Kodagu: ಮ್ಯಾಂಡೌಸ್ ಪರಿಣಾಮ ಅಕಾಲಿಕ ಮಳೆ: ಅಪಾರ ಬೆಳೆ ನಷ್ಟ

By Govindaraj S  |  First Published Dec 15, 2022, 6:02 AM IST

ಮ್ಯಾಂಡೌಸ್ ಚಂಡಮಾರುತದ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಆಗೊಮ್ಮೆ, ಈಗೊಮ್ಮೆ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ, ಮಂಗಳವಾರ ರಾತ್ರಿ ಧಾರಕಾರವಾಗಿ ಸುರಿದಿದೆ. ಪರಿಣಾಮವಾಗಿ ಜಿಲ್ಲೆಯ ನೂರಾರು ರೈತರ ಸಾವಿರಾರು ಎಕರೆಯಲ್ಲಿದ್ದ ವಿವಿಧ ಬೆಳೆಗಳು ಹಾನಿಯಾಗಿವೆ.


ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.15): ಮ್ಯಾಂಡೌಸ್ ಚಂಡಮಾರುತದ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಆಗೊಮ್ಮೆ, ಈಗೊಮ್ಮೆ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ, ಮಂಗಳವಾರ ರಾತ್ರಿ ಧಾರಕಾರವಾಗಿ ಸುರಿದಿದೆ. ಪರಿಣಾಮವಾಗಿ ಜಿಲ್ಲೆಯ ನೂರಾರು ರೈತರ ಸಾವಿರಾರು ಎಕರೆಯಲ್ಲಿದ್ದ ವಿವಿಧ ಬೆಳೆಗಳು ಹಾನಿಯಾಗಿವೆ. ಕುಶಾಲನಗರ ತಾಲ್ಲೂಕಿನ ಕಣಿವೆ, ತೊರೆನೂರು ಸೇರಿದಂತೆ ವಿವಿಧೆಡೆ ಬೆಳೆಗಳು ಹಾಳಾಗಿವೆ. ಕಣಿವೆ ಗ್ರಾಮದಲ್ಲಿ ಹತ್ತಾರು ರೈತರ ಭತ್ತದ ಬೆಳೆ ಹಾಳಾಗಿದೆ. ಗ್ರಾಮದ ಸುಬ್ರಹ್ಮಣ್ಯ ಎಂಬುವರು ಕೊಯ್ಲು ಮಾಡಿ ಒಣಗಲು ಹಾಕಿದ್ದ ಮೂರು ಎಕರೆಯಷ್ಟು ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ.

Tap to resize

Latest Videos

undefined

ಗದ್ದೆಯಲ್ಲಿ ಅರ್ಧ ಅಡಿಯಷ್ಟು ನೀರು ನಿಂತಿದ್ದು, ಕೊಯ್ಲು ಮಾಡಿ ಹಾಕಿದ್ದ ಭತ್ತ ನೀರಿನಲ್ಲಿ ಮುಳುಗಿದೆ. ಭತ್ತದ ಬೆಳೆ ನೆನೆಯುತ್ತಿದ್ದು ರೈತರಿಗೆ ಸಾವಿರಾರು ರೂಪಾಯಿ ನಷ್ಟವಾಗುವ ಆತಂಕ ಎದುರಾಗಿದೆ. ಭತ್ತವು ನೀರಿನಲ್ಲಿ ನೆನೆಯುತ್ತಿದ್ದು, ಇನ್ನೆರಡು ದಿನಗಳು ಹೀಗೆಯೇ ನೆನೆಯುತ್ತಿದ್ದರೆ, ಭತ್ತವು ಮೊಳಕೆಯೊಡೆದು ಸಸಿ ಬೆಳೆಯಲಾರಂಭಿಸುತ್ತದೆ. ಹೀಗೆ ಆದರಲ್ಲಿ ಕಳೆದ ಐದು ತಿಂಗಳಿಂದ ಕಷ್ಟಪಟ್ಟು ಬೆಳೆದ ಭತ್ತದ ಬೆಳೆ ತಮ್ಮ ಕೈತಪ್ಪಿ ಹೋಗಲಿದೆ. ಒಂದೆಡೆ ಭತ್ತ ಮೊಳಕೆಯೊಡೆದು ಹೋದರೆ, ಭತ್ತದ ಹುಲ್ಲು ಕೂಡ ಕರಗಿ ಹೋಗಲಿದೆ. ಇದರಿಂದ ಸಂಪೂರ್ಣ ನಷ್ಟವಾಗಲಿದೆ ಎಂದು ರೈತರು ಆಂತಕ ವ್ಯಕ್ತಪಡಿಸಿದ್ದಾರೆ. 

Ticket Fight: ಕೊಡಗಿನ ಎರಡು ಕ್ಷೇತ್ರಗಳಿಗೆ ಆಕಾಂಕ್ಷಿಗಳ ದಂಡು

75 ಸಾವಿರ ಖರ್ಚು ಮಾಡಿ ಮೂರು ಎಕರೆಯಲ್ಲಿ ಭತ್ತ ಬೆಳೆದಿದ್ದೆ. ಈಗ ಎಲ್ಲವೂ ಹಾಳಾಗಿದ್ದು, ಭತ್ತ, ಹುಲ್ಲು ಎಲ್ಲವೂ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ಇದೇ ಗ್ರಾಮದ ದರ್ಶನ್ ಎಂಬುವರ ಭತ್ತದ ಬೆಳೆಯು ಮಳೆಯಲ್ಲಿ ನೆನೆದು ಹಾಳಾಗಿದೆ. ಅವರು ಕೂಡ ನಿನ್ನೆಯಷ್ಟೆ ಭತ್ತದ ಬೆಳೆಯನ್ನು ಕೊಯ್ಲು ಮಾಡಿ ಗದ್ದೆಯಲ್ಲಿ ಬಿಟ್ಟಿದ್ದರು. ಇನ್ನು ತೊರೆನೂರಿನಲ್ಲಿ ರೈತ ಪ್ರೇಮಕುಮಾರ್ ಎಂಬುವರು ಬೆಳೆದು ಕಟಾವು ಮಾಡಿದ್ದ ಭತ್ತದ ಬೆಳೆ ಮತ್ತು ರಾಗಿ ಬೆಳೆ ಮಳೆಯಲ್ಲಿ ನೆನೆದು ಹಾಳಾಗಿದೆ. ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಮತ್ತೊಂದೆಡೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದೊಡ್ಡಳ್ಳಿ ಮತ್ತು ಬಾಲಕೆರೆಗಳು ಒಡೆದು ರೈತರ ಹೊಲ ಗದ್ದೆಗಳ ಮೇಲೆ ಭಾರೀ ಪ್ರಮಾಣದ ನೀರು ನುಗ್ಗಿದೆ. 

ಇದರಿಂದ ಬೆಳೆದಿದ್ದ ಭತ್ತದ ಬೆಳೆ ಕೊಚ್ಚಿಹೋಗಿದೆ. ನೀರಿನ ರಭಸಕ್ಕೆ ಭತ್ತದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕೇವಲ ಹುಲ್ಲು ಮಾತ್ರ ನಿಂತಿದೆ. ಎರಡು ಕೆರೆಗಳ ನೀರು ಹೊಲಗದ್ದೆಗಳ ಮೇಲೆ ಹರಿದಿದ್ದು, ಕೆಲವು ಗದ್ದೆಗಳ ಭೂಮಿ ಕೂಡ ಕೊಚ್ಚಿ ಹೋಗಿದೆ. ಇನ್ನು ಸೋಮವಾರಪೇಟೆ ತಾಲ್ಲೂಕಿನ ಹಲವೆಡೆ ಗುಡುಗು, ಮಿಂಚು ಮತ್ತು ಗಾಳಿ ಸಹಿತ ಮಳೆ ಸುರಿದಿದೆ. ಪರಿಣಾಮವಾಗಿ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿವೆ. 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದಿದ್ದು, ಕೆಲವೆಡೆ ಟ್ರಾನ್ಸ್‍ಫಾರ್ಮರ್‍ಗಳೇ ಮುರಿದು ಬಿದ್ದಿವೆ. 

ಕೊಡಗಿನಾದ್ಯಂದ ಹುತ್ತರಿ ಹಬ್ಬ: ಧಾನ್ಯಲಕ್ಷ್ಮಿಯ ಮನೆ ತುಂಬಿಕೊಂಡ ಜನರು

ಇದರಿಂದಾಗಿ ಹೊಸಗುತ್ತಿ, ಹೊಸಳ್ಳಿ ಸೇರಿದಂತೆ ಹಲವು ಗ್ರಾಮಗಳು ಮಂಗಳವಾರ ರಾತ್ರಿಯಿಂದಲೂ ಕತ್ತಲೆಯಲ್ಲಿ ಮುಳುಗಿವೆ. ಇನ್ನು ಬಾರೀ ಮಳೆಯಿಂದ ಕೊಯ್ಲಿಗೆ ಬಂದಿರುವ ಕಾಫಿ ಬೆಳೆ ಕೂಡ ಹಾಳಾಗುತ್ತಿದೆ. ನಿತ್ಯ ಸುರಿಯುತ್ತಿರುವ ಮಳೆಗೆ ಕಾಫಿ ಹಣ್ಣು ಉದುರಿ ಹೋಗುತ್ತಿದೆ. ಮಳೆಗೆ ಹಣ್ಣು ಹೊಡೆದು ನೆಲ ಕಚ್ಚುತ್ತಿದೆ. ಮಳೆ ಇರುವುದರಿಂದ ಹಣ್ಣನ್ನು ಬಿಡಿಸಿ ಪಲ್ಪಿಂಗ್ ಮಾಡಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಗಿಡದಲ್ಲಿಯೇ ಹಣ್ಣನ್ನು ಬಿಟ್ಟಲ್ಲಿ ಹೀಗೆ ಉದುರಿ ಹಾಳಾಗಿ ಹೋಗುತ್ತಿದೆ. ಒಟ್ಟಿನಲ್ಲಿ ಕಳೆದ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಜಿಲ್ಲೆಯ ರೈತರು ಸಾಕಷ್ಟು ನಷ್ಟ ಅನುಭವಿಸುವಂತೆ ಮಾಡಿದೆ.

click me!