ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 140ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದ್ದು, ಸ್ವಂತ ಬಲದ ಮೇಲೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರ (ಜ.16): ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 140ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದ್ದು, ಸ್ವಂತ ಬಲದ ಮೇಲೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು. ನಗರದ ನೆಲದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಬಿಜೆಪಿ ಮುಖಂಡ ಸಾರಥಿ ಸತ್ಯಪ್ರಕಾಶ್ ವ್ಯವಸ್ಥೆ ಮಾಡಿರುವ ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಉಚಿತ ಅಂಬುಲೆನ್ಸ್ ಸೇವೆ ಒದಗಿಸಿರುವುದು ಶ್ಲಾಘನೀಯ ನಡೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು. ಸ್ಯಾಂಟ್ರೋ ರವಿ ವಿರುದ್ದ ಕಾನೂನು ಕ್ರಮ: ಸ್ಯಾಂಟ್ರೊ ರವಿಗೆ ಬಿಜೆಪಿ ಸರ್ಕಾರ ವಿಶೇಷ ಆತಿಥ್ಯ ನೀಡುತ್ತಿದೆ ಎಂಬ ಕುಮಾರಸ್ವಾಮಿ ಆರೋಪ ಕುರಿತಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಆ ರೀತಿಯ ಯಾವುದೇ ಆತಿಥ್ಯ ನೀಡಲು ಸಾಧ್ಯವಿಲ್ಲ. ಸ್ಯಾಂಟ್ರೋ ರವಿ ಬಂಧನವಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಂಪುಟ ಪುನರ್ ರಚನೆ ಕುರಿತು ಅಂತಿಮ ಪ್ರಯತ್ನಗಳು ನಡೆಯುತ್ತಿವೆ: ಸಿ.ಪಿ.ಯೋಗೇಶ್ವರ್
ಮದ್ಯ ಖರೀದಿ ವಯಸ್ಸನ್ನು ಇಳಿಕೆ ಮಾಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶನಿವಾರ ಹಾಗೂ ಭಾನುವಾರ ರಜೆ ಇತ್ತು. ನಾಳೆ(ಸೋಮವಾರ) ಅಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದರು. ಸ್ಥಳೀಯ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶ್ವತ್ಥನಾರಾಯಣ ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷಿನಾರಾಯಣ್, ಮುಖಂಡರಾದ ಕೆ.ವಿ.ಸತ್ಯಪ್ರಕಾಶ್, ಕೆ.ಟಿ.ಕೃಷ್ಣಪ್ಪ, ವಸಂತಕುಮಾರ್ ಗೌಡ, ನಗರಸಭೆ ಸದಸ್ಯ ಶಿವಶಂಕರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಮಹಾಲಕ್ಷ್ಮಿ ಲೇಔಟಲ್ಲಿ ಸಾಂಸ್ಕೃತಿ ಕಾರ‍್ಯಕ್ರಮ: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್‌ನಲ್ಲಿರುವ ನವರಾತ್ರಿ ವೃತ್ತದಲ್ಲಿ ಇಂದು ಸಂಕ್ರಾಂತಿ ಗೋವು ಉತ್ಸವ ಹಾಗೂ ಸಂಕ್ರಾಂತಿ ಹಬ್ಬದ ವಿಶೇಷ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿತ್ತು. ಈ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೋ ಪೂಜೆ ಮಾಡುವುದು ಹಾಗೂ ಕಿಚ್ಚು ಹಾಯಿಸುವುದು ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.
ಬಿಜೆಪಿ ಸೇರ್ಪಡೆಯಾದವರ ಮೇಲೆ ಒತ್ತಡ ಸಲ್ಲ: ಸಚಿವ ಎಂಟಿಬಿ ನಾಗರಾಜ್
ಕಾರ್ಯಕ್ರಮದ ರೂವಾರಿ ರಾಜೇಂದ್ರಕುಮಾರ್ ಅವರು ಸಚಿವರ ಸಹಕಾರದಿಂದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಜನರ ಉಪಯೋಗಕ್ಕಾಗಿ ಮುಕ್ತವಾಗಿ ಸಿಗಲಿವೆ ಎಂದು ಹೇಳಿದರು. ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ, ಬಿಬಿಎಂಪಿ ಮಾಜಿ ಸದಸ್ಯರಾದ ಕೆ.ವಿ.ರಾಜೇಂದ್ರ ಕುಮಾರ್, ಪುಷ್ಪಾ ರಾಜೇಂದ್ರ ಕುಮಾರ್, ಸುರಭಿ ನಾಗರಾಜ್, ಆನಂದ್, ಭಾಸ್ಕರ್, ಗೌರಮ್ಮ ಇದ್ದರು. ಇದೇ ಸಂದರ್ಭದಲ್ಲಿ ಗೋವುಗಳನ್ನು ಪೂಜಿಸಿ ಕಿಚ್ಚು ಹಾಯಿಸಲಾಯಿತು. ಹಾಗೆಯೇ ಸಂಕ್ರಾಂತಿ ಸೊಗಡಿನ ಜಾನಪದ ಹಾಡು ನೃತ್ಯ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆದವು. ನಟ ಧನಂಜಯ ಗೌಡ ಕಾರ್ಯಕ್ರಮ ನಿರೂಪಣೆ ಕಾರ್ಯಕ್ರಮಕ್ಕೆ ಮೆರಗು ನೀಡಿತು.