
ಬೆಂಗಳೂರು (ಆ.04): ಬೆಂಗಳೂರಿನಲ್ಲಿ ಎಲ್ಇಡಿ (LED) ಬೀದಿ ದೀಪಗಳನ್ನು ಅಳವಡಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಶೇಕಡಾ 61.01% ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಆದರೆ ಈ ಯೋಜನೆ ಕುಂಟುತ್ತಾ ಸಾಗಲು ಕಾರಣವೇನು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ತೀವ್ರವಾಗಿ ಪ್ರಶ್ನಿಸಿದ್ದಾರೆ.
ಮಂಗಳವಾರ ನಗರದಲ್ಲಿ ನಡೆದ ಜಿಬಿಎ (GBA) ಎಲೆಕ್ಟ್ರಿಕ್ ಎಂಜಿನಿಯರ್‌ಗಳ ಸಭೆಯಲ್ಲಿ ಸಚಿವರು, ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು.
ಸಭೆಯಲ್ಲಿ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು, “ಮೇ 2025 ರಲ್ಲೇ ಕಾರ್ಯಾದೇಶ (Work Order) ನೀಡಲಾಗಿದ್ದರೂ ನಿಗದಿತ ಗುರಿ ತಲುಪಿಲ್ಲ. ನಗರದಾದ್ಯಂತ ಒಟ್ಟು 3,02,919 ಎಲ್ಇಡಿ ದೀಪಗಳನ್ನು ಅಳವಡಿಸಬೇಕಿದ್ದ ಜಾಗದಲ್ಲಿ ಪ್ರಸ್ತುತ 2,67,270 ದೀಪಗಳನ್ನು ಮಾತ್ರ ಹಾಕಲಾಗಿದೆ. ಅಲ್ಲದೆ, 24,677 ಸಿಸಿಎಂಎಸ್ (CCMS) ಪ್ಯಾನಲ್‌ಗಳಲ್ಲಿ ಕೇವಲ 7,567 ಪ್ಯಾನಲ್‌ಗಳನ್ನು ಮಾತ್ರ ಅಳವಡಿಸಲಾಗಿದೆ. ಅಧಿಕಾರಿಗಳು ಬೋಗಸ್ ಅಂಕಿಅಂಶ ನೀಡುತ್ತಿರುವುದು ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದರು. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಆಗಸ್ಟ್ 3, 2026 ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 2 ತಿಂಗಳ ಕಾಲಾವಕಾಶ ನೀಡಲಾಗಿದೆ.
ನಗರದ 'ಸಹಾಯ' (Sahaya Portal) ಆ್ಯಪ್‌ನಲ್ಲಿ ಬರುವ ದೂರುಗಳ ಪೈಕಿ ಶೇ. 34 ರಷ್ಟು ದೂರುಗಳು ಬೀದಿ ದೀಪಗಳು ಉರಿಯದಿರುವ ಬಗ್ಗೆಯೇ ಇವೆ. ಈ ಸಮಸ್ಯೆ ಪರಿಹಾರಕ್ಕೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ:
ಸಭೆಗೆ ಬರುವ ಮುನ್ನ ಕನಿಷ್ಠ ಸಿದ್ಧತೆಯನ್ನೂ ಮಾಡಿಕೊಳ್ಳದ ಅಧಿಕಾರಿಗಳ ವಿರುದ್ಧ ಕೃಷ್ಣ ಬೈರೇಗೌಡ ಅವರು ಮಾತಿನ ಚಾಟಿ ಬೀಸಿದರು. ಪ್ರಸ್ತುತ ನಗರದ ಐದೂ ಪಾಲಿಕೆಗಳಲ್ಲಿ ಬೀದಿ ದೀಪಗಳಿಗೆ ಪಾವತಿಸುತ್ತಿರುವ ವಿದ್ಯುತ್ ಬಿಲ್ ಎಷ್ಟು ಮತ್ತು ಎಲ್ಇಡಿ ದೀಪ ಹಾಕಿದ ನಂತರ ಆಗುವ ವ್ಯತ್ಯಾಸದ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳ ಬಳಿ ಯಾವುದೇ ಅಧಿಕೃತ ಅಂಕಿಅಂಶಗಳಿರಲಿಲ್ಲ (Basic Data).
ಇದರಿಂದ ಆಕ್ರೋಶಗೊಂಡ ಸಚಿವರು, ‘ಬೇಸಿಕ್ ಡೇಟಾ ಇಲ್ಲ, ಪ್ರಶ್ನೆಗೆ ಉತ್ತರ ಇಲ್ಲ. ಸಭೆ ಕರೆದರೆ ಕನಿಷ್ಠ ಸಿದ್ಧತೆಯೂ ಇಲ್ಲದೆ ಮತ್ತೆ ಏಕೆ ನನ್ನ ಮುಖ ನೋಡಿಕೊಂಡು ಹೋಗಲು ಬಂದಿದ್ದೀರಿ? ಸರ್ಕಾರಿ ನೌಕರಿ ಎಂದರೆ ಕೈಬೀಸಿಕೊಂಡು ಬರಬಹುದು ಹೋಗಬಹುದು ಎಂಬ ಧೋರಣೆ ಬೆಳೆದಿದೆ. ಅಧಿಕಾರಿಗಳ ಇಂತಹ ವರ್ತನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಸಭೆಯಲ್ಲೇ ಕ್ಲಾಸ್ ತೆಗೆದುಕೊಂಡರು.
ನಗರದಲ್ಲಿರುವ ಸಾಂಪ್ರದಾಯಿಕ ದೀಪಗಳನ್ನು ತಕ್ಷಣ ತೆರವುಗೊಳಿಸಿ, ಆಟೋಮೇಷನ್ ವ್ಯವಸ್ಥೆಯಾದ ಸಿಸಿಎಂಎಸ್ (CCMS) ಪ್ಯಾನಲ್ ಹಾಗೂ ಎಲ್ಇಡಿ ದೀಪಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಅಧಿಕಾರಿಗಳಿಗೆ ಆಜ್ಞಾಪಿಸಲಾಗಿದೆ.