ಭೂಕುಸಿತದಲ್ಲಿ ಪತ್ನಿ ಮಕ್ಕಳನ್ನು ಕಳೆದುಕೊಂಡ ವ್ಯಕ್ತಿ, ವಿಧವೆ ಮರುವಿವಾಹ

By Kannadaprabha News  |  First Published Apr 9, 2020, 11:47 AM IST

ಕಳೆದ ವರ್ಷ ದಕ್ಷಿಣ ಕೊಡಗಿನ ತೋರ ಎಂಬ ಗ್ರಾಮದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ತನ್ನ ತಾಯಿ, ಹೆಂಡತಿ, ಮಕ್ಕಳನ್ನೆಲ್ಲ ಕಳೆದುಕೊಂಡು ತೀವ್ರ ಹತಾಶೆಗೊಳಗಾಗಿ ಅನಾಥಭಾವದಲ್ಲಿದ್ದ ಸಂತ್ರಸ್ತ ಪ್ರಭು ಅವರ ಬಾಳಿನಲ್ಲಿ ಈಗ ಹೊಸ ಆಶಾಕಿರಣ ಮೂಡಿದೆ.


ವಿರಾಜಪೇಟೆ(ಏ.09): ಕಳೆದ ವರ್ಷ ದಕ್ಷಿಣ ಕೊಡಗಿನ ತೋರ ಎಂಬ ಗ್ರಾಮದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ತನ್ನ ತಾಯಿ, ಹೆಂಡತಿ, ಮಕ್ಕಳನ್ನೆಲ್ಲ ಕಳೆದುಕೊಂಡು ತೀವ್ರ ಹತಾಶೆಗೊಳಗಾಗಿ ಅನಾಥಭಾವದಲ್ಲಿದ್ದ ಸಂತ್ರಸ್ತ ಪ್ರಭು ಅವರ ಬಾಳಿನಲ್ಲಿ ಈಗ ಹೊಸ ಆಶಾಕಿರಣ ಮೂಡಿದೆ.

ಪತಿಯ ನಿಧನದ ಬಳಿಕ ತನ್ನಿಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಇದೇ ಗ್ರಾಮದ ಮಹಿಳೆಯನ್ನು ಬುಧವಾರ ಮದುವೆಯಾಗಿರುವ ಪ್ರಭು ಅವರು ವಿಧವೆಗೆ ಬಾಳು ಕೊಡುವ ಮೂಲಕ ತಾವೂ ಹೊಸ ಜೀವನ ಕಂಡುಕೊಂಡಿದ್ದಾರೆ.

Tap to resize

Latest Videos

ನಾಯಿ ಮರಿಗಳನ್ನು ಮಾರಿ ಕೊರೋನಾ ಪರಿಹಾರ ನಿಧಿಗೆ ಹಣ..!

ಬುಧವಾರ ತಮ್ಮ ಮನೆಯವರ ಸಮ್ಮುಖದಲ್ಲಿ ಪ್ರಿಯಾ ಅವರನ್ನು ವರಿಸಿದ ಪ್ರಭು ಅವರು, ‘ಪ್ರಿಯಾ ಅವರ ಇಬ್ಬರು ಮಕ್ಕಳಲ್ಲಿ ಪ್ರವಾಹದಲ್ಲಿ ಕೊಚ್ಚಿಹೋದ ತನ್ನಿಬ್ಬರನ್ನು ಮಕ್ಕಳನ್ನು ಕಾಣುತ್ತೇನೆ’ ಎಂದು ಪತ್ರಿಕೆಯೊಂದಿಗೆ ತಮ್ಮ ನೋವು- ಸಂತಸವನ್ನು ಹಂಚಿಕೊಂಡರು.

ಕಳೆದ ಮಳೆಗಾಲದಲ್ಲಿ ನನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡು ಹತಾಶನಾಗಿದ್ದೆ. ಪ್ರವಾಹದಲ್ಲಿ ಕೊಚ್ಚಿ ಹೋದ ನನ್ನ ಮಕ್ಕಳು, ಮಡದಿಯನ್ನು ನನ್ನಿಂದ ಮರೆಯಲಾಗುತ್ತಿರಲಿಲ್ಲ. ಇನ್ನು ಕೆಲವು ದಿನ ಹೀಗೇ ಇದ್ದಿದ್ದರೆ ನನಗೆ ಏನಾಗುತ್ತಿತ್ತೋ ಗೊತ್ತಿಲ್ಲ. ಹಾಗಾಗಿ ತಾನು ಹೊಸ ಬಾಳಿಗೆ ಕಾಲಿಟ್ಟಿದ್ದು, ಈ ಮಕ್ಕಳಲ್ಲಿ ಇನ್ನುಮುಂದೆ ನನ್ನ ಮಕ್ಕಳನ್ನು ಕಾಣುತ್ತೇನೆ. ಹೊಸ ಬದುಕು ಕಟ್ಟಿಕೊಡುವಲ್ಲಿ ನನ್ನ ಸಂಬಂಧಿಕರು ಬಹಳಷ್ಟುಸಹಾಯ ಮಾಡಿದ್ದಾರೆ ಎಂದರು.

ಅಂದು ಏನಾಗಿತ್ತು?:

ತೋರ ಗ್ರಾಮದಲ್ಲಿ ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಸುರಿದ ಮಹಾಮಳೆಗೆ ಭೂಕುಸಿತ ಸಂಭವಿಸಿತ್ತು. ಕೀರ್ತಿಹೊಳೆಯ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯಲಾರಂಭಿಸಿತ್ತು. ತನ್ನ ಮಡದಿ ಮತ್ತು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸೊಂಟದ ಮಟ್ಟದಲ್ಲಿದ್ದ ನೀರನ್ನು ದಾಟಿ ಪ್ರಭು ಅವರು ತಮ್ಮ ತಾಯಿ ವಾಸವಿದ್ದ ಹಳೆ ಮನೆಗೆ ಮನೆಗೆ ತೆರಳಿದ್ದರು. ಮಾರನೆಯ ದಿನ ತೋರ ಗ್ರಾಮದಲ್ಲಿರುವ ತನ್ನ ಅಂಗಡಿ, ಮನೆಯನ್ನು ನೋಡಲು ಬಂದ ಸಂದರ್ಭದಲ್ಲಿ ಇವರ ಮನೆಯ ಮೇಲ್ಭಾಗದ ಬೆಟ್ಟಕುಸಿದು ಪ್ರಭು ಅವರ ಕುಟುಂಬವೇ ಭೂಸಮಾಧಿಯಾಗಿತ್ತು.

ಲಾಕ್‌ಡೌನ್‌ ಎಫೆಕ್ಟ್: ಸೆಲೂನ್‌ ಶಾಪ್‌ ಬಂದ್‌, ಮನೆ ಬಾಗಿಲಿಗೆ ಕ್ಷೌರಿಕರು!

ತೋರ ಎನ್ನುವ ಗ್ರಾಮ ಅರ್ಧಕ್ಕರ್ಧ ಕಾಲದ ಗರ್ಭದಲ್ಲಿ ಮಾಯವಾಗಿ ಹೋಗಿತ್ತು. ನಂತರದ ದಿನಗಳಲ್ಲಿ ಸಂತ್ರಸ್ತರು ನಿಧಾನಕ್ಕೆ ಸರ್ಕಾರ ಕೊಡಮಾಡಿದ ಪರಿಹಾರ ಹಣದೊಂದಿಗೆ ತಮ್ಮ ಬದುಕು ಕಟ್ಟಿಕೊಂಡರು. ಆದರೆ ಇಡೀ ಘಟನೆಯಲ್ಲಿ ತನ್ನ ಕುಟುಂಬವನ್ನೇ ಕಳೆದುಕೊಂಡು ತೀವ್ರ ಖಿನ್ನತೆ, ಹತಾಶೆಗೆ ಒಳಗಾಗಿದ್ದು ಪ್ರಭು ಅವರು. ಈ ಸಂದರ್ಭದಲ್ಲಿ ಪ್ರಭು ಅವರ ತಂಗಿ ಮತ್ತು ಭಾವ ಇವರಿಗೆ ಬೆನ್ನುಲುಬಾಗಿ ನಿಂತು ಅವರಲ್ಲಿ ಒಂಟಿತನ ಕಾಡದಂತೆ ನೋಡಿಕೊಂಡು, ಇದೀಗ ಅವರಿಗೆ ಮದುವೆ ಮಾಡಿಸಿದ್ದಾರೆ. ಪ್ರಭು ಅವರು ಈಗ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟು, ಕಳೆದ ಮಳೆಗಾಲದಲ್ಲಿ ಕೈಜಾರಿ ಹೋಗಿದ್ದ ಬದುಕನ್ನು ಮತ್ತೊಂದು ಮಳೆಗಾಲ ಆರಂಭಕ್ಕೂ ಮುನ್ನವೇ ಮರಳಿ ಕಟ್ಟಿಕೊಂಡಿದ್ದಾರೆ.

-ಮಂಜುನಾಥ್‌ ಟಿ.ಎನ್‌.

click me!