
ಮೈಸೂರು (ಆ.5): ತನ್ನೊಂದಿಗೆ ವಾಸವಿದ್ದ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯು 20 ದಿನಗಳ ಬಳಿಕ ಖುದ್ದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಆರೋಪಿ ಶರಣಾದ ಬಳಿಕವೇ ಮಹಿಳೆ ಕೊಲೆಯಾದ ವಿಚಾರ ಪೊಲೀಸರಿಗೆ ಗೊತ್ತಾಗಿದ್ದು, ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಜ್ಯೋತಿ (40) ಕೊಲೆಯಾದವರು. ಕನಕಪುರ ಮೂಲದ ಆಟೋ ಚಾಲಕ ಸಿದ್ದರಾಜು (64) ಪೊಲೀಸರಿಗೆ ಶರಣಾದ ಆರೋಪಿ.
ಜ್ಯೋತಿ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ಸಂಬಂಧಿಕರಾದ ಸಿದ್ದರಾಜು ಜೊತೆಗೆ ಮೈಸೂರಿನ ಬನ್ನೂರು ರಸ್ತೆಯ ಭುಗತಹಳ್ಳಿಯ ಆಶ್ರಯ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಸಿದ್ದರಾಜುನನ್ನು ಜ್ಯೋತಿ ನಿರ್ಲಕ್ಷಿಸುತ್ತಿದ್ದರು. ಆಗಾಗ ಪೋಷಕರ ಮನೆಗೆ ಜ್ಯೋತಿ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಹೀಗಿರುವಾಗ ಜು.13 ರಂದು ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಜ್ಯೋತಿ ಮಲಗಿದ್ದಾಗ ಆರೋಪಿ ಸಿದ್ದರಾಜು, ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಮನೆಯಿಂದ ಪರಾರಿಯಾಗಿದ್ದ. 3 ವಾರಗಳ ಬಳಿಕ ಆಲನಹಳ್ಳಿ ಠಾಣೆಗೆ ತೆರಳಿ ಆರೋಪಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಕೃತ್ಯವು ಮೈಸೂರು ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಆರೋಪಿಯನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಆರೋಪಿ ಸಿದ್ದರಾಜು ನೀಡಿದ ಮಾಹಿತಿ ಮೇರೆಗೆ ಮೈಸೂರು ದಕ್ಷಿಣ ಠಾಣೆ ಪೊಲೀಸರು ಭುಗತಹಳ್ಳಿಯ ಆಶ್ರಯ ಲೇಔಟ್ ನ ಬಾಡಿಗೆ ಮನೆಗೆ ತೆರಳಿ, ಮನೆ ಮಾಲೀಕ ಡಿ.ಕೃಷ್ಣ ಅವರ ಸಮ್ಮುಖದಲ್ಲಿ ಬಾಗಿಲು ತೆಗೆದಾಗ ಮನೆಯಲ್ಲಿ ದುರ್ವಾಸನೆ ಹರಡಿತ್ತು. ಹಾಸಿಗೆ ಕೆಳಗೆ ಅಡಗಿಸಿದ್ದ ಜ್ಯೋತಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.