ಹಾವೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಘಟನೆ| ಕೊರೋನಾ ಸೋಂಕಿತೆ ಸಾವು| ಪತ್ನಿ ಹಾಗೂ ಮಗು ಸಾವಿನಿಂದ ಜರ್ಜರಿತಗೊಂಡಿದ್ದ ವ್ಯಕ್ತಿ| ಪತ್ನಿಯೊಂದಿಗೆ ನನ್ನನ್ನೂ ಚಿತೆಯಲ್ಲಿಟ್ಟು ಅಂತ್ಯಸಂಸ್ಕಾರ ನೆರವೇರಿಸುವಂತೆ ಸಂಬಂಧಿಕರಲ್ಲಿ ಮನವಿ ಮಾಡಿದ್ದ ಗಂಡ|
ಹಾವೇರಿ(ಮೇ.08): ಶಿಶು ಸಮೇತರಾಗಿ ಕೊರೋನಾ ಸೋಂಕಿತ ಬಾಣಂತಿ ಮೃತಪಟ್ಟ ಹಿನ್ನೆಲೆಯಲ್ಲಿ ಪತಿ ವಿಷ ಸೇವಿಸಿ ಅಸ್ವಸ್ಥಗೊಂಡ ಘಟನೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ನಡೆದಿದೆ.
ಬ್ಯಾಡಗಿಯ ಸತೀಶ ಎಂಬಾತ ವಿಷ ಸೇವಿಸಿ ಅಸ್ವಸ್ಥಗೊಂಡ ವ್ಯಕ್ತಿ. ಕೊರೋನಾ ಸೋಂಕಿತಳಾಗಿದ್ದ ಈತನ ಪತ್ನಿ ಬುಧವಾರ ರಾತ್ರಿ ಮೃತಪಟ್ಟಿದ್ದರು. ಶಿಶು ಕೂಡ ಅಸುನೀಗಿತ್ತು. ಇದರಿಂದ ತೀವ್ರ ಬೇಸರಗೊಂಡಿದ್ದ ಸತೀಶ, ಗುರುವಾರ ವಿಷ ಸೇವಿಸಿ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ. ಪತ್ನಿ ಹಾಗೂ ಮಗು ಸಾವಿನಿಂದ ಜರ್ಜರಿತಗೊಂಡಿದ್ದ ಈತ, ಪತ್ನಿಯೊಂದಿಗೆ ನನ್ನನ್ನೂ ಚಿತೆಯಲ್ಲಿಟ್ಟು ಅಂತ್ಯಸಂಸ್ಕಾರ ನೆರವೇರಿಸುವಂತೆ ಸಂಬಂಧಿಕರಲ್ಲಿ ಮನವಿ ಮಾಡಿದ್ದ.
2ನೇ ಅಲೆಯಲ್ಲಿ ಮತ್ತಷ್ಟು ಕ್ರೂರಿಯಾದ ವೈರಸ್: ಕೊರೋನಾ ಬಗ್ಗೆ ಆಘಾತಕಾರಿ ಸುದ್ದಿ..!
ಬೇಸರದಿಂದ ಈತ ಹೀಗೆ ಹೇಳುತ್ತಿರಬಹುದು ಎಂದು ಕುಟುಂಬದವರು ಅಂದುಕೊಂಡಿದ್ದರು. ಆದರೆ, ವಿಷ ಸೇವಿಸಿದ್ದ ಈತ ತೀವ್ರ ಅಸ್ವಸ್ಥಗೊಂಡಿದ್ದ. ವೈದ್ಯರಲ್ಲಿಯೂ ತಾನು ವಿಷ ಸೇವಿಸಿ ಬಂದಿರುವುದಾಗಿ ಹೇಳಿದ್ದ. ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿದ್ದು ಒದ್ದಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಕ್ಷಣ ಆಸ್ಪತ್ರೆ ಸಿಬ್ಬಂದಿ ಹಾಗೂ ಸಂಬಂಧಿಕರು ವಾರ್ಡ್‌ಗೆ ಸೇರಿಸಿ ಚಿಕಿತ್ಸೆ ನೀಡಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona