ವಿದ್ಯಾರ್ಥಿ ಜೀವನ ಬದುಕಿನ ಅತ್ಯಂತ ಪ್ರಮುಖ ಘಟ್ಟ. ಈ ಹಂತದಲ್ಲಿಯೇ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮತ್ತು ಗುರಿ ಸಾಧನೆಯ ಬಗ್ಗೆ ಸ್ಪಷ್ಟನಿರ್ಧಾರ ಕೈಗೊಂಡಿರಬೇಕು ಎಂದು ತುಮಕೂರು ವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್ ಹೇಳಿದರು.
ತುಮಕೂರು : ವಿದ್ಯಾರ್ಥಿ ಜೀವನ ಬದುಕಿನ ಅತ್ಯಂತ ಪ್ರಮುಖ ಘಟ್ಟ. ಈ ಹಂತದಲ್ಲಿಯೇ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮತ್ತು ಗುರಿ ಸಾಧನೆಯ ಬಗ್ಗೆ ಸ್ಪಷ್ಟನಿರ್ಧಾರ ಕೈಗೊಂಡಿರಬೇಕು ಎಂದು ತುಮಕೂರು ವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್ ಹೇಳಿದರು.
ನಾಗವಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ಮತ್ತು ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಈ ಅರಿವು ಕಾರ್ಯಕ್ರಮದಿಂದ ತಮ್ಮ ಜಾಗೃತಿಯನ್ನು ಹೆಚ್ಚಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಯಶಸ್ವಿಯಾಗಿ ಮುಗಿಸಿ ಉಜ್ವಲ ಭವಿಷ್ಯವನ್ನು ಕಾಣುವಂತಾಗಬೇಕು. ವಿದ್ಯಾಭ್ಯಾಸದ ಬಗ್ಗೆ, ಹಲವಾರು ಮಹನೀಯರ ಜೀವನ ಮತ್ತು ಸಾಧನೆಗಳ ಬಗ್ಗೆ ಮತ್ತು ವಿಶ್ವದ ಬಗ್ಗೆ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ರಸ್ತೆ ಸುರಕ್ಷತೆ, ಟ್ರಾಫಿಕ್ ರೂಲ್ಸ್ ಮತ್ತು ಟ್ರಾಫಿಕ್ ಸಿಗ್ನಲ್‌ಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿರುವ ವಾಹನಗಳ ರಿಜಿಸ್ಪ್ರೇಷನ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಇನ್‌ಶೂರೆನ್ಸ್ ಗಳ ಬಗ್ಗೆ ತಿಳಿದುಕೊಂಡು ಮನೆಯಲ್ಲಿ ಅದನ್ನು ಬಳಸುವವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಕರೆ ನೀಡಿದರು.
ಕ್ಯಾತ್ಸಂದ್ರದ ವೃತ್ತ ನಿರೀಕ್ಷಕ ಚೆನ್ನೇಗೌಡರವರು ಮಾದಕ ದ್ರವ್ಯ ಸೇವನೆಯಿಂದಾಗುವ ಪರಿಣಾಮಗಳು ಮತ್ತು ಅದರ ಬಗ್ಗೆ ಎಚ್ಚರದಿಂದಿರಬೇಕಾದ ಅಂಶಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳ ಜೀವನ ಹಾಗೂ ಜೀವನ ಕೌಶಲ್ಯದ ಬೆಳವಣಿಗೆಗೆ ಪೂರಕವಾದ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಿಂದ ಆಗುತ್ತಿರುವ ಅಪರಾಧ ಚಟುವಟಿಕೆಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾಯಿದೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಹೆಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ದೇವಿಕಾದೇವಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ರೀತಿಯ ಆಮಿಷ ಮತ್ತು ಆಕರ್ಷಣೆಗೆ ಬಲಿಯಾಗಿ ತಮ್ಮ ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕ ವಿ.ಎಸ್. ರಂಗರಾಜು ಮತ್ತು ಉಪಪ್ರಾಂಶುಪಾಲರಾದ ಶ್ರೀನಿವಾಸ್ ಜೆ ಹಾಗೂ ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು. ಎಂ. ಸುರೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಟಿ.ಜೆ. ಜ್ಯೋತಿಪ್ರಕಾಶ್ ವಂದಿಸಿದರು.
ಶಿಕ್ಷಣ ನಿಲ್ಲಿಸಬೇಡಿ
ಮೈಸೂರು (ಜೂ.16): ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬೇಡಿ. ಪದವಿ ಜೊತೆಗೆ ಸ್ನಾತಕೋತ್ತರ ಪದವಿ ಮಾಡಿ. ವಿದ್ಯಾಭ್ಯಾಸವನ್ನು ಪರಿಪೂರ್ಣವಾಗಿ ಮುಗಿಸುವಂತೆ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಕರೆ ನೀಡಿದರು. ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಕೇಂದ್ರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಉತ್ಸವ- 2023 ಅನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಈ ವಯಸ್ಸಿನಲ್ಲಿ ಚಂಚಲತೆ ಇರುತ್ತದೆ. ವಿದ್ಯಾರ್ಥಿನಿಯರು ಯಾವುದೇ ಆಸೆ, ಆಮಿಷಗಳಿಗೆ ಮನಸನ್ನು ಹರಿಬಿಡದೇ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು. ಒಮ್ಮೆ ಎಡವಿದರೆ ಭವಿಷ್ಯ ಹಾಳಾಗುವ ಜೊತೆಗೆ ಸಮಾಜ ನೋಡುವ ರೀತಿಯನ್ನು ಬದಲಿಸುತ್ತದೆ. ಹೀಗಾಗಿ, ಜಾಗೃತಿಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಕ್ಕೇರುವ ಮೂಲಕ ಸಾವಿರಾರು ಜನಕ್ಕೆ ದಾರಿಯಾಗಬೇಕು ಎಂದರು. ಒಳ್ಳೆಯ ರೀತಿಯಲ್ಲಿ ವಿದ್ಯಾರ್ಥಿ ಜೀವನವನ್ನು ಅನುಭವಿಸಬೇಕು. ಕಷ್ಟ ಬಂದಾಗ ಎದೆಗುಂದದೇ ಎದುರಿಸಬೇಕು. ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ 5 ವರ್ಷ ಕಷ್ಟಪಟ್ಟರೇ ಜೀವನ ರೂಪಿಸಿಕೊಳ್ಳಬಹುದು.