20 ದಿನಗಳ ಹಿಂದಷ್ಟೆ 2 ಸಾವಿರ ಎಕರೆಯ ಆ ಬೃಹತ್ ಕೆರೆ ಖಾಲಿ... ಖಾಲಿ... ಆಗಿತ್ತು.ಆದ್ರೆ, ಇಂದು. ನೋಡೋ ಕಣ್ಗಳಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಕೆರೆ ತುಂಬಿ ತುಳುಕುತ್ತಿದ್ದು ಕೋಡಿ ಬಿದ್ದಿದೆ. ಇತಿಹಾಸದಲ್ಲಿ ಪೂರ್ವಿಕರು ಕಟ್ಟಿದ್ದ ಪದಕ್ಕೆ ಒಂದಿಷ್ಟು ಚ್ಯುತಿ ಬಾರದಂತೆ ಕೆರೆ ತುಂಬಿ ಕೋಡಿ ಬಿದ್ದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.05): ಪ್ರಕೃತಿ ಮುಂದೆ ಎಲ್ಲವೂ ಶೂನ್ಯ. ಅದೇ ಪ್ರಕೃತಿ ಮನಸ್ಸು ಮಾಡಿದ್ರೆ ಏನ್ ಬೇಕಾದ್ರು ಮಾಡುತ್ತೆ ಅನ್ನೋದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮದಗದಕೆರೆ ಸಾಕ್ಷಿಯಾಗಿದೆ. ಯಾಕಂದ್ರೆ, 20 ದಿನಗಳ ಹಿಂದಷ್ಟೆ 2 ಸಾವಿರ ಎಕರೆಯ ಆ ಬೃಹತ್ ಕೆರೆ ಖಾಲಿ... ಖಾಲಿ... ಆಗಿತ್ತು.ಆದ್ರೆ, ಇಂದು. ನೋಡೋ ಕಣ್ಗಳಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಕೆರೆ ತುಂಬಿ ತುಳುಕುತ್ತಿದ್ದು ಕೋಡಿ ಬಿದ್ದಿದೆ. ಇತಿಹಾಸದಲ್ಲಿ ಪೂರ್ವಿಕರು ಕಟ್ಟಿದ್ದ ಪದಕ್ಕೆ ಒಂದಿಷ್ಟು ಚ್ಯುತಿ ಬಾರದಂತೆ ಕೆರೆ ತುಂಬಿ ಕೋಡಿ ಬಿದ್ದಿದೆ.
undefined
ಕೆರೆಯ ಬಳಿ ಸೆಲ್ಫಿ ಕ್ರೇಜಿ, ರೀಲ್ಸ್ ಹಿನ್ನೆಲೆ : ಪೊಲೀಸರ ನಿಯೋಜನೆ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮದಗದ ಕೆರೆ. ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಅಂತು ಇತಿಹಾಸದಲ್ಲಿ ಪೂರ್ವಿಕರು ಪದ ಕಟ್ಟಿದ್ದು ಇದೇ ಕೆರೆ. ಈ ಕೆರೆಗೆ ಬರೋದು ಮಾಯದಂತಹಾ ಮಳೆಯೆ. ಯಾಕಂದ್ರೆ, ಈ ಕೆರೆ ಇರೋದು ಬಯಲುಸೀಮೆ ಭಾಗದಲ್ಲಿ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ-ದತ್ತಪೀಠದ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಈ ಕೆರೆಗೆ ಅಲ್ಲಿ ಸುರಿಯುವ ಮಳೆಯೇ ಜೀವಾಳ. ಕಳೆದ 15 ದಿನಗಳ ಹಿಂದೆ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ 336 ಹೆಕ್ಟೇರ್, 2036 ಎಕರೆ ವಿಸ್ತೀರ್ಣದ ಈ ಕೆರೆ ನೋಡ-ನೋಡ್ತಿದ್ದಂತೆ ರಾತ್ರೋರಾತ್ರಿ ತುಂಬಿ ಕೋಡಿ ಬಿದ್ದಿದ್ದು ಪ್ರವಾಸಿ ತಾಣವಾಗಿದೆ. ಸುತ್ತಮುತ್ತಲಿನ ಜನ ಬಂದು ಕೆರೆ ನೋಡಿ ಸೆಲ್ಫಿ ಹೊಡೆದುಕೊಂಡು ಖುಷಿ ಪಡ್ತಿದ್ದಾರೆ. ಸೆಲ್ಫಿ ಕ್ರೇಜಿನ ಮಧ್ಯೆ ಯಾವುದೇ ಅನಾಹುತವಾಗ್ಬಾರ್ದು ಅಂತ ಸ್ಥಳದಲ್ಲಿ ಪೊಲೀಸ್ ಕೂಡ ಮೊಕ್ಕಾಂ ಹೂಡಿದ್ದಾರೆ.
ಚಿಕ್ಕಮಗಳೂರು: ಸುಡುಗಾಡು ಸಿದ್ಧರ ಮಹಿಳೆಯ ಕೃಷಿ ಸಾಧನೆ
ಐತಿಹಾಸಕ ಮದಗದಕೆರೆ ಕೋಡಿ ರೈತಾಪಿ ವರ್ಗದಲ್ಲಿ ಹರ್ಷ
20 ದಿನಗಳ ಹಿಂದೆ ಈ ಕೆರೆ ನೋಡಿದ್ದ ಸ್ಥಳೀಯರು ಈ ಬಾರಿ ಬರಗಾಲ ಫಿಕ್ಸ್. ಕೆರೆ ತುಂಬಲ್ಲ ಎಂದೇ ಭಾವಿಸಿದ್ರು. ಆದ್ರೆ, ಜುಲೈ 10ರ ನಂತರ ಆರಂಭವಾದ ಮಳೆ ಪಶ್ಚಿಮಘಟ್ಟಗಳ ಸಾಲಿನಲ್ಲಿ ನಿರಂತರವಾಗಿ ಧಾರಾಕಾರವಾಗಿ ಸುರಿದ ಪರಿಣಾಮ 2 ಸಾವಿರ ಎಕರೆ ವಿಸ್ತೀರ್ಣದ ಕೆರೆ 20 ದಿನದಲ್ಲೇ ತುಂಬಿ ಕೋಡಿ ಬಿದ್ದಿದೆ. ಈ ಕೆರೆ ತುಂಬಿರೋದ್ರಿಂದ ಸುತ್ತಮುತ್ತಲಿನ 23 ಹಳ್ಳಿಯ ಜನ-ಜಾನುವಾರುಗಳಿಗೆ ಕುಡಿಯೋ ನೀರಿಗೆ ಆಸರೆಯಾದಂತಾಗಿದೆ. ಹೊಲಗದ್ದೆ-ತೋಟ ಹಾಗೂ ಬೋರ್ಗಳಿಗೆ ಚೈತನ್ಯ ಬಂದಂತಾಗಿದೆ. ಕೆರೆಗೆ ನೀರು ಬಂದಿರೋದ್ರಿಂದ ಸುತ್ತಮುತ್ತಲಿನ ಸಾವಿರಾರು ಎಕರೆ ತೋಟಗಳಿಗೆ ನೀರಿನ ಸಮಸ್ಯೆ ನೀಗಿದಂತಾಗಿದೆ. ಇಲ್ಲಿ ಕೋಡಿ ಬಿದ್ದ ನೀರು ವೇದಾವತಿ ನದಿ ಸೇರಿ ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಡ್ಯಾಂ ಸೇರಲಿದೆ. ಸುಮಾರು 2 ಸಾವಿರ ಎಕರೆ ವಿಸ್ತೀರ್ಣ, 80 ಅಡಿ ಆಳದ ಬೃಹತ್ ಕೆರೆ ತುಂಬಿರೋದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಒಟ್ಟಾರೆ, ಶತಮಾನಗಳಿಂದಲೂ ಈ ಕೆರೆ ಗಾಳಿಗೆ ತುಂಬುತ್ತೆ ಅನ್ನೋದು ಸ್ಥಳಿಯರ ನಂಬಿಕೆ. ಯಾಕಂದ್ರೆ, ಬಯಲುಸೀಮೆ ಭಾಗದಲ್ಲಿ ಇರೋ ಈ ಕೆರೆ ಮಳೆ ಬರದಿದ್ರು ತುಂಬುತ್ತೆ ಅನ್ನೋದು ಈ ಕೆರೆಯ ವಿಶೇಷ. ಮುಳ್ಳಯ್ಯನಗಿರಿ ಭಾಗದಲ್ಲಿ ಸುರಿಯುವ ಮಳೆಯೇ ಈ ಕೆರೆಗೆ ಜೀವಾಳ. ಅದೇನೆ ಇದ್ರು, ಕಳೆದ 20 ದಿನಗಳ ಹಿಂದಷ್ಟೆ ಸಂಪೂರ್ಣ ಖಾಲಿಯಾಗಿದ್ದ ಕೆರೆ ಇಂದು ತುಂಬಿ ಕೋಡಿ ಬಿದ್ದಿರೋದ್ರಿಂದ ಸುತ್ತಮುತ್ತಲಿನ ಜನಸಾಮಾನ್ಯರು, ಸ್ಥಳೀಯರು ಮೊಗದಲ್ಲಿ ಮಂದಹಾಸ ಮೂಡಿದೆ.