ಮಂಡ್ಯ: ನೀರಾವರಿ ಸಲಹಾ ಸಮಿತಿ ಸಭೆಗೆ ನಿರುತ್ಸಾಹ

By Kannadaprabha News  |  First Published Aug 5, 2023, 11:00 PM IST

ಕೃಷ್ಣರಾಜಸಾಗರ ಜಲಾಶಯದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ 90 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಈಗ ಜಲಾಶಯದಲ್ಲಿ 114 ಅಡಿಯವರೆಗೆ ನೀರು ಸಂಗ್ರಹವಾಗಿದೆ. ಬಿತ್ತನೆ ಚಟುವಟಿಕೆಗೆ ಅನುಕೂಲವಾಗುವಂತೆ ಅಣೆಕಟ್ಟೆಯಿಂದ ನೀರನ್ನು ಬಿಡುಗಡೆ ಮಾಡುವ ಅವಶ್ಯಕತೆ ಇದೆ. ಆದರೆ, ನೀರಾವರಿ ಸಲಹಾ ಸಮಿತಿ ಸಭೆ ಕರೆಯುವುದಕ್ಕೆ ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.


ಮಂಡ್ಯ ಮಂಜುನಾಥ

ಮಂಡ್ಯ(ಆ.05):  ಮುಂಗಾರು ಮಳೆ ವೈಫಲ್ಯದಿಂದ ಕಂಗೆಟ್ಟಿರುವ ಜಿಲ್ಲೆಯ ರೈತ ಸಮೂಹ ಇದೀಗ ನೀರಿಗಾಗಿ ಕೃಷ್ಣರಾಜಸಾಗರ ಅಣೆಕಟ್ಟೆಯತ್ತ ದೃಷ್ಟಿನೆಟ್ಟಿದೆ. ನೀರು ಬಿಡುಗಡೆಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಯಬೇಕಿದೆ. ಸಭೆ ಕರೆಯಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ವಹಿಸಿದಂತೆ ಕಂಡುಬರುತ್ತಿದ್ದಾರೆ.

Latest Videos

undefined

ಆಗಸ್ಟ್‌ ಮೊದಲವಾರ ಕಳೆದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಬಿತ್ತನೆ ಚಟುವಟಿಕೆಗಳು ಕುಂಠಿತಗೊಂಡಿವೆ. ಭೂಮಿಯನ್ನು ಹದಗೊಳಿಸುವುದಕ್ಕೂ ರೈತರಿಗೆ ನೀರು ದೊರಕದಂತಾಗಿದೆ. ಮಳೆ ಮಾಯವಾಗಿರುವುದರಿಂದ ಬಿತ್ತನೆಗೆ ಕೆಆರ್‌ಎಸ್‌ ಅಣೆಕಟ್ಟೆಯ ನೀರನ್ನೇ ಅವಲಂಬಿಸುವಂತಾಗಿದೆ.

MANDYA NEWS: ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ ಆತ್ಮಾಹುತಿಗೆ ರೈತ ಯತ್ನ!

ಸಭೆ ಕರೆಯದೆ ಕಾಲಹರಣ:

ಕೃಷ್ಣರಾಜಸಾಗರ ಜಲಾಶಯದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ 90 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಈಗ ಜಲಾಶಯದಲ್ಲಿ 114 ಅಡಿಯವರೆಗೆ ನೀರು ಸಂಗ್ರಹವಾಗಿದೆ. ಬಿತ್ತನೆ ಚಟುವಟಿಕೆಗೆ ಅನುಕೂಲವಾಗುವಂತೆ ಅಣೆಕಟ್ಟೆಯಿಂದ ನೀರನ್ನು ಬಿಡುಗಡೆ ಮಾಡುವ ಅವಶ್ಯಕತೆ ಇದೆ. ಆದರೆ, ನೀರಾವರಿ ಸಲಹಾ ಸಮಿತಿ ಸಭೆ ಕರೆಯುವುದಕ್ಕೆ ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಅಣೆಕಟ್ಟೆ ಭರ್ತಿಯಾಗುವ ಹಂತ ತಲುಪುವುದಕ್ಕೆ ಇನ್ನೂ 10 ಅಡಿ ಬಾಕಿ ಇದೆ. ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆ ಈ ಬಾರಿ ಅಣೆಕಟ್ಟು ತುಂಬುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಅಣೆಕಟ್ಟೆಯಲ್ಲಿ 114 ಅಡಿ ನೀರು ಸಂಗ್ರಹವಾಗಿದ್ದರೂ ಮುಂಗಾರು ಹಂಗಾಮಿಗೆ ನೀರು ಹರಿಸುವ ಬಗ್ಗೆ ಜನಪ್ರತಿನಿಧಿಗಳು ಮೌನ ವಹಿಸಿರುವುದಕ್ಕೆ ಕಾರಣವೇನೆಂದು ತಿಳಿಯುತ್ತಿಲ್ಲ.

ಇಳುವರಿ ಕುಸಿಯುವ ಭಯ:

ಕೃಷಿ ಚಟುವಟಿಕೆಯಲ್ಲಿ ಭತ್ತದ ಬಿತ್ತನೆಯನ್ನು ಯಾವ ಸಮಯದಲ್ಲಾದರೂ ಮಾಡಲು ಸಾಧ್ಯವಿಲ್ಲ. ನಿರ್ದಿಷ್ಟಸಮಯಕ್ಕೆ ಬಿತ್ತನೆ ಮಾಡಿದರೆ ಕಾಳು ಕಟ್ಟಿಇಳುವರಿಯೂ ಉತ್ತಮವಾಗಿ ಬರುತ್ತದೆ. ಬಿತ್ತನೆ ವಿಳಂಬವಾದರೆ ಇಳುವರಿ ಕುಸಿತಗೊಳ್ಳುವ ಆತಂಕ ರೈತರಲ್ಲಿ ಮನೆಮಾಡಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯೊಳಗೆ ನಿರೀಕ್ಷಿತ ಪ್ರಮಾಣದ ಬಿತ್ತನೆ ನಡೆಯದಿರುವುದು ವಿಪಯಾಸದ ಸಂಗತಿಯಾಗಿದೆ.
ನಿಗದಿತ ಸಮಯಕ್ಕೆ ನೀರು ಬಿಡುಗಡೆ ಮಾಡದೆ ಬಿತ್ತನೆ ಅವಧಿ ಮುಗಿದ ಬಳಿಕ ನೀರು ಕೊಟ್ಟರೂ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಕೆಆರ್‌ಎಸ್‌ ಅಣೆಕಟ್ಟೆಯಿಂದ ಶೀಘ್ರ ನೀರು ಬಿಡುಗಡೆ ಮಾಡಬೇಕೆಂಬ ಕೂಗು ರೈತ ಸಮುದಾಯದಿಂದ ಕೇಳಿಬರಲಾರಂಭಿಸಿದೆ.

ಸಭೆ ನಡೆಯಬೇಕಿತ್ತು:

ಮಳೆ ಕೊರತೆ ಎದುರಾದಾಗಲೆಲ್ಲಾ ಸಾಮಾನ್ಯವಾಗಿ ಜುಲೈ ಅಂತ್ಯದ ವೇಳೆಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತಿತ್ತು. ನಾಲ್ಕು ವರ್ಷದಿಂದ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಈಗ ನೀರಿನ ಸಮಸ್ಯೆ ಎದುರಾಗಿರುವುದರಿಂದ ರೈತರು ಒಟ್ಲು ಹಾಕಿಕೊಳ್ಳುವುದಕ್ಕೆ, ನಾಟಿ ಮಾಡುವುದಕ್ಕೆ ಸಂಬಂಧಿಸಿದಂತೆ ಅಣೆಕಟ್ಟೆಯಲ್ಲಿರುವ ನೀರಿನ ಸಂಗ್ರಹವನ್ನು ಆಧರಿಸಿ ನಿರ್ದಿಷ್ಟಲೆಕ್ಕಾಚಾರದೊಂದಿಗೆ ನೀರು ಹರಿಸುವ ಬಗ್ಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಪ್ರಕಟವಾಗಬೇಕಿತ್ತು. ಆ ನಿಟ್ಟಿನಲ್ಲಿ ಪ್ರಯತ್ನಗಳೇ ನಡೆಯದಿರುವುದು ರೈತ ಸಮೂಹವನ್ನು ದೃತಿಗೆಡಿಸುವಂತೆ ಮಾಡಿದೆ.
ಪ್ರಸ್ತುತ ನಾಲೆಯಲ್ಲಿ ನೀರು ಹರಿಯುತ್ತಿದ್ದರೂ ಯಾವಾಗ ನಿಲುಗಡೆ ಮಾಡುವರೆಂಬ ಭಯ ರೈತರನ್ನು ಕಾಡುತ್ತಲೇ ಇದೆ. ಬೆಳೆಗಳಿಗೆ ನೀರು ಹರಿಸುವ ಸಂಬಂಧ ನೀರಾವರಿ ಸಲಹಾ ಸಮಿತಿ ಸಭೆ ನಡೆದರಷ್ಟೇ ಅವರಿಗೆ ಧೈರ್ಯಬರಲು ಸಾಧ್ಯವಾಗಲಿದೆ.

ಬಿತ್ತನೆ ಬೀಜ ವಿತರಿಸುತ್ತಿಲ್ಲ:

ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಸ್ಪಷ್ಟತೀರ್ಮಾನ ಕೈಗೊಳ್ಳುವವರೆಗೆ ಕೃಷಿ ಇಲಾಖೆ ರೈತರಿಗೆ ಬಿತ್ತನೆ ಬೀಜ ವಿತರಿಸುವುದಿಲ್ಲ. ಹೀಗಾಗಿ ಹಲವು ರೈತರು ಖಾಸಗಿಯವರಿಂದ ಬಿತ್ತನೆ ಬೀಜ ಖರೀದಿಸಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಕಳ್ಳಾಟವಾಡುತ್ತಿರುವುದರಿಂದ ರೈತರು ಗೊಂದಲದಲ್ಲಿ ಮುಳುಗಿದ್ದಾರೆ. ಸಭೆ ಕರೆಯುವ ದಿನಾಂಕ ಖಚಿತವಾಗದೆ, ನೀರು ಹರಿಸುವ ಕುರಿತು ಸ್ಪಷ್ಟಚಿತ್ರಣ ಹೊರಬೀಳದೆ ಬಿತ್ತನೆ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆಯೂ ರೈತರು ಆತಂಕಗೊಂಡಿದ್ದಾರೆ.

ಮುಂದಿನ ಬುಧವಾರದೊಳಗೆ ಸಭೆ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ನೀರು ಕೊಡುವ ಸಂಬಂಧ ಮುಂದಿನ ಬುಧವಾರದ ವೇಳೆಗೆ ಸಭೆ ಕರೆಯಲಾಗುವುದು. ನಮ್ಮ ನಿರೀಕ್ಷೆಯಂತೆ ಮಳೆ ಬಂದಿಲ್ಲ. ಕೆಆರ್‌ಎಸ್‌ ಭರ್ತಿಯಾಗಿಲ್ಲ. ಸಂಗ್ರಹವಾಗಿರುವ ನೀರನ್ನು ಗಮನದಲ್ಲಿಟ್ಟುಕೊಂಡು ಭತ್ತಕ್ಕೆ ನೀರು ಕೊಡೋದಾ, ರಾಗಿಗೆ ನೀರು ಕೊಡೋದಾ ಎಂದು ಚಿಂತಿಸುತ್ತಿದ್ದೇವೆ. ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮಂಡ್ಯ: ಕೆ.ಆರ್‌. ಪೇಟೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರ ಮಾರಾಮಾರಿ..!

ಗೆಲುವಿನ ಹುಮ್ಮಸ್ಸಿನಿಂದ ಹೊರಬಂದಿಲ್ಲ

ಜಿಲ್ಲೆಯಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಇನ್ನೂ ಗೆಲುವಿನ ಹುಮ್ಮಸ್ಸಿನಿಂದ ಹೊರಬಂದಿಲ್ಲ. ಅವರಿಗೆ ರೈತರ ಬಗ್ಗೆ ಚಿಂತೆಯೂ ಇಲ್ಲ. ನೀರಾವರಿ ಸಲಹಾ ಸಮಿತಿ ಸಭೆ ಕರೆದು ಮುಂಗಾರು ಹಂಗಾಮಿಗೆ ನೀರು ಹರಿಸಿ ರೈತರ ಬದುಕನ್ನು ರಕ್ಷಣೆ ಮಾಡುವ ಕಾಳಜಿಯೇ ಇಲ್ಲದಂತಾಗಿದೆ. ಈಗಾಗಲೇ ಸಭೆ ಕರೆದು ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಬೇಕಿತ್ತು. ಯಾರೇ ಅಧಿಕಾರಕ್ಕೆ ಬಂದರೂ ಬಲಿಪಶುವಾಗುವುದು ರೈತ ಎಂಬ ಮಾತು ಸುಳ್ಳಲ್ಲ ಅಂತ ರೈತ ಮುಖಂಡ ಕೆ.ಎಸ್‌.ನಂಜುಂಡೇಗೌಡ ಹೇಳಿದ್ದಾರೆ.

ಕೃಷಿ ಬಗ್ಗೆ ಜ್ಞಾನವೇ ಇಲ್ಲ

ಅಧಿಕಾರದಲ್ಲಿರುವವರಿಗೆ ಕೃಷಿಯ ಬಗ್ಗೆ ಜ್ಞಾನವೇ ಇಲ್ಲ. ರೈತರು ಯಾವ ಸಮಯದಲ್ಲಿ ಬಿತ್ತನೆ ಮಾಡುತ್ತಾರೆ. ನಾವು ಯಾವ ಸಮಯದಲ್ಲಿ ಅವರಿಗೆ ನೀರು ಕೊಡಬೇಕು ಎಂಬ ಅರಿವಿದ್ದಿದ್ದರೆ ಈ ವೇಳೆಗೆ ಸಭೆ ಕರೆಯಬೇಕಿತ್ತು. ಅವರಿಗೆ ರೈತರ ಹಿತಕ್ಕಿಂತಲೂ ವರ್ಗಾವಣೆ ಬಗ್ಗೆಯೇ ಹೆಚ್ಚು ಆಸಕ್ತಿ. ನೀರಾವರಿ ಅಧಿಕಾರಿಗಳೂ ಅದೇ ಗುಂಗಿನಲ್ಲಿ ಓಡಾಡುತ್ತಿದ್ದಾರೆ. ಇನ್ನು ರೈತರ ಪರಿಸ್ಥಿತಿಯನ್ನು ಕೇಳೋರು ಯಾರು? ಎಂದು ರೈತ ನಾಗರಾಜು ಹನಿಯಂಬಾಡಿ ತಿಳಿಸಿದ್ದಾರೆ.

click me!