* ಯಲ್ಲಾಲಿಂಗನ ಕೊಲೆ ಕೇಸ್ ಆರೋಪಿ ಮಹಾಂತೇಶ ನಾಯಕ ಮದುವೆಯಲ್ಲಿ ಭಾಗಿ
* ಡಿಎಸ್ಪಿ, ಸಿಪಿಐ, ಪಿಎಸ್‌ಐ ಕಡ್ಡಾಯ ರಜೆಗೆ ಕಳುಹಿಸಿದ ಎಸ್ಪಿ
* ಟೀಕೆಗೆ ಗುರಿಯಾದ ಶುಭ ಕೋರಿಕೆ
ಕೊಪ್ಪಳ(ಜು.21): ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಕೊಲೆ ಆರೋಪಿಯ ವಿವಾಹದಲ್ಲಿ ಭಾಗಿಯಾಗಿರುವ ಮೂವರು ಪೊಲೀಸ್ ಅಧಿಕಾರಿಗಳನ್ನು ಕಡ್ಡಾಯವಾಗಿ ರಜೆ ಮೇಲೆ ಹೋಗುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಸೂಚನೆ ನೀಡಿದ್ದಾರೆ.
ಕೊಲೆ ಕೇಸ್‌ನಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಮಹಾಂತೇಶ ನಾಯಕ ವಿವಾಹ ಜು. 18ರಂದು ಹುಲಿಹೈದರ ಗ್ರಾಮದಲ್ಲಿ ನಡೆದಿದ್ದು, ಡಿವೈಎಸ್ ರುದ್ರೇಶ ಉಜ್ಜನಕೊಪ್ಪ, ಗಂಗಾವತಿ ಸಿಪಿಐ ಉದಯ ರವಿ ಮತ್ತು ಕನಕಗಿರಿ ಪಿಎಸ್‌ಐ ತಾರಾಬಾಯಿ ಅವರು ಹೋಗಿ ಶುಭ ಕೋರಿರುವುದು ಟೀಕೆಗೆ ಗುರಿಯಾಗಿತ್ತು. ಮಾಹಿತಿ ಗೊತ್ತಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಲೆ ಆರೋಪಿ ವಿವಾಹಕ್ಕೆ ಹೋಗಿರುವುದರಿಂದ ಇಲಾಖೆಗೆ ಮುಜುಗರ ಉಂಟಾಗುತ್ತದೆ ಎಂಬ ಕಾರಣಕ್ಕೆ ಕಡ್ಡಾಯ ರಜೆಗೆ ಆದೇಶ ನೀಡಿದ್ದಾರೆ.
ಕೊಪ್ಪಳ : ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಆರೋಪಿ ಮದುವೆಯಲ್ಲಿ ಪೊಲೀಸ್ ಅಧಿಕಾರಿಗಳು
ಹಿನ್ನೆಲೆ:
ಜನವರಿ 11, 2015ರಲ್ಲಿ ಕೊಪ್ಪಳ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಕನಕಗಿರಿ ತಾಲೂಕಿನ ಕನಕಾಪುರ ನಿವಾಸಿ, ತಮ್ಮ ಗ್ರಾಮದ ಸಮಸ್ಯೆಯನ್ನು ಖಾಸಗಿ ವಾಹಿನಿ ಮುಂದೆ ಹೇಳಿದ್ದಕ್ಕೆ ಹತ್ಯೆ ಮಾಡಲಾಗಿತ್ತು. ಜಿಪಂ ಮಾಜಿ ಸದಸ್ಯ ಹನುಮೇಶ್ ನಾಯಕ ಮತ್ತು ಅವರ ಪುತ್ರ ಮಹಾಂತೇಶ ನಾಯಕ ಸೇರಿ 9 ಜನರ ಮೇಲೆ ಕೊಲೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ 9 ಜನರ ಮೇಲೆ ಕೊಲೆ ಪ್ರಕರಣ ದಾಖಲಾಗಿ ಅವರು ಜೈಲುವಾಸದಲ್ದಿದ್ದರು. ಆನಂತರ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.
ಪ್ರಕರಣ ತನಿಖೆ ಹಂತದಲ್ಲಿ ಇರುವಾಗಲೇ ಮಹಾಂತೇಶ ನಾಯಕನ ವಿವಾಹದಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಉದಯ ರವಿ ಮತ್ತು ಕನಕಗಿರಿ ಪಿಎಸ್‌ಐ ತಾರಾಬಾಯಿ ಪವಾರ್ ಭಾಗಿಯಾಗಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಅವರು ಕಡ್ಡಾಯ ರಜೆ ಮೇಲೆ ಹೋಗುವಂತೆ ಸೂಚನೆ ನೀಡಿದ್ದಾರೆ.