ಮಳೆ ಪರಿಹಾರ ಸಮರೋಪಾದಿಯಲ್ಲಿ ನಿರ್ವಹಿಸಿ: ಸಚಿವ ಸೋಮಣ್ಣ

By Govindaraj SFirst Published Sep 4, 2022, 1:23 AM IST
Highlights

ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ಕ್ರಮ ಹಾಗೂ ಪುನರ್ವಸತಿ ಕಾರ್ಯ ಸಮರೋಪಾದಿಯಲ್ಲಿ ಅಧಿಕಾರಿಗಳು ನಿರ್ವಹಿಸಬೇಕೆಂದು ವಸತಿ ಸಚಿವ ವಿ. ಸೋಮಣ್ಣ ಸೂಚಿಸಿದರು.

ಚಾಮರಾಜನಗರ (ಸೆ.04): ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ಕ್ರಮ ಹಾಗೂ ಪುನರ್ವಸತಿ ಕಾರ್ಯ ಸಮರೋಪಾದಿಯಲ್ಲಿ ಅಧಿಕಾರಿಗಳು ನಿರ್ವಹಿಸಬೇಕೆಂದು ವಸತಿ ಸಚಿವ ವಿ. ಸೋಮಣ್ಣ ಸೂಚಿಸಿದರು. ನಗರದ ಜಿ.ಪಂ.ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಮಳೆಹಾನಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಪ್ರವಾಹ, ಪ್ರಕೃತಿ ವಿಕೋಪಗಳಿಂದ ಜನರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸಾಕಷ್ಟುತೊಂದರೆಯಾಗಿದೆ. 

ಬೆಳೆ, ಮನೆಗಳಿಗೆ ಹಾನಿಯಾಗಿದೆ. ಶಾಲೆ, ರಸ್ತೆ ಮೂಲ ಸೌಕರ್ಯಗಳಿಗೂ ಧಕ್ಕೆಯಾಗಿದೆ. ನಷ್ಟದ ಕುರಿತು ವ್ಯಾಪಕವಾಗಿ ಸಮೀಕ್ಷೆ ಕೈಗೊಂಡು ನಿಖರ ಅಂಕಿ ಅಂಶಗಳನ್ನು ಒದಗಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ನಷ್ಟಸಂಭವಿಸಿರುವ ಬೆಳೆ, ಮನೆಗಳಿಗೆ ಸೂಕ್ತ ಪರಿಹಾರ ಒದಗಿಸುವಾಗ ಮಾನವೀಯ ನೆಲೆಯಲ್ಲಿ ನೋಡಬೇಕು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಆಯಾ ಭಾಗದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ಸಮನ್ವಯದಿಂದ ಸಮಗ್ರ ಮಾಹಿತಿ ಸಂಗ್ರಹಿಸಿ ಖುದ್ದು ಪರಿಶೀಲಿಸಿ ಅರ್ಹರೆಲ್ಲರಿಗೂ ಪರಿಹಾರ ತಲುಪಿಸಬೇಕು ಎಂದರು. 

ವಾಸ್ತವಾಂಶ ಅರಿತು ಮಾಹಿತಿ ನೀಡುವೆ: ಸಚಿವ ಸೋಮಣ್ಣ

ಕೆರೆಗಳಿಗೆ ನೀರು ತುಂಬಿಸಲು ಸೂಚನೆ: ಎಲ್ಲಾ ಕಾಲುವೆ ಸ್ವಚ್ಚಗೊಳಿಸಬೇಕು. ಕಾಮಗಾರಿ ಬಾಕಿ ಉಳಿಯದಂತೆ ಪೂರ್ಣಗೊಳಿಸಬೇಕು. ಕೆರೆಗಳಲ್ಲಿ ಬೆಳೆದ ಕಳೆ ಗಿಡ ತೆಗೆಯಬೇಕು. ಕೆರೆಗಳು ಒತ್ತುವರಿಯಾಗಿದ್ದಲ್ಲಿ ಪೊಲೀಸರ ನೆರವು ಪಡೆದು ನಿರ್ದಾಕ್ಷಿಣ್ಯ ತೆರವುಗೊಳಿಸಬೇಕು ಎಂದರು. ಹಾನಿಯಾದ ಅಂಗನವಾಡಿ, ಶಾಲಾ ಕೊಠಡಿ, ಪ್ರಾ. ಆರೋಗ್ಯ ಕೇಂದ್ರ, ಹಾಸ್ಟೆಲ್‌ಗಳ ಕಟ್ಟಡ ಸರಿಪಡಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿಯೂ ಆರೋಗ್ಯ ಸೇವೆ ನೀಡಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ 24*7 ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಬಡವರಿಗೆ, ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಬೇಕು. ತಾ.ಪಂ.ಸಿಇಒ ಯಾರಿಗೆ ಸೌಲಭ್ಯ ತಲುಪಿಸಬೇಕಿದೆಯೋ ಅವರನ್ನು ಗುರುತಿಸುವ ಕೆಲಸ ನಿರ್ವಹಿಸಿ. ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅಲ್ಲಿನ ಜನಪ್ರತಿನಿಧಿಗಳೊಂದಿಗೆ ವಾರ್ಡ್‌ಗಳಿಗೆ ತೆರಳಿ ಪರಿಶೀಲಿಸಬೇಕು ಎಂದರು. ದಿಂಬಂನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದಿಂದ ಮಲೆಮಹದೇಶ್ವರ ಬೆಟ್ಟ, ಹನೂರು ತಾಲೂಕು ಗ್ರಾಮಗಳ ಮೂಲಕ ರಾತ್ರಿ ವೇಳೆ ಹೆಚ್ಚಾಗಿರುವ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಲು ಕೂಡಲೇ ಚೆಕ್‌ಪೋಸ್ಟ್‌ ತೆರೆಯಬೇಕು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ತಕ್ಷಣವೇ ಕ್ರಮವಹಿಸಬೇಕೆಂದು ಸಚಿವರು ಸೂಚಿಸಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿಮಾತನಾಡಿ, ನಿರಂತರ ಸುರಿದ ಮಳೆ ಹಾಗೂ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ ಭರ್ತಿ, ಕೆರೆಗಳು ತುಂಬಿದ್ದರಿಂದ ನೀರು ಹರಿದು ಅರಿಶಿನ, ಬಾಳೆ, ಜೋಳ, ಕೋಸು ಬೆಳೆಗಳು ನಾಶವಾಗಿವೆ. ಮನೆಗಳು ನೀರಿನಿಂದ ನೆನೆದು ಕುಸಿಯುವ ಭೀತಿ ಉಂಟಾಗಿದೆ. ಸಂಬಂಧಪಟ್ಟಇಲಾಖೆಗಳಿಂದ ಸಂಪೂರ್ಣ ಸಮೀಕ್ಷೆಯಾಗಿ, ಕೂಡಲೇ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದರು. ಶಾಸಕ ಆರ್‌. ನರೇಂದ್ರ ಅವರು ಮಾತನಾಡಿ, ಮಳೆಯಿಂದಾಗಿ ನಮ್ಮ ಭಾಗದಲ್ಲಿ ಆಲೂಗಡ್ಡೆ, ಕಬ್ಬು ಇತರೆ ಬೆಳೆ ಹಾನಿಯಾಗಿವೆ. ಹೆಚ್ಚು ಭಾರ ಹೊತ್ತ ಲಾರಿಗಳ ಸಂಚಾರದಿಂದ ರಸ್ತೆಗೆ ಹಾನಿಯಾಗುತ್ತಿದೆ ಎಂದು ಗಮನ ಸೆಳೆದರು.

ಚಾಮರಾಜನಗರ: ಸನ್ಮಾನ ಕಲ್ಪಿಸದ ಜಿಲ್ಲಾಡಳಿತ, ಗ್ರಾಪಂ ಆವರಣದಲ್ಲಿಯೇ ಶವಸಂಸ್ಕಾರ..!

ಶಾಸಕ ಎನ್‌. ಮಹೇಶ್‌ ಮಾತನಾಡಿ, ಮಳೆ ಹಾಗೂ ಪ್ರವಾಹದಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಿರುವುದು ಕೊಳ್ಳೇಗಾಲ ಕ್ಷೇತ್ರವಾಗಿದೆ. ಇಲ್ಲಿ ಕೆರೆಗಳಿಗೆ ಸಾಕಷ್ಟುಹಾನಿಯಾಗಿದೆ. ಬೆಳೆನಷ್ಟಸೇರಿದಂತೆ ಸಂಭವಿಸಿರುವ ಎಲ್ಲಾ ಹಾನಿಗೆ ತುರ್ತಾಗಿ ಸಮಗ್ರ ಸಮೀಕ್ಷೆ ಕೈಗೊಂಡು ನಿಖರ ಅಂಶಗಳನ್ನು ಸಂಗ್ರಹಿಸಿ ನಷ್ಟವನ್ನು ನಿರ್ಧರಿಸಬೇಕು. ಪುನರ್ವಸತಿ ಕಾರ್ಯ ಆಗಬೇಕು. ರಸ್ತೆ, ಸೇತುವೆ, ಕಾಲುವೆ ಸೇರಿದಂತೆ ಎಲ್ಲಾ ದುರಸ್ತಿಗೆ ವಿಶೇಷ ಪರಿಹಾರ ಪ್ಯಾಕೇಜ್‌ ಅಗತ್ಯವಿದೆ ಎಂದರು.

ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನಲ್ಲಿ ಹತ್ತಿ, ಸಣ್ಣ ಈರುಳ್ಳಿ ಬೆಳೆಗೆ ತೊಂದರೆಯಾಗಿದೆ. ತುಂಬದಿರುವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಿಗದಿಯಂತೆ ನಡೆಯಬೇಕು. ಕೆರೆ ಸಂಬಂಧ ಕಾರ್ಯಗಳು ಶೀಘ್ರವೇ ಆರಂಭಿಸಬೇಕು ಎಂದರು. ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಪಂ ಸಿಇಒ ಕೆ.ಎಂ. ಗಾಯಿತ್ರಿ, ಎಸ್ಪಿ ಟಿ.ಪಿ. ಶಿವಕುಮಾರ್‌, ಎಡಿಸಿ ಎಸ್‌. ಕಾತ್ಯಾಯಿನಿದೇವಿ, ಎಎಸ್ಪಿ ಕೆ.ಎಸ್‌. ಸುಂದರ್‌ರಾಜ್‌, ಎಸಿ ಗೀತಾ ಹುಡೇದ ಸಭೆಯಲ್ಲಿ ಉಪಸ್ಥಿತರಿದ್ದರು.

click me!