ಬೆಳಗಾವಿ: ಮತ್ತೆ ಉದ್ಧಟತನ ಮೆರೆದ ಮಹಾರಾಷ್ಟ್ರ ಸರ್ಕಾರ, ಗಡಿ ವಿವಾದಿತ ಪುಸ್ತಕ ಬಿಡುಗಡೆ

By Suvarna NewsFirst Published Jan 27, 2021, 1:52 PM IST
Highlights

'ರಹೆಂಗೇ ತೋ ಮಹಾರಾಷ್ಟ್ರ ಮೇ ನಹೀ ತೋ ಜೇಲ್ ಮೇ' ಎಂದು ಘೋಷಣೆ ಕೂಗಿದ ಎಂಇಎಸ್ ಪುಂಡರು| ಪುಸ್ತಕ ಬಿಡುಗಡೆಗೊಳಿಸಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ| ಮುಂಬೈನ ಮಲಬಾರ್ ಹಿಲ್‌ನಲ್ಲಿರುವ ಸಹ್ಯಾದ್ರಿ ರಾಜ್ಯ ಅತಿಥಿ ಗೃಹದಲ್ಲಿ ನಡೆದ ಸಮಾರಂಭ| 

ಬೆಳಗಾವಿ(ಜ.27): ಮಹಾರಾಷ್ಟ್ರ ಸರ್ಕಾರ ಗಡಿ ವಿವಾದದ ಬೆಂಕಿಗೆ ತುಪ್ಪ ಸುರಿಯುತ್ತಲೇ ಬಂದಿದೆ. ಇತ್ತೀಚಿಗಷ್ಟೇ ಕರ್ನಾಟಕ ಆಕ್ರಮಿತ ಬೆಳಗಾವಿ ಮತ್ತಿತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೊಂದು ಅಂತಹುದೇ ಕೆಲಸವೊಂದನ್ನ ಮಾಡುವ ಮೂಲಕ ಮತ್ತೊಮ್ಮೆ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನ ಮಾಡಿದೆ. 

ಇಂದು(ಬುಧವಾರ) ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕರ್ನಾಟಕ ಮಹಾರಾಷ್ಟ್ರ ವಿವಾದ ಬಗ್ಗೆ ಮಹಾರಾಷ್ಟ್ರ ಸರ್ಕಾರವೇ ಪುಸ್ತಕವೊಂದನನ್ನ ಬಿಡುಗಡೆ ಮಾಡಿದೆ. ಮುಂಬೈನ ಮಲಬಾರ್ ಹಿಲ್‌ನಲ್ಲಿರುವ ಸಹ್ಯಾದ್ರಿ ರಾಜ್ಯ ಅತಿಥಿ ಗೃಹದಲ್ಲಿ  ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ ಕರ್ನಾಟಕ ಸೀಮಾ ವಿವಾದ ಸಂಘರ್ಷ ಅನಿ ಸಂಕಲ್ಪ ಹೆಸರಿನ ಮರಾಠಿ ಪುಸ್ತಕವನ್ನ ಸಿಎಂ ಉದ್ಧವ್ ಠಾಕ್ರೆ ಬಿಡುಗಡೆಗೊಳಿಸಿದ್ದಾರೆ. ಡಾ.ದೀಪಕ್ ಕಮಲ್ ತಾನಾಜಿ ಪವಾರ್ ಸಂಪಾದಕತ್ವದಲ್ಲಿ ಮರಾಠಿ ಪುಸ್ತಕ ರಚಿತವಾಗಿದೆ. 

ಗಡಿ ಕಿಡಿ ಹೊತ್ತಿಸಲು ಮುಂದಾದ ಮಹಾರಾಷ್ಟ್ರ, ವಿವಾದಿತ ಪುಸ್ತಕ ಲೋಕಾರ್ಪಣೆ ಸಿದ್ಧತೆ!

ಕಾರ್ಯಕ್ರಮದಲ್ಲಿ ಸಿಎಂ ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಖಾನಾಪುರ ಕ್ಷೇತ್ರದ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್, ಎಂಇಎಸ್ ಮುಖಂಡ ದೀಪಕ್ ದಳವಿ, ದಿಗಂಬರ ಪಾಟೀಲ್, ಬೆಳಗಾವಿ ಶಿವಸೇನೆ ಘಟಕದ ಅಧ್ಯಕ್ಷ ಪ್ರಕಾಶ್ ಶಿರೋಡಕರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಸಮಾರಂಭಕ್ಕೆ ಬೆಳಗಾವಿಯ ಎಂಇಎಸ್ ಮುಖಂಡರಿಗೂ ಕೂಡ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದಲ್ಲಿ 'ರಹೆಂಗೇ ತೋ ಮಹಾರಾಷ್ಟ್ರ ಮೇ ನಹೀ ತೋ ಜೇಲ್ ಮೇ' ಎಂದು ಎಂಇಎಸ್ ಪುಂಡರು ಘೋಷಣೆ ಕೂಗಿದ್ದಾರೆ.  

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ

ಮಹಾರಾಷ್ಟ್ರ ಸರ್ಕಾರದ ವತಿಯಿಂದ ಗಡಿವಿವಾದ ಕುರಿತ ಪುಸ್ತಕ ಬಿಡುಗಡೆಯನ್ನ ಖಂಡಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಳಗಾವಿ ಜಿಲ್ಲೆ ಗೋಕಾಕ್‌ ನಗರದ ವಾಲ್ಮಿಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕರವೇ ಗೋಕಾಕ್ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಸ್ತಕದ ಮುಖಪುಟದ ಭಾವಚಿತ್ರವನ್ನ ದಹಿಸುವ ಮೂಲಕ ಕಾರ್ಯಕರ್ತರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. 
 

click me!