ಜ್ವರದಿಂದ ಬಾಲಕಿ ಸಾವು ಪ್ರಕರಣ: ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್

By Kannadaprabha News  |  First Published Apr 9, 2020, 11:37 AM IST

ಕೋವಿಡ್-19 ಸೋಂಕಿನಿಂದ ಬಾಲಕಿಗೆ ಸಾವನ್ನಪ್ಪಿಲ್ಲ| ಕೊಂಗಂಡಿ ಬಾಲಕಿ ಸಾವು ಪ್ರಕರಣ ನಕಲಿ ವೈದ್ಯರಿಬ್ಬರ ವಿರುದ್ಧ ದೂರು ದಾಖಲು| ದುಡಿಯಲು ಬೆಂಗಳೂರಿಗೆ ವಲಸೆ ಹೋಗಿದ್ದ ಬಾಲಕಿಯ ಕುಟುಂಬ ಏಪ್ರಿಲ್ 1ರಂದು ಗ್ರಾಮಕ್ಕೆ ವಾಪಸಾಗಿದ್ದರು| ಎರಡು ದಿನಗಳಲ್ಲಿ ಬಾಲಕಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು|


ಶಹಾಪುರ(ಏ.09): ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲಿ, ಸಾವನ್ನಪ್ಪಿದ್ದ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ಕೊಂಗಂಡಿ ಗ್ರಾಮದ 4 ವರ್ಷದ ಬಾಲಕಿಯ ರಕ್ತದ ಮಾದರಿ ಹಾಗೂ ಗಂಟಲ ದ್ರವ ಪರೀಕ್ಷೆ ಪ್ರಯೋಗಾಲಯದ ವರದಿ ಬಂದಿದ್ದು, ನೆಗೆಟಿವ್ ಆಗಿದೆ. 

ಬಾಲಕಿಗೆ ಕೋವಿಡ್-19 ಸೋಂಕು ತಗುಲಿರಲಿಲ್ಲ ಎಂದು ಖಚಿತವಾಗಿದೆ. ಇನ್ನೊಂದೆಡೆ ಬೆಂಗಳೂರಿನಿಂದ ವಾಪಸಾಗಿದ್ದ ಜಿಲ್ಲೆಯ ಗೋಪಾಲಪುರ ಗ್ರಾಮದ 20 ಜನರ ವರದಿಗಳು ಸಹ ನೆಗೆಟಿವ್ ಆಗಿದ್ದು, ಸಾರ್ವಜನಿಕರು ನಿಟ್ಟಿಸಿರು ಬಿಡುವಂತಾಗಿದೆ.

Latest Videos

undefined

ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ. ಎಸ್. ಪಾಟೀಲ್ ಈ ಬಗ್ಗೆ ಖಚಿತ ಪಡಿಸಿ, ಅರಕೇರಾದ 20 ಜನರ ಹಾಗೂ ಕೊಂಗಂಡಿ ಗ್ರಾಮದ ಬಾಲಕಿ ಪ್ರಯೋಗಾಲಯದ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ಜ್ವರದಿಂದ ಆರು ವರ್ಷದ ಬಾಲಕಿ ಸಾವು: ಕೊರೋನಾ ಶಂಕೆ?

ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ, ಶಹಾಪೂರ ತಾಲೂಕಿನ ಕೊಂಗಂಡಿ ಗ್ರಾಮದ ಬಾಲಕಿ ಸಾವಿನ ಘಟನೆಯ ಹಿನ್ನೆಲೆಯಲ್ಲಿ, ನಿರ್ಲಕ್ಷ್ಯ ತೋರಿದ ಆರೋಪದಡಿ ಇಬ್ಬರು ನಕಲಿ ವೈದ್ಯರ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಂಗಂಡಿ ಗ್ರಾಮದ 24 ವರ್ಷದ ದೇವು ಹಡಪದ್ ಹಾಗೂ ಸಂಜಯ್ ಪಗಳಮಂಡಲ ಎಂಬಿಬ್ಬರ ವಿರುದ್ಧ ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿಯಾದ ಡಾ. ಎಸ್. ಬಿ. ಪಾಟೀಲ್ ದೂರು ದಾಖಲಿಸಿದ್ದಾರೆ.
ಕೊಂಗಂಡಿ ಗ್ರಾಮದ ನಾಲ್ಕು ವರ್ಷದ ಬಾಲಕಿ ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದಾಗ, ಆರ್.ಎಂ.ಪಿ. ಎಂದು ಚಿಕಿತ್ಸೆ ನೀಡಿದ ಇವರಿಬ್ಬರೂ ಆರೋಗ್ಯ ಇಲಾಖೆ ಗಮನಕ್ಕೆ ತರುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಕೋವಿಡ್‌-19 ಸೋಂಕು ಹಬ್ಬುತ್ತಿರುವ ಇಂತಹ ಸಂದರ್ಭದಲ್ಲಿ ಈ ಗ್ರಾಮದ ಇವರಿಬ್ಬರೂ ಅನಾಮತ್ತಾಗಿ ಚಿಕಿತ್ಸೆ ನೀಡಿದ್ದು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿರುವುದಿಲ್ಲ.

ಏಪ್ರಿಲ್ 7 ರಂದು ಬಾಲಕಿ ತೀವ್ರ ಅಸ್ವಸ್ಥಗೊಂಡು, ಶಹಪುರ ತಾಲೂಕು ಆಸ್ಪತ್ರೆಗೆ ಕರೆತರುವಾಗ ಸಾವನ್ನಪ್ಪಿದ್ದಾಳೆ. ಅವಳ ಸಾವಿಗೆ ಕೋವಿಡ್-19 ಸಂಶಯ ವ್ಯಕ್ತವಾಗಿದ್ದು, ಸದರಿ ಆರೋಪಿತರು ಬಾಲಕಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿ ಆರೋಗ್ಯ ಇಲಾಖೆಯ ಗಮನಕ್ಕೆ ತರದೇ ತಪ್ಪೆಸಗಿದ್ದಾರೆಂದು ದೂರಿ, ಈ ಪ್ರಕರಣ ದಾಖಲಿಸಲಾಗಿದೆ.

ದುಡಿಯಲು ಬೆಂಗಳೂರಿಗೆ ವಲಸೆ ಹೋಗಿದ್ದ ಬಾಲಕಿಯ ಕುಟುಂಬ ಏಪ್ರಿಲ್ 1ರಂದು ಗ್ರಾಮಕ್ಕೆ ವಾಪಸಾಗಿದ್ದರು. ನಂತರದ ಎರಡು ದಿನಗಳಲ್ಲಿ ಬಾಲಕಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. ಕೋವಿಡ್-19 ಶಂಕೆ ಹಿನ್ನೆಲೆಯಲ್ಲಿ ಬಾಲಕಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಪ್ರಕಾರ ಬಾಲಕಿಯ ಅಂತ್ಯಸಂಸ್ಕಾರ ಮಾಡಲಾಗಿತ್ತು.

"

click me!