮಾತ್ರ ಅಧಿಕೃತ ಗಣಿಗಾರಿಕೆ ನಡೆಸಲು ಅವಕಾಶವಿದೆ. ನಿಯಮಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಗಟ್ಟಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ

click me!