ಶತಮಾನ ಕಂಡಿರುವ ಸಿದ್ದರಾಮೇಶ್ವರ ಜಾತ್ರೆಯ ವಿಶೇಷ ಆಕರ್ಷಣೆ ಅಂದ್ರೆ ನಂದಿಕೋಲುಗಳು. ನಂದಿಕೋಲು ಮದುವೆ ಭಾಗ್ಯ, ಮಕ್ಕಳ ಭಾಗ್ಯ ಕರುಣಿಸುವ ದೈವಿ ಶಕ್ತಿಯನ್ನ ಹೊಂದಿವೆಯಂತೆ. ಹೀಗಾಗಿಯೆ ಪ್ರತಿ ವರ್ಷ ಜನರು ತಮ್ಮ ಮಕ್ಕಳ ಮದುವೆ ಭಾಗ್ಯಕ್ಕಾಗಿ ನಂದಿಕೋಲುಗಳಿಗೆ ಬಾಸಿಂಗ ಕಟ್ಟಿ ಹರಕೆ ಕಟ್ಟಿಕೊಳ್ತಾರೆ.
ವಿಜಯಪುರ (ಜ.16): ಅದು ಶತಮಾನ ಕಂಡಿರುವ ಸಿದ್ದರಾಮೇಶ್ವರ ಜಾತ್ರೆ. ಆ ಜಾತ್ರೆಯ ವಿಶೇಷ ಆಕರ್ಷಣೆ ಅಂದ್ರೆ ನಂದಿಕೋಲುಗಳು. 5 ದಿನಗಳ ಕಾಲ ಸಿಂಗಾರಗೊಂಡು ಭಕ್ತರಿಗೆ ದರ್ಶನ ಕೊಡುವ ನಂದಿಕೋಲುಗಳು ಮದುವೆ ಭಾಗ್ಯ, ಮಕ್ಕಳ ಭಾಗ್ಯ ಕರುಣಿಸುವ ದೈವಿ ಶಕ್ತಿಯನ್ನ ಹೊಂದಿವೆಯಂತೆ. ಹೀಗಾಗಿಯೆ ಪ್ರತಿ ವರ್ಷ ಜನರು ತಮ್ಮ ಮಕ್ಕಳ ಮದುವೆ ಭಾಗ್ಯಕ್ಕಾಗಿ ನಂದಿಕೋಲುಗಳಿಗೆ ಬಾಸಿಂಗ ಕಟ್ಟಿ ಹರಕೆ ಕಟ್ಟಿಕೊಳ್ತಾರೆ.
ಈ ನಂದಿಧ್ವಜಗಳಿಗೆ ಬಾಸಿಂಗ ಕಟ್ಟಿದ್ರೆ ಮದುವೆ ಗ್ಯಾರಂಟಿ!
ಶತಮಾನ ಕಂಡಿರುವ ವಿಜಯಪುರ ಸಿದ್ದರಾಮೇಶ್ವರ ಜಾತ್ರೆ ಸಂಕ್ರಾಂತಿ ಸಮಯದಲ್ಲಿ 5 ದಿನಗಳ ಕಾಲ ನಡೆಯುತ್ತೆ. ಈ ಜಾತ್ರೆಯಲ್ಲಿ ಪ್ರಮುಖ ಆಕರ್ಷಣೆಯೇ 7 ನಂದಿಕೋಲುಗಳು. 5 ದಿನಗಳ ಕಾಲ ಪೂಜೆಗೊಂಡು ನಗರದಾಧ್ಯಂತ ಭಕ್ತರಿಗೆ ದರ್ಶನ ಕೊಡುತ್ವೆ ಈ ನಂದಿಕೋಲುಗಳು. ಇನ್ನೊಂದು ವಿಶೇಷ ಏನಂದ್ರೆ ಹೀಗೆ ಸಿದ್ದರಾಮೇಶ್ವರ ಜಾತ್ರೆಯಲ್ಲಿ ದರ್ಶನ ಕೊಡುವ ನಂದಿಕೋಲುಗಳು ಕಂಕಣ ಭಾಗ್ಯವನ್ನು ಕರುಣಿಸುತ್ತವೆ ಅನ್ನೋದು. ಮನೆಯಲ್ಲಿ ಬೇಗ ಮಕ್ಕಳ ಮದುವೆಯಾಗದೆ ಇದ್ರೆ, ವಯಸ್ಸು ದಾಟಿದ್ದು ಕಂಕಣ ಭಾಗ್ಯ ಕೂಡಿ ಬರದೆ ಇದ್ರೆ, ಸಿದ್ದರಾಮೇಶ್ವರನಿಗೆ ಬೇಡಿಕೊಂಡು ನಂದಿಕೋಲುಗಳಿಗೆ ಭಕ್ತರು ಮದುವೆ ಬಾಸಿಂಗಗಳನ್ನ ಕಟ್ಟುತ್ತಾರೆ. ಹೀಗೆ ಬಾಸಿಂಗ ಕಟ್ಟಿದ ಒಂದು ವರ್ಷದಲ್ಲಿ ಅಂದ್ರೆ ಮುಂದಿನ ಜಾತ್ರೆ ಹೊತ್ತಿಗೆ ಕಂಕಣ ಭಾಗ್ಯ ಕೂಡಿ ಬಂದು ಮದುವೆ ನಡೆಯುತ್ತೆ ಎನ್ನುವ ನಂಬಿಕೆ ಇದೆ. ಹೀಗೆ ಬೇಡಿಕೆ ಇಡೇರಿದ ಮೇಲು ಭಕ್ತರು ಮದುವೆಯಲ್ಲಿ ಕಟ್ಟಿದ ಬಾಸಿಂಗವನ್ನ ತಂದು ನಂದಿಕೋಲುಗಳಿಗೆ ಮುಟ್ಟಿಸಿ ಹರಕೆ ತಿರಿಸೋದು ಇದೆ
ನಂದಿಕೋಲು ಮುಟ್ಟಲು ಧರಿಸಲೇಬೇಕು ನೀಲುವಂಗಿ!
ಇನ್ನೊಂದು ವಿಶೇಷ ಅಂದ್ರೆ ಇಲ್ಲಿ ಸಿದ್ದೇಶ್ವರಾಮೇಶ್ವರ ದೇವರ ನಂದಿಕೋಲುಗಳನ್ನ ಹಿಡಿಯುವವರು ತೊಟ್ಟುಕೊಳ್ಳುವ ಬಿಳಿ ಬಣ್ಣದ ದಿರಿಸಿಗೆ ಶತಮಾನದ ಇತಿಹಾಸವಿದೆ. ನೂರಕ್ಕು ಅಧಿಕ ವರ್ಷಗಳ ಹಿಂದೆ ಸಿದ್ರಾಮೇಶ್ವರ ಭಕ್ತರು ತೊಡುತ್ತಿದ್ದ ನೀಲುವಂಗಿಯೇ ಇಂದಿಗು ಇಲ್ಲಿ ಸಾಂಸ್ಕೃತಿಕ ದಿರಿಸಾಗಿದೆ. ಒಂದೇ ಒಂದು ಆಧುನಿಕ ಕಾಲದ ಶರ್ಟ್ ಬಟನ್ ಆಗಲಿ, ಪಾಲಿಸ್ಟರ್ ಬಟ್ಟೆಯಾಗಲಿ, ಫ್ಯಾಶನಿಕ್ ಹೊಲಿಗೆಯಾಗಲಿ ಇರುವುದಿಲ್ಲ. ಹಳೆ ಕಾಲದಂತೆಯೇ ಕಸಿ (ಟ್ಯಾಗ್) ಇರುವ ನೀಲುವಂಗಿಗಳನ್ನ ಬಳಕೆ ಮಾಡಲಾಗುತ್ತೆ. ವಿಶೇಷ ಆಕರ್ಷಣೆಯಾಗಿರುವ ನಂದಿಕೋಲುಗಳನ್ನ ಹಿಡಿಯುವವರು, ಕೊಂಡೊಯ್ಯುವವರು ಧರಿಸುವ ವೇಷಭೂಷಣಗಳು ಸಹ ಬಲು ಆಕರ್ಷನೀಯ.
ಮಂಗಮ್ಮಾಯಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆದಿದ್ದ ಸಿದ್ದೇಶ್ವರ ಶ್ರೀಗಳು
ಶತಮಾನಗಳ ಹಿಂದೆ ಸಿದ್ದರಾಮೇಶ್ವರ ಜಾತ್ರೆ ಆರಂಭಗೊಂಡಾಗ ಜನರು ತೊಡುತ್ತಿದ್ದ ವೇಷಭೂಷಣಗಳನ್ನೆ ಇಂದಿಗೂ ತೊಡವುದು ವಿಶೇಷ. ನೂರು ವರ್ಷಗಳ ಹಿಂದೆ ತೊಡುತ್ತಿದ್ದ ಧಿರಿಸನ್ನೆ ಇಂದಿಗೂ ಇಲ್ಲಿ ಯುವಕರು ತೊಡುವುದು ಗಮನಾರ್ಹ ಸಂಗತಿ. ಇನ್ನು ನಿಲುವಂಗಿ ತೊಟ್ಟವರು ಮಾತ್ರ ನಂದಿಕೋಲನ್ನ ಹಿಡಿದು ಸಾಗುವುದು ಇಲ್ಲಿನ ಪದ್ಧತಿಯಾಗಿದೆ.
ವಿಜಯಪುರದಲ್ಲಿ ಅದ್ದೂರಿ ಸಿದ್ದರಾಮೇಶ್ವರ ಜಾತ್ರೆ, ಸಂಕ್ರಾಂತಿ ಭೋಗಿ ಆಚರಣೆ
ಸಿದ್ದರಾಮೇಶ್ವರನ ನಂದಿಕೋಲುಗಳಿಗು ಭಕ್ತರು ಅವಿನಾಭಾವ ಸಂಬಂಧವಿದೆ. ಭಕ್ತರು ತಮ್ಮ ಕಷ್ಟ-ನಷ್ಟಗಳಿಗೆ ನಂದಿಕೋಲುಗಳ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಇನ್ನು ವಿಜಯಪುರ ನಗರದ ಹಳೆ ಓಣಿಗಳಾದ ಜಾಡರ ಓಣಿ, ಶಿಖಾರಖಾನೆ, ಅಡಕಿಗಲ್ಲಿ, ಮಠಪತಿ ಗಲ್ಲಿ ಒಟ್ಟು ಏಳು ಓಣಿಗಳಿಂದ ನಂದಿಕೋಲುಗಳು ಸೇರಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.