ಪ್ರಧಾನಿ ಮೋದಿ ಭೇಟಿ: ಸಕ್ಕರೆ ನಾಡು ಮಂಡ್ಯ ಕೇಸರಿಮಯ..!

By Kannadaprabha NewsFirst Published Mar 12, 2023, 3:30 AM IST
Highlights

ಮಂಡ್ಯ ನಗರದ ಪ್ರವಾಸಿ ಮಂದಿರದ ಮುಂಭಾಗದಿಂದ ನಂದಾ ಚಿತ್ರಮಂದಿರದವರೆಗೆ ರೋಡ್‌ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ದರ್ಶನ ನೀಡಲಿದ್ದಾರೆ. ತರುವಾಯ ಹೆದ್ದಾರಿ ಮೂಲಕ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆ, ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಮಂಡ್ಯ(ಮಾ.12):  ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಸಕ್ಕರೆ ಜಿಲ್ಲೆ ಮಂಡ್ಯ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಹೃದಯ ಭಾಗದಲ್ಲಿ ಹಾದುಹೋಗಿರುವ ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಕೇಸರೀಮಯವಾಗಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಕಾರ‍್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಕಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ. ದೆಹಲಿಯಿಂದ ವಿಮಾನದಲ್ಲಿ ತೆರಳುವ ಪ್ರಧಾನಿಗಳು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಹೆಲಿಕ್ಯಾಪ್ಟರ್‌ ಮೂಲಕ ಮಂಡ್ಯ ನಗರದ ಪ್ರತಿಷ್ಠಿತ ಪಿಇಎಸ್‌ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಬೆಳಗ್ಗೆ 11.30 ಗಂಟೆಗೆ ಬಂದಿಳಿಯಲಿದ್ದಾರೆ.

ನಂತರ ನಗರದ ಪ್ರವಾಸಿ ಮಂದಿರದ ಮುಂಭಾಗದಿಂದ ನಂದಾ ಚಿತ್ರಮಂದಿರದವರೆಗೆ ರೋಡ್‌ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ದರ್ಶನ ನೀಡಲಿದ್ದಾರೆ. ತರುವಾಯ ಹೆದ್ದಾರಿ ಮೂಲಕ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಲೋಕಾರ್ಪಣೆ, ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಎಸ್‌ಪಿಜಿ ಮತ್ತು ರಾಜ್ಯ ಪೊಲೀಸ್‌ ಇಲಾಖೆಯಿಂದ ಅಗತ್ಯ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

Latest Videos

ಮಂಡ್ಯದಲ್ಲಿ ಹಿಂದುತ್ವ ಅಜೆಂಡಾ; ಮೋದಿ ಸ್ವಾಗತಕ್ಕೆ ಟಿಪ್ಪು ವಿರೋಧಿ ಅಸ್ತ್ರ!

1.8 ಕಿ.ಮೀ ರೋಡ್‌ ಶೋ:

ಸುಮಾರು 1.8 ಕಿ.ಮೀ. ವ್ಯಾಪ್ತಿಯಲ್ಲಿ (ಪ್ರವಾಸಿ ಮಂದಿರದಿಂದ ನಂದಾ ಚಿತ್ರಮಂದಿರದವರೆಗೆ) ನಡೆಯುವ ರೋಡ್‌ ಶೋ ನಡೆಸುವ ಪ್ರಧಾನಿಗಳಿಗೆ ವಿಶೇಷ ಭದ್ರತೆ ಒದಗಿಸಲು ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ ವ್ಯವಸ್ಥೆ ಹಾಗೂ ಸಾವಿರಾರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ರೋಡ್‌ ಶೋ ವೇಳೆ ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನತೆ ಭಾಗಿಯಾಗುವ ನಿರೀಕ್ಷೆ ಇದ್ದು, ಇವರೆಲ್ಲರಿಗೂ ಬಿಸಿಲ ಬೇಗೆ ತಣಿಸಲು ಕುಡಿಯುವ ನೀರು ಮತ್ತು ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರತ್ಯೇಕ ವ್ಯವಸ್ಥೆ:

ಇಷ್ಟೇ ಅಲ್ಲದೆ, ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಕೂರಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಾರ್ವಜನಿಕರಿಗೆ ಬೇಸರವಾಗದಂತೆ ಪ್ರತಿ ನೂರು ಮೀ.ಗೆ ಜನಪದ ಕಲಾತಂಡಗಳ ಪ್ರದರ್ಶನ ಆಯೋಜಿಸಲಾಗಿದೆ. ರಸ್ತೆಯುದ್ದಕ್ಕೂ ಮೋದಿ ಸ್ವಾಗತಕೋರುವ ಎತ್ತರದ ಫ್ಲೆಕ್ಸ್‌ಗಳು, ಬಂಟಿಂಗ್‌, ಬ್ಯಾನರ್‌, ಬಿಜೆಪಿ ಬಾವುಟ ಹಾಗೂ ಬೃಹತ್‌ ಉದ್ದದ ಕೇಸರಿ ಬಟ್ಟೆಗಳನ್ನು ಹಾಕಲಾಗಿದ್ದು, ರಸ್ತೆಯುದ್ದಕ್ಕೂ ಕೇಸರಿಮಯವಾಗಿದೆ.

ಮಹಾದ್ವಾರಗಳ ನಿರ್ಮಾಣ:

ಮೋದಿ ರೋಡ್‌ ಶೋ ನಡೆಸುವ ಮಾರ್ಗದ ಪ್ರವಾಸಿ ಮಂದಿರದ ಬಳಿ ಸರ್‌ ಎಂ. ವಿಶ್ವೇಶ್ವರಯ್ಯ ಮಹಾದ್ವಾರ, ಮಹಾವೀರ ವೃತ್ತದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮಹಾದ್ವಾರ ಹಾಗೂ ಮೈಷುಗರ್‌ ವೃತ್ತದಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡರ ಮಹಾದ್ವಾರವನ್ನು ನಿರ್ಮಾಣ ಮಾಡಲಾಗಿದೆ.

ಅದ್ಧೂರಿ ವೇದಿಕೆ :

ಫಲಾನುಭವಿಗಳ ಸಮಾವೇಶಕ್ಕಾಗಿ ಅದ್ದೂರಿ ವೇದಿಕೆಯನ್ನು ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರಮೋದಿಯವರು ವೇದಿಕೆಯ ಹಿಂಬದಿಗೆ ಕಾರಿನಲ್ಲಿ ಆಗಮಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಹಿಂಭಾಗದಲ್ಲೇ ಹೆದ್ದಾರಿ ಪ್ರಾಧಿಕಾರದವರು ವಿನೂತನವಾಗಿ ನಿರ್ಮಿಸಿರುವ ಹೆದ್ದಾರಿಯ ಚಿತ್ರಪಟಗಳನ್ನೊಳಗೊಂಡ ವಿಶೇಷ ಮ್ಯೂಸಿಯಂನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ನ ದೃಶ್ಯಗಳನ್ನು ವೀಕ್ಷಿಸಲಿದ್ದಾರೆ. ಬಳಿಕ ವೇದಿಕೆ ಕಾರ‍್ಯಕ್ರಮದಲ್ಲಿ ಭಾಗವಹಿಸುವರು.

ಎಸ್‌ಪಿಜಿ ತಾಲೀಮು:

ನರೇಂದ್ರ ಮೋದಿ ಅವರು ಭಾನುವಾರ ನಗರದಲ್ಲಿ ರೋಡ್‌ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಮುನ್ನಾ ದಿನವಾದ ಶನಿವಾರ ಎಸ್‌ಪಿಜಿ ತಂಡ ತಾಲೀಮು ನಡೆಸಿತು. ನಗರದ ಪ್ರವಾಸಿಮಂದಿರದಿಂದ ನಂದಾ ಚಿತ್ರಮಂದಿರದವರೆಗೆ ತಾಲೀಮು ನಡೆಸಿದ ಎಸ್‌ಪಿಜಿ ತಂಡದ ಅ​ಕಾರಿಗಳ ಜತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಹಾಗೂ ಹಿರಿಯ ಪೊಲೀಸ್‌ ಅ​ಕಾರಿಗಳಿದ್ದರು.

1 ಲಕ್ಷ ಜನರಿಗೆ ಆಸನ ವ್ಯವಸ್ಥೆ:

ದಶಪಥ ಹೆದ್ದಾರಿ ಕಾರ್ಯಕ್ರಮ ಉದ್ಘಾಟನೆಗೊಳ್ಳುವ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿ ಬಳಿ 1 ಲಕ್ಷ ಜನರು ಕುಳಿತುಕೊಳ್ಳುವುದಕ್ಕೆ ಆಸನ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ ಕಾಂಗ್ರೆಸ್‌-ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯೊಳಗೆ 2019ರ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಹೊಸ ಅಲೆಯನ್ನು ಎಬ್ಬಿಸುತ್ತಿದೆ. ಜೆಡಿಎಸ್‌, ಕಾಂಗ್ರೆಸ್‌ನ ಕೆಲವರನ್ನು ಪಕ್ಷಕ್ಕೆ ಸೆಳೆದುಕೊಂಡು 2023ರ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ.

4 ಸಾವಿರ ಬಸ್‌ಗಳ ನಿಯೋಜನೆ

ಮಂಡ್ಯ: ಮೋದಿ ಕಾರ್ಯಕ್ರಮಕ್ಕೆ ಜನರನ್ನು ಕರೆತರುವುದಕ್ಕೆ 4000 ಬಸ್‌ಗಳನ್ನು ಬಿಜೆಪಿಯವರು ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯಿಂದ 2100 ಸಾರಿಗೆ ಬಸ್‌ಗಳು ದೊರೆಯಲಿದ್ದು, ಇನ್ನುಳಿದಂತೆ ರಾಮನಗರ, ಬೆಂಗಳೂರು ಬಿಎಂಟಿಸಿ ಬಸ್‌ಗಳು, ಖಾಸಗಿ ಬಸ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಸಮಾರಂಭ ನಡೆಯುವ ಜಾಗದಲ್ಲೇ ಸುಮಾರು 2000 ಬಸ್‌ಗಳು ನಿಲ್ಲುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತಲ ಗ್ರಾಮಗಳಿಂದ ಸುಗಮವಾಗಿ ಸ್ಥಳ ತಲುಪಲು ಎರಡು ಕಡೆ ಹೊಸದಾಗಿ ರಸ್ತೆಯನ್ನೇ ನಿರ್ಮಿಸಲಾಗಿದೆ.

ಜನರಿಗೆ ಊಟದ ವ್ಯವಸ್ಥೆ

ಮಂಡ್ಯ: ಮೋದಿ ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 1 ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬಾತ್‌, ಮೊಸರನ್ನ, ಗೋಧಿ ಹುಗ್ಗಿ ತಯಾರು ಮಾಡಲಾಗುತ್ತಿದೆ. ಸಮಾರಂಭ ನಡೆಯುವ ವೇದಿಕೆ ಪಕ್ಕದಲ್ಲೇ ಜನರಿಗೆ ಊಟದ ವ್ಯವಸ್ಥೆ ಏರ್ಪಾಡು ಮಾಡಲಾಗಿದೆ. ಮೋದಿ ಕಾರ್ಯಕ್ರಮ ಮುಗಿಸಿ ತೆರಳಿದ ನಂತರ ಜನರಿಗೆ ಊಟ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಬಿಜೆಪಿ ಸೇರಿಲ್ಲ.. ಬಿಜೆಪಿಗೆ ಬೆಂಬಲ.. ಏನಿದರ ಗುಟ್ಟು..? ಪಗಡೆಯಾಟಕ್ಕೆ ಲೇಡಿ ರೆಬೆಲ್ ಸ್ಟಾರ್ ರೆಡಿ.. ಆಟ ಶುರು..!

2300 ಪೊಲೀಸರ ನಿಯೋಜನೆ: ಎಸ್‌ಪಿ

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಭದ್ರತೆ ದೃಷ್ಟಿಯಿಂದ 2200 ರಿಂದ 2300 ಪೊಲೀಸರನ್ನು ನಿಯೋಜಿಸಲಾಗಿದೆ. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಿಕೊಳ್ಳಲಾಗುತ್ತಿದೆ. 5 ಮಂದಿ ಎಸ್‌ಪಿ, 20 ಡಿವೈಎಸ್ಪಿ, 67 ಸಬ್‌ಇನ್ಸ್‌ಪೆಕ್ಟರ್‌ಗಳನ್ನು ಕರ್ತವ್ಯಕ್ಕೆ ನೇಮಿಸಿದೆ.

9 ಹೆಲಿಪ್ಯಾಡ್‌ ನಿರ್ಮಾಣ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಕೇಂದ್ರ ನಾಯಕರು, ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬರುವುದಕ್ಕೆ ಪೂರಕವಾಗುವಂತೆ 9 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ಹುಲಿಗೆರೆ ಪುರ ಬಳಿ 3, ಕಟ್ಟೇದೊಡ್ಡಿ ಬಳಿ 3 ಹಾಗೂ ಪಿಇಟಿ ಕ್ರೀಡಾಂಗಣದಲ್ಲಿ 3 ಹೆಲಿಪ್ಯಾಡ್‌ಗಳನ್ನು ನಿರ್ಮಿಸಿದೆ. ಕಾರ್ಯಕ್ರಮಕ್ಕೆ ಬರಬೇಕಾದ ನಾಯಕರ ಪ್ರವಾಸ ಇನ್ನೂ ಸ್ಪಷ್ಟವಾಗದಿರುವ ಹಿನ್ನೆಲೆಯಲ್ಲಿ ಯಾವ ಯಾವ ಗಣ್ಯರು ಯಾವ ಮಾರ್ಗದಿಂದ ಬರಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಅದಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಿರುವುದಾಗಿ ಬಿಜೆಪಿಯವರು ತಿಳಿಸಿದ್ದಾರೆ.

click me!